IND vs BAN: ಭಾರತ ಯುವ ಪಡೆಗೆ ಸುಲಭ ತುತ್ತಾದ ಬಾಂಗ್ಲಾದೇಶ

|

Updated on: Oct 06, 2024 | 10:20 PM

India vs Bangladesh 1st T20I: ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ, ಇದೀಗ ಟಿ20 ಸರಣಿಯ ಮೊದಲ ಪಂದ್ಯದಲ್ಲಿಯೂ ಹೀನಾಯ ಸೋಲನ್ನು ಅನುಭವಿಸಿದೆ. ಗ್ವಾಲಿಯರ್‌ನಲ್ಲಿ ನಡೆದ ಈ ಪಂದ್ಯವನ್ನು ಭಾರತ ತಂಡ 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

IND vs BAN: ಭಾರತ ಯುವ ಪಡೆಗೆ ಸುಲಭ ತುತ್ತಾದ ಬಾಂಗ್ಲಾದೇಶ
ಭಾರತ- ಬಾಂಗ್ಲಾದೇಶ
Follow us on

ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ, ಇದೀಗ ಟಿ20 ಸರಣಿಯ ಮೊದಲ ಪಂದ್ಯದಲ್ಲಿಯೂ ಹೀನಾಯ ಸೋಲನ್ನು ಅನುಭವಿಸಿದೆ. ಗ್ವಾಲಿಯರ್‌ನಲ್ಲಿ ನಡೆದ ಈ ಪಂದ್ಯವನ್ನು ಭಾರತ ತಂಡ 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸ್ಫೋಟಕ ಇನ್ನಿಂಗ್ಸ್ ಆಡಿ ಭರ್ಜರಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇನ್ನು ಚೊಚ್ಚಲ ಪಂದ್ಯದಲ್ಲಿಯೇ ವೇಗಿ ಮಯಾಂಕ್ ಯಾದವ್ ಮತ್ತು ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅದ್ಭುತ ಪ್ರದರ್ಶನ ನೀಡಿದರೆ, 3 ವರ್ಷಗಳ ನಂತರ ತಂಡಕ್ಕೆ ಮರಳಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಪ್ರಮುಖ 3 ವಿಕೆಟ್​​ ಕಬಳಿಸಿದರು. ಇವರ ಆಟದಿಂದಾಗಿ ಭಾರತ ತಂಡ ಇನ್ನು 49 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.

ಅರ್ಷದೀಪ್- ವರುಣ್ ದಾಳಿ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಅರ್ಷದೀಪ್ ದಾಳಿಗೆ ನಲುಗಿತು. ಇದರಿಂದ ಬಾಂಗ್ಲಾ ತಂಡವು ಕೊನೆಯವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ತಂಡ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ಅರ್ಷದೀಪ್ ಜೊತೆಗೆ ಮೂರು ವರ್ಷಗಳ ನಂತರ ಟೀಂ ಇಂಡಿಯಾ ಪರ ಟಿ20 ಪಂದ್ಯವನ್ನು ಆಡಿದ ವರುಣ್ ಚಕ್ರವರ್ತಿ ತಮ್ಮ ಗೂಗ್ಲಿ ಮೂಲಕ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶವನ್ನು ದೊಡ್ಡ ಸ್ಕೋರ್ ಮಾಡದಂತೆ ತಡೆದರು.

ಮಯಾಂಕ್ ಮ್ಯಾಜಿಕ್

ಇವರೊಂದಿಗೆ ತಮ್ಮ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಮಯಾಂಕ್ ಯಾದವ್, ತಾವು ಎಸೆದ ಮೊದಲ ಓವರ್​ ಅನ್ನು ಮೇಡನ್ ಮಾಡಿದಲ್ಲದೆ, ನಂತರದ ಓವರ್​ನಲ್ಲಿ ತಮ್ಮ ಟಿ20 ವೃತ್ತಿಜೀವನದ ಮೊದಲ ವಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾದರು. ಒಟ್ಟಾರೆ ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ಅಮೋಘವಾಗಿತ್ತು.

ಮೆಹದಿ ಹಸನ್ ಆಲ್​ರೌಂಡರ್ ಆಟ

ಇನ್ನು ಬಾಂಗ್ಲಾದೇಶ ಪರ ಆಲ್​​ರೌಂಡರ್ ಮೆಹದಿ ಹಸನ್ ಮಿರಾಜ್ 32 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ ಅಜೇಯ 35 ರನ್ ಬಾರಿಸಿದರೆ, ನಾಯಕ ಶಾಂಟೋ 27 ರನ್​ಗಳ ಇನ್ನಿಂಗ್ಸ್ ಆಡಿದರು. ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಹೀಗಾಗಿ ಇಡೀ ಬಾಂಗ್ಲಾ ತಂಡ 19.5 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು. ಇತ್ತ ಭಾರತದ ಪರ ಅರ್ಷದೀಪ್ ಮತ್ತು ವರುಣ್ ತಲಾ ಮೂರು ವಿಕೆಟ್ ಪಡೆದರೆ, ಮಯಾಂಕ್ ಯಾದವ್, ಅನುಭವಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.

ಭಾರತಕ್ಕೆ ಸ್ಫೋಟಕ ಆರಂಭ

128 ರನ್​ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಸ್ಫೋಟಕ ಆರಂಭ ಸಿಕ್ಕಿತು. ಇದರ ಲಾಭ ಪಡೆದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ಮಾಡಿ ತಂಡವನ್ನು 11.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು. 16 ಎಸೆತಗಳಲ್ಲಿ ಐದು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿ ಅಜೇಯರಾಗಿ ಉಳಿದ ಹಾರ್ದಿಕ್ ಭಾರತದ ಪರ ಗರಿಷ್ಠ ರನ್ ಗಳಿಸಿದರು.

ಹಾರ್ದಿಕ್ ಹೊರತಾಗಿ ನಾಯಕ ಸೂರ್ಯಕುಮಾರ್ ಕೂಡ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ 14 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 29 ರನ್ ಗಳಿಸಿದರು. ಇನ್ನು ಮೊದಲ ಟಿ20 ಪಂದ್ಯ ಆಡಿದ ನಿತೀಶ್ ರೆಡ್ಡಿ ಕೂಡ 15 ಎಸೆತಗಳಲ್ಲಿ 16 ರನ್ ಗಳಿಸಿ ಅಜೇಯರಾಗಿ ಉಳಿದರು. ಬಾಂಗ್ಲಾ ಪರ ಮುಸ್ತಾಫಿಜುರ್ ರೆಹಮಾನ್ ಮತ್ತು ಮೆಹದಿ ಹಸನ್ ಮಿರಾಜ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:08 pm, Sun, 6 October 24