ಚೊಚ್ಚಲ ಪಂದ್ಯದಲ್ಲಿಯೇ 7 ವಿಕೆಟ್..! ಪಾಕ್ ಸ್ಪಿನ್ನರ್ ದಾಳಿಗೆ ತತ್ತರಿಸಿದ ಆಂಗ್ಲರು; 281 ರನ್ಗಳಿಗೆ ಆಲೌಟ್
PAK vs ENG: ಪಾಕ್ ಪರ ಟೆಸ್ಟ್ ಪಂದ್ಯಕ್ಕೆ ಚೊಚ್ಚಲ ಪ್ರವೇಶ ಮಾಡಿದ ಅಬ್ರಾರ್, ಆಂಗ್ಲರನ್ನು ಹೆಡೆಮೂರಿ ಕಟ್ಟಿದರು. ಈ ಪಂದ್ಯದಲ್ಲಿ ಅಬ್ರಾರ್ ಹವಾ ಹೇಗಿತ್ತು ಎಂದರೆ, ಇಂಗ್ಲೆಂಡ್ ಪಾಳಾಯದ ಆರಂಭಿಕ 7 ವಿಕೆಟ್ಗಳು ಅಬ್ರಾರ್ ಪಾಲಾದವು.
ಪಾಕಿಸ್ತಾನ ವಿರುದ್ಧದ ರಾವಲ್ಪಿಂಡಿ ಟೆಸ್ಟ್ ಗೆದ್ದು ಬೀಗಿದ್ದ ಆಂಗ್ಲ ಪಡೆ (England Vs Pakistan), ಮುಲ್ತಾನ್ ಟೆಸ್ಟ್ನಲ್ಲೂ ಅದೇ ಪ್ರದರ್ಶನ ನೀಡುವ ಉದ್ದೇಶದ ಮೇರೆಗೆ ಅಖಾಡಕ್ಕೆ ಎಂಟ್ರಿಕೊಟ್ಟಿತ್ತು. ಆದರೆ ಪಾಕ್ ಪರ ತಂಡಕ್ಕೆ ಚೊಚ್ಚಲ ಎಂಟ್ರಿ ಪಡೆದ ಮಿಸ್ಟ್ರಿ ಸ್ಪಿನ್ನರ್ ಇಂಗ್ಲೆಂಡ್ ತಂಡದ ಯೋಜನೆಯನ್ನೇ ಬುಡಮೇಲು ಮಾಡಿದ್ದಾನೆ. ಪಾಕ್ ತಂಡದ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ (Abrar Ahmed) ಅವರ ಸ್ಪಿನ್ ಮ್ಯಾಜಿಕ್ಗೆ ನಲುಗಿದ ಇಂಗ್ಲೆಂಡ್ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 281 ರನ್ ಗಳಿಸಲಷ್ಟೇ ಶಕ್ತವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡಿನ ಅನುಭವಿ ಆಟಗಾರರು, ಪಾಕ್ ತಂಡದ ಅನಾನುಭವಿ ಬೌಲರ್ ಅಬ್ರಾರ್ ಎದುರು ಮಂಡಿಯೂರಿದ್ದಾರೆ.
ಟೆಸ್ಟ್ ಸರಣಿಗಾಗಿ 17 ವರ್ಷಗಳ ಬಳಿಕಪಾಕಿಸ್ತಾನಕ್ಕೆ ಎಂಟ್ರಿಕೊಟ್ಟಿರುವ ಇಂಗ್ಲೆಂಡ್ ತಂಡ ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರಬಲ ಪುನರಾಗಮನ ಮಾಡಿರುವ ಬಾಬರ್ ಪಡೆ ಮೊದಲ ಇನ್ನಿಂಗ್ಸ್ನಲ್ಲಿ ಸ್ಟೋಕ್ಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನದ ಈ ಯಶಸ್ಸಿನ ದೊಡ್ಡ ಕ್ರೆಡಿಟ್ ತಂಡದ ಯುವ ವೇಗದ ಬೌಲರ್ ಅಬ್ರಾರ್ ಅಹ್ಮದ್‌ಗೆ ಸಲ್ಲುತ್ತದೆ.
ಮುಲ್ತಾನ್‌ನಲ್ಲಿ ಪಾಕಿಸ್ತಾನದ ಅದೃಷ್ಟ ಬದಲಾಯಿಸಿದ ಅನಾನುಭವಿ
ರಾವಲ್ಪಿಂಡಿಯಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಪಾಕ್ ಬೌಲರ್ಗಳು ವಿಫಲರಾಗಿದ್ದರು. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮ ತೋರಿದ್ದ ಆಂಗ್ಲರು ಬರೋಬ್ಬರಿ 657 ರನ್ ಚಚ್ಚಿದ್ದರು. ಈ ಪಂದ್ಯದಲ್ಲಿ ತಂಡದ ನಾಲ್ವರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿ ಮಿಂಚಿದ್ದರು. ಆದಾಗ್ಯೂ, ಮುಲ್ತಾನ್‌ನಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿದ್ದು, ಅಬ್ರಾರ್ ಅಹ್ಮದ್ ದಾಳಿಗೆ ನಲುಗಿದ ಆಂಗ್ಲ ತಂಡದಿಂದ ಎರಡು ಅರ್ಧಶತಕಗಳನ್ನು ಬಿಟ್ಟರೆ, ಒಂದೇ ಒಂದು ಶತಕ ದಾಖಲಾಗಲಿಲ್ಲ.
ಮಿಂಚಿದ ಅಭಿಮನ್ಯು- ಸೌರಭ್; ಬಾಂಗ್ಲಾ ಎ ಮಣಿಸಿ ಅನಧಿಕೃತ ಟೆಸ್ಟ್ ಸರಣಿ ಗೆದ್ದ ಭಾರತ ಎ ತಂಡ..!
ಅಬ್ರಾರ್ ಮುಂದೆ ಮಂಕಾದ ಇಂಗ್ಲೆಂಡ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ಗೆ ಜಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಮೊದಲ ವಿಕೆಟ್‌ಗೆ 38 ರನ್ಗಳ ಜೊತೆಯಾಟ ನೀಡಲಷ್ಟೇ ಶಕ್ತರಾದರು. ಈ ಜೋಡಿ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಆದರೆ ಎರಡನೇ ಪಂದ್ಯದಲ್ಲಿ ಕ್ರೌಲಿಯನ್ನು ಬೌಲ್ಡ್ ಮಾಡುವ ಮೂಲಕ ಅಬ್ರಾರ್ ಅಹ್ಮದ್ ತಮ್ಮ ವೃತ್ತಿ ಜೀವನದ ಮೊದಲ ವಿಕೆಟ್ ಪಡೆದರು. ಇದಾದ ಬಳಿಕ ಡಕೆಟ್ ಒಲಿ ಪಾಪ್ ಜೊತೆ 79 ರನ್ ಜೊತೆಯಾಟ ನಡೆಸಿದರು. ಈ ಜೊತೆಯಾಟವನ್ನೂ ಮುರಿಯುವಲ್ಲಿ ಯಶಸ್ವಿಯಾದ ಅಬ್ರಾರ್ ತಂಡದ ಪರ ಗರಿಷ್ಠ 63 ರನ್ ಗಳಿಸಿದ ಬೆನ್ ಡಕೆಟ್ರನ್ನು ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು. ಇದಾದ ಬಳಿಕ ಇಂಗ್ಲೆಂಡ್ ತಂಡದ ವಿಕೆಟ್‌ಗಳ ಸುರಿಮಳೆಯಾಯಿತು.
ಆ ಬಳಿಕ ಬಂದ ಓಲಿ ಪಾಪ್ 60 ರನ್ ಗಳಿಸಿ ಅಬ್ರಾರ್ಗೆ ಬಲಿಯಾದರೆ, ಜೋ ರೂಟ್ (8), ಹ್ಯಾರಿ ಬ್ರೂಕ್ (9), ಬೆನ್ ಸ್ಟೋಕ್ಸ್ (30), ವಿಲ್ ಜಾಕ್ವೆಸ್ (31) ಕೂಡ ಅಬ್ರಾರ್ ಅಹ್ಮದ್ ದಾಳಿಗೆ ತುತ್ತಾದರು. ಈ ಪಂದ್ಯದಲ್ಲಿ ಪಾಕ್ ತಂಡದ ಮತ್ತೊಬ್ಬ ಬೌಲರ್ ಜಾಹಿದ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆಯದಿದ್ದರೆ, ಅಹ್ಮದ್ ಬಹುಶಃ ಇಂಗ್ಲೆಂಡ್ನ 10 ವಿಕೆಟ್‌ಗಳನ್ನು ಪಡೆಯುವ ಸಾಧ್ಯತೆ ಇತ್ತು.
More on Abrar Ahmed – the spinner who has stunned England on his Test debut with a seven-wicket haul ?#PAKvENG https://t.co/qyD4JTZkqf
— ICC (@ICC) December 9, 2022
ಚೊಚ್ಚಲ ಪಂದ್ಯದಲ್ಲಿಯೇ ಅಬ್ರಾರ್ ಶೈನ್
ಪಾಕ್ ಪರ ಟೆಸ್ಟ್ ಪಂದ್ಯಕ್ಕೆ ಚೊಚ್ಚಲ ಪ್ರವೇಶ ಮಾಡಿದ ಅಬ್ರಾರ್, ಆಂಗ್ಲರನ್ನು ಹೆಡೆಮೂರಿ ಕಟ್ಟಿದರು. ಈ ಪಂದ್ಯದಲ್ಲಿ ಅಬ್ರಾರ್ ಹವಾ ಹೇಗಿತ್ತು ಎಂದರೆ, ಇಂಗ್ಲೆಂಡ್ ಪಾಳಾಯದ ಆರಂಭಿಕ 7 ವಿಕೆಟ್ಗಳು ಅಬ್ರಾರ್ ಪಾಲಾದವು. ಆರಂಭಿಕರಿಂದ ಹಿಡಿದು, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ವಿಲ್ ಜಾಕ್ಸ್ರನ್ನು ಔಟ್ ಮಾಡುವುದರೊಂದಿಗೆ ಅಬ್ರಾರ್ ಮೊದಲ 7 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು. ಇನ್ನುಳಿದ 3 ವಿಕೆಟ್ಗಳು ತಂಡದ ಮತ್ತೊಬ್ಬ ಬೌಲರ್ ಜಾಹಿದ್ ಮಹಮೂದ್ ಪಾಲಾದವು. ಪಾಕ್ ಪರ ಕೇವಲ ಇಬ್ಬರೇ ಬೌಲರ್ಗಳು ಇಂಗ್ಲೆಂಡ್ ತಂಡದ ಅಷ್ಟೂ ವಿಕೆಟ್‌ಗಳನ್ನು ತಿಂದು ತೇಗಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Fri, 9 December 22