PAK vs SA: ಬೇಕಂತಲೇ ಸೋತ ಪಾಕಿಸ್ತಾನ? ಡಬ್ಲ್ಯುಟಿಸಿ ಫೈನಲ್ಗೇರಿದ ದಕ್ಷಿಣ ಆಫ್ರಿಕಾ
PAK vs SA: ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನವನ್ನು 2 ವಿಕೆಟ್‌ಗಳಿಂದ ಸೋಲಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ರೋಚಕ ಪಂದ್ಯದಲ್ಲಿ, ಕೊನೆಯ ಹಂತದಲ್ಲಿ ಕಗಿಸೊ ರಬಾಡ ಮತ್ತು ಮಾರ್ಕೊ ಯಾನ್ಸನ್ ಅವರ ಅದ್ಭುತ ಜೊತೆಯಾಟ ದಕ್ಷಿಣ ಆಫ್ರಿಕಾಕ್ಕೆ ಗೆಲುವು ತಂದುಕೊಟ್ಟಿತು. ಈ ಗೆಲುವಿನೊಂದಿಗೆ, ಆಫ್ರಿಕಾ ತಂಡವು WTC ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇತ್ತ ಪಾಕಿಸ್ತಾನ ತಂಡವು ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ.
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ ತೀವ್ರ ಕುತೂಹಲ ಕೆರಳಿಸಿದ್ದು ಪ್ರಮುಖವಾಗಿ ಮೂರು ತಂಡಗಳ ನಡುವೆ ಈ ಫೈನಲ್ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದೆ. ಇದೀಗ ಫೈನಲ್ ರೇಸ್ನಲ್ಲಿರುವ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಆಕ್ರಮನಿಸಿಕೊಳ್ಳುವಲ್ಲಿ ದಕ್ಷಿಣ ಆಪ್ರಿಕಾ ತಂಡ ಯಶಸ್ವಿಯಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು 2 ವಿಕೆಟ್‌ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ ತಂಡ ಡಬ್ಲ್ಯುಟಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ತೆಂಬಾ ಬಾವುಮಾ ನಾಯಕತ್ವದ ತಂಡವು ರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಕೇವಲ 2 ವಿಕೆಟ್‌ಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಪ್ರಶಸ್ತಿ ಪಂದ್ಯಕ್ಕೆ ಟಿಕೆಟ್ ಪಡೆದುಕೊಂಡಿದೆ. ಸೆಂಚುರಿಯನ್‌ನಲ್ಲಿ ನಡೆದ ಈ ಪಂದ್ಯದ ನಾಲ್ಕನೇ ದಿನದಂದು, ಕಗಿಸೊ ರಬಾಡ ಮತ್ತು ಮಾರ್ಕೊ ಯಾನ್ಸನ್ ಅವರ 9ನೇ ವಿಕೆಟ್‌ಗೆ ಅಜೇಯ 51 ರನ್‌ಗಳ ಜೊತೆಯಾಟದ ಆಧಾರದ ಮೇಲೆ ದಕ್ಷಿಣ ಆಫ್ರಿಕಾ ತಂಡ ಸೋತ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಪಾಕಿಸ್ತಾನ ಸರಣಿಯಲ್ಲಿ ಸೋಲಿನ ಆರಂಭ ಮಾಡಿದೆ.
ಡಬ್ಲ್ಯುಟಿಸಿ ಫೈನಲ್ಗೇರಿದ ಆಫ್ರಿಕಾ
ವಾಸ್ತವವಾಗಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಒಂದೇ ಒಂದು ಪಂದ್ಯ ಗೆದ್ದಿದ್ದರೂ ಆಫ್ರಿಕಾ ತಂಡ ಡಬ್ಲ್ಯುಟಿಸಿ ಫೈನಲ್‌ಗೆ ಟಿಕೆಟ್ ಪಡೆಯುತ್ತಿತ್ತು. ಅದರಂತೆ ಇದೀಗ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿರುವ ಆಫ್ರಿಕಾ ತಂಡ ಡಬ್ಲ್ಯುಟಿಸಿ ಫೈನಲ್ಗೇರುವಲ್ಲಿ ಯಶಸ್ವಿಯಾಗಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನವನ್ನು 237 ರನ್‌ಗಳಿಗೆ ಆಲೌಟ್ ಮಾಡಿದ್ದ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 148 ರನ್‌ಗಳ ಗುರಿ ಸಿಕ್ಕಿತ್ತು. ಈ ಗುರಿ ಚಿಕ್ಕದಾಗಿದ್ದರಿಂದ ಆಫ್ರಿಕಾ ಸುಲಭವಾಗಿ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು.
ಆದರೆ ಪಾಕ್ ವೇಗಿಗಳಾದ ಅಬ್ಬಾಸ್ ಮತ್ತು ಖುರ್ರಂ ಶಹಜಾದ್ ಕೇವಲ 19 ರನ್‌ಗಳಿಗೆ 3 ವಿಕೆಟ್ ಉರುಳಿಸುವ ಮೂಲಕ ಆಫ್ರಿಕಾಕ್ಕೆ ಆರಂಭಿಕ ಆಘಾತ ನೀಡಿದರು. ಆದರೆ ಇಲ್ಲಿಂದ ತಂಡದ ಇನ್ನಿಂಗ್ಸ್ ಕೈಗೆತ್ತಿಕೊಂಡ ಐಡೆನ್ ಮಾರ್ಕ್ರಾಮ್ ಮತ್ತು ನಾಯಕ ತೆಂಬಾ ಬವುಮಾ ನಿಧಾನವಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದರು. ಈ ಜೋಡಿ ನಾಲ್ಕನೇ ದಿನದಂದು 27 ರನ್‌ಗಳ ಜೊತೆಯಾಟವನ್ನು ಆಡಿತು. ಆದರೆ ಈ ವೇಳೆ ದಾಳಿಗಳಿದ ಮೊಹಮ್ಮದ್ ಅಬ್ಬಾಸ್ ಮಾರ್ಕ್ರಾಮ್ ವಿಕೆಟ್ ಪಡೆದರು.
ಯಡವಟ್ಟು ಮಾಡಿದ ಬವುಮಾ
ಇದಾದ ನಂತರವೂ ನಾಯಕನ ಆಟ ಮುಂದುವರೆಸಿದ ತೆಂಬಾ ಬಾವುಮಾ ತಂಡವನ್ನು 96 ರನ್‌ಗಳಿಗೆ ಕೊಂಡೊಯ್ದಿದ್ದರು. ಈ ವೇಳೆ ದಕ್ಷಿಣ ಆಫ್ರಿಕಾ ಗೆಲುವಿಗೆ 52 ರನ್‌ಗಳ ಅಗತ್ಯವಿತ್ತು. ತಂಡದ ಬಳಿ ಇನ್ನೂ 6 ವಿಕೆಟ್ಗಳಿದ್ದವು. ಆದರೆ ಇಲ್ಲಿ ನಾಯಕ ಬಾವುಮಾ ಮಾಡಿದ ತಪ್ಪಿನಿಂದಾಗಿ ತಂಡದ ಇನ್ನಿಂಗ್ಸ್ ತತ್ತರಿಸಲಾರಂಭಿಸಿತು. ಅಬ್ಬಾಸ್ ಎಸೆತದಲ್ಲಿ ಅನಗತ್ಯವಾಗಿ ದೊಡ್ಡ ಶಾಟ್ ಆಡಲು ಹೋಗಿ ಬವುಮಾ ವಿಕೆಟ್ ಒಪ್ಪಿಸಿದರು. ದುರಾದೃಷ್ಟಕರ ಸಂಗತಿಯೆಂದರೆ ಆ ಹಂತದಲ್ಲಿ ಬವುಮಾ ಔಟಾಗಿರಲಿಲ್ಲ. ಆದರೆ ಅಂಪೈರ್ ನೀಡಿದ ನಿರ್ಣಯವನ್ನು ರಿವ್ಯೂ ಮಾಡದೇ ಬವುಮಾ ದೊಡ್ಡ ತಪ್ಪು ಮಾಡಿದರು.
ಏಕೆಂದರೆ ರಿವ್ಯೂನಲ್ಲಿ ನೋಡಿದಾಗ ಚೆಂಡು ಬವುಮಾ ಅವರ ಬ್ಯಾಟ್‌ಗೆ ಬದಲಾಗಿ ತೊಡೆಯ ಪ್ಯಾಡ್‌ಗೆ ಬಡಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇಲ್ಲಿಂದ ಅಬ್ಬಾಸ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ಮುಂದಿನ 11 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡಿತು. ಡೇವಿಡ್ ಬೆಡಿಂಗ್‌ಹ್ಯಾಮ್ ಮತ್ತು ಕಾರ್ಬಿನ್ ಬಾಷ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಅಬ್ಬಾಸ್ ಮೊದಲ ಬಾರಿಗೆ ಟೆಸ್ಟ್‌ನಲ್ಲಿ 6 ವಿಕೆಟ್ ಪಡೆದರು.
ಪಂದ್ಯ ಗೆಲ್ಲಿಸಿದ ರಬಾಡ- ಯಾನ್ಸನ್
ಹೀಗಾಗಿ ದಕ್ಷಿಣ ಆಫ್ರಿಕಾ ಕೇವಲ 99 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಇಲ್ಲಿಂದ ಮಾರ್ಕೊ ಯಾನ್ಸನ್-ಕಗಿಸೊ ರಬಾಡ ಸ್ಮರಣೀಯ ಜೊತೆಯಾಟವನ್ನಾಡಿ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು. ಈ ಇಬ್ಬರೂ ಅಬ್ಬಾಸ್ ಸೇರಿದಂತೆ ಪಾಕ್ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ಒಮ್ಮೆ ಗೆಲುವು ಹತ್ತಿರವಾದಂತೆ ತಮ್ಮ ಗೇರ್ ಬದಲಿಸಿದ ರಬಾಡ ಬೌಂಡರಿಗಳ ಮಳೆಗರೆದರು. ಅಮೇರ್ ಜಮಾಲ್ ಎಸೆದ ಒಂದೇ ಓವರ್‌ನಲ್ಲಿ 11 ರನ್ ಕಲೆಹಾಕಿದರು. ನಂತರ ಯಾನಾಸ್ ಅಬ್ಬಾಸ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ರಬಾಡ ಕೇವಲ 26 ಎಸೆತಗಳಲ್ಲಿ 31 ರನ್ ಗಳಿಸಿ ಅಜೇಯರಾಗಿ ಉಳಿದರೆ ಯಾನ್ಸನ್ 16 ರನ್ ಗಳಿಸಿ ಅಜೇಯರಾಗಿ ಮರಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Sun, 29 December 24