U19 World Cup: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ
India U19 Wins Record 6th World Cup:ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು 100 ರನ್‌ಗಳಿಂದ ಸೋಲಿಸಿ ಭಾರತ ಇತಿಹಾಸ ನಿರ್ಮಿಸಿದೆ. ಇದು ಭಾರತದ 6ನೇ ಅಂಡರ್ 19 ವಿಶ್ವಕಪ್ ಪ್ರಶಸ್ತಿಯಾಗಿದೆ. ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ಅವರ ಬಿರುಸಿನ 175 ರನ್ (80 ಎಸೆತ) ಗಳಿಕೆಯು ಭಾರತದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ಯುವ ಭಾರತ ತಂಡ ಇತಿಹಾಸ ಸೃಷ್ಟಿಸಿದೆ. ಅಂಡರ್ 19 ವಿಶ್ವಕಪ್‌ನ (U19 World Cup) ಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ (India vs England) ತಂಡವನ್ನು ಬರೋಬ್ಬರಿ 100 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ, ಭಾರತ ಆರನೇ ಬಾರಿಗೆ ಅಂಡರ್ 19 ವಿಶ್ವಕಪ್ ಎತ್ತಿಹಿಡಿಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 411 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 311 ರನ್‌ಗಳಿಗೆ ಆಲೌಟ್ ಆಗುವ ಮೂಲಕ 100 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ವೈಭವ್ ಅವರ ಈ ಇನ್ನಿಂಗ್ಸ್‌ನಲ್ಲಿ 15 ಸಿಕ್ಸರ್‌ಗಳು ಮತ್ತು 15 ಬೌಂಡರಿಗಳು ಸೇರಿದ್ದವು.
ಭಾರತಕ್ಕೆ ಸಿಡಿಲಬ್ಬರದ ಆರಂಭ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಭಾರತ ಕಳಪೆ ಆರಂಭ ಪಡೆಯಿತು. ಆರನ್ ಜಾರ್ಜ್ 9 ರನ್‌ಗಳಿಗೆ ಔಟಾದರು. ಆ ಬಳಿಕ ಜೊತೆಯಾದ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ 90 ಎಸೆತಗಳಲ್ಲಿ ಎರಡನೇ ವಿಕೆಟ್‌ಗೆ 142 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಮ್ಹಾತ್ರೆ 51 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಂತೆ 53 ರನ್ ಬಾರಿಸಿದರೆ, ವೈಭವ್ 32 ಎಸೆತಗಳಲ್ಲಿ ಅರ್ಧಶತಕ ಮತ್ತು 55 ಎಸೆತಗಳಲ್ಲಿ ಶತಕ ಪೂರೈಸಿದರು. ನಂತರ 71 ಎಸೆತಗಳಲ್ಲಿ 150 ರನ್ ಪೂರ್ಣಗೊಳಿಸಿದ ವೈಭವ್ ಅಂತಿಮವಾಗಿ 80 ಎಸೆತಗಳಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್‌ಗಳ ಸಹಾಯದಿಂದ 175 ರನ್ ಬಾರಿಸಿ ಔಟಾದರು.
𝗖.𝗛.𝗔.𝗠.𝗣.𝗜.𝗢.𝗡.𝗦 🏆
Congratulations to India U19 on winning the ICC Men's U19 World Cup 2026 👏👏
Their historic 6⃣th title 🫡
Take. A. Bow 🙇
Scorecard ▶️ https://t.co/hisult7mtv #U19WorldCup pic.twitter.com/5a0Pf4wpTw
— BCCI (@BCCI) February 6, 2026
175 ರನ್ ಬಾರಿಸಿದ ವೈಭವ್
ಇದೇ ವೇಳೆ ವೈಭವ್ 39 ಎಸೆತಗಳಲ್ಲಿ ವೇದಾಂತ್ ತ್ರಿವೇದಿ ಅವರೊಂದಿಗೆ ಮೂರನೇ ವಿಕೆಟ್‌ಗೆ 89 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ವೈಭವ್ ವಿಕೆಟ್ ಪತನವಾದಾಗ ತಂಡದ ಮೊತ್ತ 251 ರನ್ ಆಗಿತ್ತು. ಇದರ ನಂತರ ಉಳಿದ 7 ಆಟಗಾರರು ಸ್ಕೋರ್ ಬೋರ್ಡ್ಗೆ 160 ರನ್ ಸೇರಿಸಿದರು. ವೇದಾಂತ್ 36 ಎಸೆತಗಳಲ್ಲಿ 32 ರನ್ ಗಳಿಸಿದರೆ, ವಿಹಾನ್ ಮಲ್ಹೋತ್ರಾ 36 ಎಸೆತಗಳಲ್ಲಿ 30 ರನ್ ಬಾರಿಸಿದರು. ಅಭಿಗ್ಯಾನ್ ಕುಂಡು 31 ಎಸೆತಗಳಲ್ಲಿ 40 ರನ್, ಅಂಬ್ರಿಸ್ ಕೇವಲ 18 ರನ್, ಕನಿಷ್ಕ್ ಚೌಹಾಣ್ 20 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದರು. ಇಂಗ್ಲೆಂಡ್ ಪರ ಜೇಮ್ಸ್ ಮಿಂಟೊ ಮೂರು ವಿಕೆಟ್ ಪಡೆದರೆ, ಸೆಬಾಸ್ಟಿಯನ್ ಮಾರ್ಗನ್ ಮತ್ತು ಅಲೆಕ್ಸ್ ಗ್ರೀನ್ ತಲಾ ಎರಡು ವಿಕೆಟ್ ಪಡೆದರು.
ಫಾಕ್ನರ್ ಏಕಾಂಗಿ ಹೋರಾಟ ವ್ಯರ್ಥ
ಭಾರತ ನೀಡಿದ 412 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 40.2 ಓವರ್‌ಗಳಲ್ಲಿ 311 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಕ್ಯಾಲೆಬ್ ಫಾಕ್ನರ್ 67 ಎಸೆತಗಳಲ್ಲಿ 115 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಇನ್ನೊಂದು ತುದಿಯಿಂದ ಅವರಿಗೆ ಉತ್ತಮ ಬೆಂಬಲ ಸಿಗಲಿಲ್ಲ. ಫಾಕ್ನರ್ ಹೊರತುಪಡಿಸಿ ಬೆನ್ ಡಾಕಿನ್ಸ್ 66 ಮತ್ತು ಬೆನ್ ಮೇಯಸ್ 45 ರನ್‌ಗಳ ಇನ್ನಿಂಗ್ಸ್ ಆಡಿದರು. ನಾಯಕ ಥಾಮಸ್ 31 ರನ್‌ಗಳ ಕಾಣಿಕೆ ನೀಡಿದರು. ಇಂಗ್ಲೆಂಡ್ ತಂಡ ಉತ್ತಮ ಪಡೆಯಿತ್ತಾದರೂ ಮಧ್ಯಮ ಓವರ್‌ಗಳಲ್ಲಿ ಎಂಟು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದಾಗಿ ತಂಡಕ್ಕೆ ಬೃಹತ್ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 pm, Fri, 6 February 26
