ಭಾರತ ಮತ್ತು ಬಾಂಗ್ಲಾದೇಶ (India vs Bangladesh) ನಡುವೆ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಏಕದಿನ ಪಂದ್ಯ ಶನಿವಾರ ನಡೆಯಲಿದೆ. ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದು ಟ್ರೋಫಿಯನ್ನು ವಶಪಡಿಸಿಕೊಂಡಿರುವ ಬಾಂಗ್ಲಾದೇಶ, ಟೀಂ ಇಂಡಿಯಾಕ್ಕೆ ವೈಟ್ ವಾಶ್ ಆಘಾತ ನೀಡಲು ಪ್ರಯತ್ನಿಸುತ್ತಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ವಿಶೇಷವಾಗಿ ಏನ್ನನ್ನೂ ಸಾಧಿಸಲು ಸಾಧ್ಯವಾಗದಿದ್ದರೂ, ತಂಡದ ಮೂವರು ಆಟಗಾರರು ಇಂಜುರಿಗೊಂಡು ದೇಶಕ್ಕೆ ವಾಪಸ್ಸಾಗಿದ್ದಾರೆ. ಹೀಗಾಗಿ ಕೊನೆಯ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಹೊಸ ಮುಖಗಳು ಕಾಣಿಸಿಕೊಳ್ಳಲಿದ್ದು, ಈ ಔಪಚಾರಿಕ ಪಂದ್ಯಕ್ಕೆ ಟೀಂ ಇಂಡಿಯಾದ (Team India) ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದು ಎಲ್ಲರಲ್ಲೂ ಕುತೂಹಲ ಹೆಚ್ಚಿಸಿದೆ. ಈಗಾಗಲೇ ಸರಣಿ ಸೋತಿರುವ ಟೀಂ ಇಂಡಿಯಾ ಅಂತಿಮ ಪಂದ್ಯವನ್ನು ಗೆದ್ದು, ಮುಜುಗರ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ತಂಡದಲ್ಲಿ ಯಾವ ಆಟಗಾರನಿಗೆ ಅವಕಾಶ ನೀಡಲಿದೆ ಎಂಬದು ಪ್ರಶ್ನೆಯಾಗಿದೆ.
ಬಾಂಗ್ಲಾದೇಶ ವಿರುದ್ಧದ ಈ ಏಕದಿನ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ 3 ಭಾರತೀಯ ಆಟಗಾರರು ಗಾಯಗೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮೂರನೇ ಏಕದಿನ ಪಂದ್ಯದಲ್ಲಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಲಿವೆ. ಅಲ್ಲದೆ ಇದಕ್ಕೆ ಪೂರಕವೆಂಬಂತೆ ಈ ಪಂದ್ಯಕ್ಕೂ ಮುನ್ನ ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
3 ಭಾರತೀಯ ಆಟಗಾರರಿಗೆ ಇಂಜುರಿ
ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ನಾಯಕ ರೋಹಿತ್ ಗಾಯಗೊಂಡಿದ್ದರು. ಇದರ ನಂತರ ಕೊನೆಯ ಹಂತದಲ್ಲಿ ಬ್ಯಾಟಿಂಗ್ಗೆ ಬಂದಿದ್ದ ರೋಹಿತ್ ಅಜೇಯ ಅರ್ಧಶತಕ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. ಈಗ ಇಂಜುರಿಗೊಂಡಿರುವ ರೋಹಿತ್ ಕೊನೆಯ ಪಂದ್ಯಕ್ಕೆ ಅಲಭ್ಯರಾಗಿದ್ದು, ಈಗಾಗಲೇ ಅವರು ಚಿಕಿತ್ಸೆಗಾಗಿ ಮುಂಬೈ ತಲುಪಿದ್ದಾರೆ ಎಂಬುದು ಸುದ್ದಿ. ಈ ಪಂದ್ಯದಲ್ಲಿ ದೀಪಕ್ ಚಾಹರ್ ಕೂಡ ಗಾಯಗೊಂಡಿದ್ದರಿಂದ ಅವರೂ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಈ ಇಬ್ಬರಲ್ಲದೆ ಮೊದಲ ಏಕದಿನ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿದ್ದ ಯುವ ವೇಗಿಕುಲದೀಪ್ ಸೇನ್ ಕೂಡ ಸರಣಿಯಿಂದ ಹೊರಗುಳಿದಿದ್ದಾರೆ.
ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗನ ಆಯ್ಕೆ ಖಚಿತ; ರೋಹಿತ್- ದ್ರಾವಿಡ್ಗೆ ನಡುಕ ಶುರು..!
ಕೆಎಲ್ ರಾಹುಲ್ಗೆ ನಾಯಕತ್ವ
ಮೂರನೇ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯರಾಗಿರುವುದರಿಂದ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್ಗೆ ವಹಿಸಿದ್ದು, ಭಾರತವನ್ನು ಕ್ಲೀನ್ ಸ್ವೀಪ್ನಿಂದ ಪಾರು ಮಾಡುವುದು ಅವರ ಮುಂದಿರುವ ದೊಡ್ಡ ಸವಾಲಾಗಿದೆ. ರೋಹಿತ್ ನಿರ್ಗಮನದಿಂದಾಗಿ ಭಾರತದ ಅಗ್ರ ಕ್ರಮಾಂಕ ನಲುಗಿದೆ. ಕಳೆದ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಶಿಖರ್ ಧವನ್ ಅವರೊಂದಿಗೆ ಓಪನಿಂಗ್ ಮಾಡಿದ್ದರು. ಆದರೆ ಈ ಇಬ್ಬರೂ ಓಪನರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ವಾಪಸ್ಸಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಮೂರನೇ ಏಕದಿನ ಪಂದ್ಯದಲ್ಲಿ ಓಪನಿಂಗ್ ಮಾಡುವ ಸಾಧ್ಯತೆಗಳಿವೆ. ಅಲ್ಲದೆ ರೋಹಿತ್ ಬದಲಿಗೆ ರಾಹುಲ್ ತ್ರಿಪಾಠಿ ಅಥವಾ ರಜತ್ ಪಾಟಿದಾರ್ ಅವರಿಗೆ ಬೇರೆ ಯಾವುದೇ ಅಗ್ರ ಕ್ರಮಾಂಕದಲ್ಲಿ ಅವಕಾಶ ನೀಡಬಹುದು. ರಾಹುಲ್ ತ್ರಿಪಾಠಿ ಕೂಡ ಓಪನಿಂಗ್ ಮಾಡುವ ಸಾಮಥ್ರ್ಯ ಹೊಂದಿದ್ದು, ಅವರು ಕೂಡ ಓಪನಿಂಗ್ ಆಯ್ಕೆಗೆ ಲಭ್ಯರಾಗಲಿದ್ದಾರೆ. ಮತ್ತೊಂದೆಡೆ, ಮೂರನೇ ಪಂದ್ಯಕ್ಕೆ ತಂಡಕ್ಕೆ ಸೇರ್ಪಡೆಗೊಂಡಿರುವ ಕುಲ್ದೀಪ್ಗೆ ಸ್ಪಿನ್ ಕೋಟಾದಲ್ಲಿ ಅವಕಾಶ ಸಿಗುವ ಸಾಧ್ಯತೆಗಳಿವೆ.
ಭಾರತದ ಸಂಭಾವ್ಯ ಪ್ಲೇಯಿಂಗ್ XI
ಕೆಎಲ್ ರಾಹುಲ್, ರಾಹುಲ್ ತ್ರಿಪಾಠಿ / ರಜತ್ ಪಾಟಿದಾರ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Fri, 9 December 22