ಕನ್ನಡ ರಾಜ್ಯೋತ್ಸವಕ್ಕೆ ಕಲರ್‌ನಲ್ಲಿ ಬಿಡುಗಡೆ ಆಗಲಿದೆ ‘ಜಗ ಮೆಚ್ಚಿದ ಮಗ’ ಸಿನಿಮಾ
ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಲು ಹೊಸ ರೂಪದಲ್ಲಿ ‘ಜಗ ಮೆಚ್ಚಿದ ಮಗ’ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲು ಸಿದ್ಧತೆ ನಡೆದಿದೆ. ಚೆನ್ನೈನ ಪ್ರಸಿದ್ಧ ‘ಪ್ರಸಾದ್ ಸ್ಟುಡಿಯೋ’ದಲ್ಲಿ ಸತತ ಒಂದೂವರೆ ವರ್ಷಗಳ ಕಾಲ ಪರಿಶ್ರಮ ವಹಿಸಿ ಈ ಚಿತ್ರವನ್ನು ‘ಸಿನಿಮಾಸ್ಕೋಪ್’ ಶೈಲಿಗೆ ಬದಲಾಯಿಸಲಾಗಿದೆ.

ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಡಾ. ರಾಜ್‌ಕುಮಾರ್ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಗಲಿದೆ. ತಮ್ಮ ಅಮೋಘ ನಟನೆ ಮೂಲಕ ಕೋಟ್ಯಂತರ ಕನ್ನಡಿಗರ ಮನಗೆದ್ದ ಅಣ್ಣಾವ್ರ ಸಿನಿಮಾಗಳನ್ನು ದೊಡ್ಡ ಪರದೆಯ ಮೇಲೆ ನೋಡಲು ಈಗಲೂ ಅಭಿಮಾನಿಗಳು ಆಸಕ್ತಿ ತೋರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಡಾ. ರಾಜ್‌ಕುಮಾರ್ ಅಭಿನಯದ ಸೂಪರ್ ಹಿಟ್ ‘ಜಗ ಮೆಚ್ಚಿದ ಮಗ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಬಾರಿ ಕಲರ್‌ನಲ್ಲಿ ರಿಲೀಸ್ ಆಗಲಿದೆ ಎಂಬುದು ವಿಶೇಷ.
ಹೌದು, ‘ಜಗ ಮೆಚ್ಚಿದ ಮಗ’ ಸಿನಿಮಾ ಈಗ ಹೊಸ ಮೆರುಗಿನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕಪ್ಪು-ಬಿಳುಪಿನಲ್ಲಿದ್ದ ಈ ಕ್ಲಾಸಿಕ್ ಸಿನಿಮಾವನ್ನು ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಪೂರ್ಣ ಪ್ರಮಾಣದ ಕಲರ್‌ಗೆ ಬದಲಾಯಿಸಲಾಗಿದೆ. ಈ ವರ್ಷದ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.
ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಹಾಗೂ ವಿತರಕರಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಎಸ್. ಉದಯಶಂಕರ್ ಅವರು ‘ಜಗ ಮೆಚ್ಚಿದ ಮಗ’ ಸಿನಿಮಾಗೆ ಕಲರ್ ಹಾಗೂ ಹೊಸ ತಾಂತ್ರಿಕ ರೂಪ ನೀಡುವ ಸಾಹಸಕ್ಕೆ ಕೈಹಾಕಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಸಾದ್ ಸ್ಟುಡಿಯೋದಲ್ಲಿ ಒಂದೂವರೆ ವರ್ಷಗಳ ಶ್ರಮದ ಫಲವಾಗಿ ಈ ಸಿನಿಮಾಗೆ ಬಣ್ಣದ ಸ್ಪರ್ಶ ಸಿಕ್ಕಿದೆ. ಸಿನಿಮಾಸ್ಕೋಪ್ ಜೊತೆಗೆ ಅತ್ಯಾಧುನಿಕ ‘5.1 ಸೌಂಡ್ ಎಫೆಕ್ಟ್’ ಅಳವಡಿಸಿ, ತಾಂತ್ರಿಕವಾಗಿ ಸಿನಿಮಾ ಅತ್ಯುನ್ನತ ಮಟ್ಟದಲ್ಲಿ ಮೂಡಿಬರುವಂತೆ ಸಿದ್ಧಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘ನಾನು ಅಪ್ಪಟ ಡಾ. ರಾಜ್‌ಕುಮಾರ್ ಅಭಿಮಾನಿ. 1972ರಲ್ಲಿ ಭಾವನಾರಾಯಣ್ ಅವರ ನಿರ್ಮಾಣ ಹಾಗೂ ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಜಗ ಮೆಚ್ಚಿದ ಮಗ ಚಿತ್ರದಲ್ಲಿ ಡಾ. ರಾಜ್‌ಕುಮಾರ್, ಭಾರತಿ, ಕೆ.ಎಸ್. ಅಶ್ವತ್, ಎಂ.ವಿ. ರಾಜಮ್ಮ ಹಾಗೂ ನರಸಿಂಹರಾಜು ಅವರಂತಹ ದಿಗ್ಗಜ ಕಲಾವಿದರು ಅಭಿನಯಿಸಿದ್ದರು. 50 ವರ್ಷಗಳಷ್ಟು ಹಳೆಯ ಈ ಕಪ್ಪು-ಬಿಳುಪು ಚಿತ್ರವನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಬದಲಾಯಿಸುವುದು ಸುಲಭದ ಮಾತಾಗಿರಲಿಲ್ಲ’ ಎಂದು ಎಸ್. ಉದಯಶಂಕರ್ ಅವರು ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಡಾ. ರಾಜ್‌ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್ಲಾಲ್
ಈ ಹಿಂದೆ ಡಾ. ರಾಜ್ ಅಭಿನಯದ ‘ಸತ್ಯ ಹರಿಶ್ಚಂದ್ರ’ ಹಾಗೂ ‘ಕಸ್ತೂರಿ ನಿವಾಸ’ ಚಿತ್ರಗಳು ಬಣ್ಣದಲ್ಲಿ ಮರುಬಿಡುಗಡೆಯಾಗಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿದ್ದವು. ಆ ಸಾಲಿಗೆ ಈಗ ‘ಜಗ ಮೆಚ್ಚಿದ ಮಗ’ ಸೇರುತ್ತಿದೆ. ಈ ಚಿತ್ರದ ಯಶಸ್ಸಿನ ಬಳಿಕ ಡಾ. ರಾಜ್ ಅವರ ಮತ್ತೊಂದು ಭಕ್ತಿಪ್ರಧಾನ ಸಿನಿಮಾ ‘ಮಂತ್ರಾಲಯ ಮಹಾತ್ಮೆ’ ಚಿತ್ರವನ್ನೂ ಕಲರ್‌ಗೆ ಬದಲಾಯಿಸಿ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಉದಯಶಂಕರ್ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




