ಸೀಮಿತ ಓವರ್ಗಳ ಸರಣಿಗಾಗಿ ಬಾಂಗ್ಲಾ ಪ್ರವಾಸ ಮಾಡಲಿದೆ ಟೀಂ ಇಂಡಿಯಾ
Team India Bangladesh tour 2026: ಸುಮಾರು ಒಂದು ವರ್ಷದ ನಂತರ ಬಿಸಿಸಿಐ-ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸಂಬಂಧಗಳು ಸುಧಾರಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದಿಂದ ಉಂಟಾಗಿದ್ದ ಬಿಕ್ಕಟ್ಟು ಶಮನಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಭಾರತ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕರೆ, ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಅಫ್ಘಾನಿಸ್ತಾನ ಸರಣಿ ಮುಂದೂಡಲು ಬಿಸಿಸಿಐ ಚಿಂತಿಸುತ್ತಿದೆ.

ಸರಿಸುಮಾರು ಒಂದು ವರ್ಷಗಳ ಬಳಿಕ ಬಿಸಿಸಿಐ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳ (BCCI BCB ) ನಡುವಿನ ಸಂಬಂಧಗಳು ಸುಧಾರಿಸುವ ಸುಳಿವು ಸಿಕ್ಕಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬಿಸಿಸಿಐ, ಬಾಂಗ್ಲಾದೇಶ ಆಟಗಾರರನ್ನು ಐಪಿಎಲ್‌ನಿಂದ ನಿಷೇಧಿಸಿತ್ತು. ಇದರಿಂದಾಗಿ ಬಾಂಗ್ಲಾದೇಶ ತಂಡ ಭಾರತಕ್ಕೆ ಬರಲು ನಿರಾಕರಿಸಿತ್ತು. ಹೀಗಾಗಿ ಉಭಯ ದೇಶಗಳ ತಂಡಗಳ ನಡುವೆ ಅಂದಿನಿಂದ ಯಾವುದೇ ಸರಣಿಗಳು ನಡೆದಿರಲಿಲ್ಲ. ಇದರ ಪರಿಣಾಮವಾಗಿ ಒಂದು ವರ್ಷದ ಹಿಂದೆಯೇ ಉಭಯ ತಂಡಗಳ ನಡುವೆ ನಡೆಯಬೇಕಿದ್ದ ಸರಣಿ ರದ್ದಾಗಿತ್ತು. ಇದೀಗ ಉಭಯ ಮಂಡಳಿಗಳ ನಡುವಿನ ಸಂಬಂಧದಲ್ಲಿ ಸುಧಾರಣೆ ಕಂಡುಬಂದಿದ್ದು, ಕೆಲವೇ ದಿನಗಳಲ್ಲಿ ಸೀಮಿತ ಓವರ್ಗಳ ಸರಣಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಸೆಪ್ಟೆಂಬರ್‌ನಲ್ಲಿ ಸರಣಿ
ಟೈಮ್ಸ್ ಇಂಡಿಯಾ ವರದಿಯ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ನಿಗದಿಪಡಿಸುವ ಬಗ್ಗೆ ಎರಡೂ ಮಂಡಳಿಗಳು ಕೆಲಸ ಮಾಡುತ್ತಿವೆ. ಅಲ್ಲದೆ ಬಾಂಗ್ಲಾದೇಶದಲ್ಲಿ ಸರಣಿ ಆಯೋಜಿಸುವ ಸಲುವಾಗಿ ದೆಹಲಿಯಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಮುಂದೂಡಲು ಬಿಸಿಸಿಐ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಆದಾಗ್ಯೂ ಈ ಸರಣಿಗೆ ಅಂತಿಮ ಅನುಮೋದನೆ ಭಾರತ ಸರ್ಕಾರದಿಂದ ಬರಬೇಕಾಗಿದ್ದು, ಸರ್ಕಾರ ಹಸಿರು ನಿಶಾನೆ ನೀಡಿದರೆ ಮಾತ್ರ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಮಾಡಲಿದೆ.
ಬಿಸಿಸಿಐ ಜೊತೆಗೆ ಸಂಬಂಧ ಸುಧಾರಣೆ
ಕಳೆದ ವರ್ಷ, ಭಾರತವು ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಬಾಂಗ್ಲಾದೇಶ ಪ್ರವಾಸ ಮಾಡಲು ನಿರಾಕರಿಸಿತು. ತರುವಾಯ, ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಕೈಬಿಟ್ಟ ನಂತರ ಜನವರಿಯಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹಿಂದೆ ಸರಿದಿತ್ತು. ಇದೀಗ ಬಿಸಿಸಿಐ ಜೊತೆಗೆ ಸಂಬಂಧ ಸುಧಾರಿಸಿಕೊಳ್ಳಲು ಮುಂದಾಗಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಬಿಸಿಸಿಐಗೆ ಅನುಕೂಲಕರವಾಗುವಂತೆ ಸೆಪ್ಟೆಂಬರ್ 1 ರಿಂದ ತನ್ನ ತಂಡದ ಎಲ್ಲಾ ಸ್ಲಾಟ್ಗಳನ್ನು ಖಾಲಿ ಇರಿಸಿದೆ. ಅಲ್ಲದೆ ಎಲ್ಲಾ ಪಂದ್ಯಗಳನ್ನು ಒಂದೇ ಸ್ಥಳದಲ್ಲಿ ನಡೆಸಲು ಸಹ ಬಿಸಿಬಿ ಸಿದ್ಧವಿದೆ ಎಂದು ಟೈಮ್ಸ್ ಇಂಡಿಯಾ ವರದಿ ಮಾಡಿದೆ.
2 ಸ್ಥಳಗಳಲ್ಲಿ ಸರಣಿ
ವರದಿ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಒಂದು ಸ್ಥಳದಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಇನ್ನೊಂದು ಸ್ಥಳದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನಡೆಸಲು ಮುಂದಾಗಿದೆ. ಢಾಕಾ ಮತ್ತು ಚಟ್ಟೋಗ್ರಾಮ್ ಮೈದಾನಗಳನ್ನು ಈ ಸರಣಿಗಳಿಗೆ ನಿಗದಿಪಡಿಸಿಲಾಗಿದೆ. ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಎರಡೂ ಮಂಡಳಿಗಳು ಈ ಬಗ್ಗೆ ಚರ್ಚಿಸಿವೆ ಎಂದು ಬಿಸಿಸಿಐ ಮೂಲವೊಂದು TOI ಗೆ ತಿಳಿಸಿದೆ.
‘ಆಗಲೇ ಈ ನಿರ್ಧಾರ ಮಾಡಬೇಕಿತ್ತು’; ಬಿಸಿಸಿಐ ವಿರುದ್ಧ ಭಾರತದ ಮಾಜಿ ಆಟಗಾರ ಗರಂ
ಭಾರತ-ಅಫ್ಘನ್ ಸರಣಿ ಮುಂದೂಡಿಕೆ
ಏತನ್ಮಧ್ಯೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಸೆಪ್ಟೆಂಬರ್ 1 ರಿಂದ 13 ರವರೆಗೆ ಭಾರತದ ವಿರುದ್ಧ ಸರಣಿ ಆಯೋಜಿಸಲು ಉದ್ದೇಶಿಸಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಪ್ರವಾಸ ಅಂತಿಮವಾದರೆ, ಭಾರತ ಹಾಗೂ ಅಫ್ಘಾನಿಸ್ತಾನ ನಡುವೆ ದೆಹಲಿಯಲ್ಲಿ ನಡೆಯಬೇಕಿದ್ದ ಟಿ20 ಸರಣಿಯನ್ನು ಮುಂದೂಡಲಾಗುತ್ತದೆ. ಅಲ್ಲದೆ ಏಷ್ಯನ್ ಕ್ರೀಡಾಕೂಟವು ಸೆಪ್ಟೆಂಬರ್ 24 ರಂದು ಪ್ರಾರಂಭವಾಗಲಿದ್ದು, ವೆಸ್ಟ್ ಇಂಡೀಸ್ ತಂಡವು ಸೆಪ್ಟೆಂಬರ್ 27 ರಂದು ಭಾರತ ಪ್ರವಾಸ ಕೈಗೊಳ್ಳಲಿದೆ. ಆದ್ದರಿಂದ, ಈ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ಸರಣಿ ಯಾವಾಗ ನಡೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Mon, 27 July 26




