ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗನ ಆಯ್ಕೆ ಖಚಿತ; ರೋಹಿತ್- ದ್ರಾವಿಡ್ಗೆ ನಡುಕ ಶುರು..!
Venkatesh Prasad: ಆಯ್ಕೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ವೆಂಕಟೇಶ್ ಪ್ರಸಾದ್ ಅತ್ಯಂತ ಅನುಭವಿಯಾಗಿದ್ದು, ಈ ಕಾರಣಕ್ಕಾಗಿ ಅವರು ಪ್ರಸ್ತುತ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಟಿ20 ವಿಶ್ವಕಪ್‌ಗೂ ಮುನ್ನವೇ ನಿರಾಶಾದಾಯಕ ಪ್ರದರ್ಶನ ನೀಡಿದ ಭಾರತ ತಂಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಮೊದಲು ಏಷ್ಯಾಕಪ್, ನಂತರ ಟಿ20 ವಿಶ್ವಕಪ್‌ನಲ್ಲಿ ಭಾರತದ ಕಳಪೆ ಪ್ರದರ್ಶನದಿಂದ ಕೋಪಗೊಂಡ ಅಭಿಮಾನಿಗಳು ಮತ್ತು ಅನುಭವಿಗಳು ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಮೊದಲ ತಲೆದಂಡವಾಗಿ ಬಿಸಿಸಿಐ ಪೂರ್ಣ ಆಯ್ಕೆ ಮಂಡಳಿಯನ್ನೇ ವಜಾಗೊಳಿಸಿತ್ತು. ಅಲ್ಲದೆ ಮಂಡಳಿಗೆ ಹೊಸ ಸದಸ್ಯರನ್ನು ನೇಮಿಸುವ ಸಲುವಾಗಿ ಅರ್ಜಿ ಕೂಡ ಅಹ್ವಾನಿಸಿತ್ತು. ಅದರಲ್ಲೂ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಹಲವು ಘಟಾನುಘಟಿ ಮಾಜಿ ಆಟಗಾರರು ಅರ್ಜಿ ಹಾಕಿದ್ದರು. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ ಹಾಗೂ ಟೀಂ ಇಂಡಿಯಾ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಆಯ್ಕೆಯಾಗವುದು ಖಚಿತ ಎಂದು ಹೇಳಲಾಗುತ್ತಿದೆ.
ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಆಯ್ಕೆ?
ಒಂದು ವೇಳೆ ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಆಯ್ಕೆಯಾದರೆ, ಟೀಂ ಇಂಡಿಯಾದಲ್ಲಿ ಹಲವು ಪ್ರಮುಖ ಬದಲಾವಣೆಗಳಾಗವುದು ನಿಶ್ಚಿತ. ಏಕೆಂದರೆ ಈ ಹಿಂದೆಯೇ ಟೀಂ ಇಂಡಿಯಾದ ಕಳಪೆ ಆಟಕ್ಕೆ ವೆಂಕಟೇಶ್ ಪ್ರಸಾದ್ ನೇರವಾಗಿ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಕಿಡಿ ಕಾರಿದ್ದರು.
2022 ರ ಟಿ 20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಎದುರು 10 ವಿಕೆಟ್‌ಗಳ ನಿರಾಶಾದಾಯಕ ಸೋಲಿನ ನಂತರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದ ಬಿಸಿಸಿಐ ಸಂಪೂರ್ಣ ಆಯ್ಕೆ ಸಮಿತಿಯನ್ನೇ ವಜಾ ಮಾಡಿದೆ. ಈಗ ಬಿಸಿಸಿಐ ಈ ತಿಂಗಳ ಅಂತ್ಯದೊಳಗೆ ಆಯ್ಕೆ ಮಂಡಳಿಗೆ ಹೊಸ ಸದಸ್ಯರನ್ನು ನೇಮಿಸಲಿದೆ. ಆಯ್ಕೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ವೆಂಕಟೇಶ್ ಪ್ರಸಾದ್ ಅತ್ಯಂತ ಅನುಭವಿಯಾಗಿದ್ದು, ಈ ಕಾರಣಕ್ಕಾಗಿ ಅವರು ಪ್ರಸ್ತುತ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
India vs Bangladesh 3rd ODI: 3ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ; ರಾಹುಲ್ಗೆ ನಾಯಕತ್ವ
ಬೌಲಿಂಗ್ನಲ್ಲಿ ಮಿಂಚಿದ್ದ ಪ್ರಸಾದ್
53 ವರ್ಷದ ಪ್ರಸಾದ್ ಭಾರತ ಪರ 33 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರ ಖಾತೆಯಲ್ಲಿ 290 ವಿಕೆಟ್‌ಗಳಿವೆ. ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಪ್ರಸಾದ್ ಅತ್ಯಂತ ಯಶಸ್ವಿ ಆಟಗಾರ. ಇಲ್ಲಿಯವರೆಗೆ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ಅವರು ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ಪ್ರಸಾದ್ ಆಯ್ಕೆ ಖಚಿತವಾದರೆ, ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಸಂಕಷ್ಟ ಹೆಚ್ಚಾಗುವುದಂತೂ ಪಕ್ಕ.
ಅನುಪಯುಕ್ತ ದ್ವಿಪಕ್ಷೀಯ ಸರಣಿ ಗೆದ್ದಿದ್ದೇವೆ
ಬಾಂಗ್ಲಾದೇಶ ವಿರುದ್ಧ ಸತತ ಎರಡು ಸೋಲಿನ ಬಳಿಕ ಟ್ವೀಟ್ ಮಾಡಿದ್ದ ಪ್ರಸಾದ್, ‘ಭಾರತ ವಿಶ್ವದಾದ್ಯಂತ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಮುಂದಿದೆ. ಸೀಮಿತ ಓವರ್‌ಗಳ ಕ್ರಿಕೆಟ್ ಆಡುವ ವಿಷಯಕ್ಕೆ ಬಂದರೆ, ನಮ್ಮ ವಿಧಾನವು 10 ವರ್ಷಗಳಷ್ಟು ಹಳೆಯದು. 2015ರ ವಿಶ್ವಕಪ್ ಬಳಿಕ ಇಂಗ್ಲೆಂಡ್ ತನ್ನ ಆಲೋಚನೆಯನ್ನು ಬದಲಿಸಿ ಕಠಿಣ ನಿರ್ಧಾರಗಳನ್ನು ಕೈಗೊಂಡು ಇದೀಗ ಶ್ರೇಷ್ಠ ತಂಡವಾಗಿ ಹೊರಹೊಮ್ಮಿದೆ. ಭಾರತವೂ ಇದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಐಪಿಎಲ್ ಆರಂಭವಾದಾಗಿನಿಂದ ನಾವು ಯಾವುದೇ ಟಿ20 ವಿಶ್ವಕಪ್ ಗೆದ್ದಿಲ್ಲ. ಮತ್ತೊಂದೆಡೆ, ನಾವು ಕಳೆದ ಐದು ವರ್ಷಗಳ ಬಗ್ಗೆ ಮಾತನಾಡುವುದಾದರೆ, ಅನುಪಯುಕ್ತ ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದ್ದನ್ನು ಬಿಟ್ಟರೆ, ಏಕದಿನ ಕ್ರಿಕೆಟ್ನಲ್ಲಿ ನಮ್ಮ ದಾಖಲೆ ಕೆಟ್ಟದಾಗಿದೆ. ನಮ್ಮ ತಪ್ಪುಗಳಿಂದ ನಾವು ಏನನ್ನೂ ಕಲಿತಿಲ್ಲ. ಇದರಿಂದಾಗಿ ಉತ್ತಮ ತಂಡವನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:39 pm, Fri, 9 December 22