ಕೂದಲೆಳೆ ಅಂತರದಲ್ಲಿ ಟೀಂ ಇಂಡಿಯಾ (Team India) ಮುಜುಗರದ ಸೋಲಿನಿಂದ ಪಾರಾಗಿದೆ. ಡಾಕಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ (India Vs Bangladesh) ಮೂರು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಗೆಲುವಿಗೆ 145 ರನ್‌ಗಳ ಗುರಿ ಪಡೆದಿದ್ದ ಭಾರತ ಗೆಲುವಿಗಾಗಿ ಹರಸಾಹಸ ಪಡಬೇಕಾಯಿತು. ಅಗ್ರ ಕ್ರಮಾಂಕದ ವೈಫಲ್ಯದ ಹೊರತಾಗಿಯೂ, ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಪಂದ್ಯವನ್ನು ಗೆದ್ದುಕೊಂಡಿದಲ್ಲದೆ ಟೆಸ್ಟ್ ಸರಣಿಯನ್ನೂ ವಶಪಡಿಸಿಕೊಂಡಿದೆ. ಈ ಗೆಲುವಿನ ಮೂಲಕ ತನ್ನ ಅಭಿಮಾನಿಗಳಿಗೆ ಕ್ರಿಸ್ಮಸ್ ಗಿಫ್ಟ್ ನೀಡಿದೆ. ಒಂದು ಹಂತದಲ್ಲಿ ಕೇವಲ 74 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಭಾರತ ಈ ಪಂದ್ಯ ಸೋಲುತ್ತದೆ ಎಂತಲೇ ಎಲ್ಲರೂ ಭಾವಿಸಿದ್ದರು. ಅಲ್ಲದೆ ತಂಡದ ಪ್ರಮುಖ ಆಟಗಾರರೆಲ್ಲ ಪೆವಿಲಿಯನ್ ಸೇರಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದರಿಂದ ಬಾಂಗ್ಲಾಕ್ಕೆ ಗೆಲುವು ನಿಶ್ಚಿತ ಆಗಿತ್ತು. ಆದರೆ ಟೀಂ ಇಂಡಿಯಾದ ಈ ಆಟಗಾರರ ಅಮೋಘ ಪ್ರದರ್ಶನದಿಂದಲೇ ತಂಡ ಗೆಲುವಿನ ಕೇಕೆ ಹಾಕಿದೆ.
ಎಂಟನೇ ವಿಕೆಟ್‌ಗೆ ಆರ್ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ನೀಡಿದ ಅಜೇಯ ಜೊತೆಯಾಟವು ಭಾರತದ ಗೆಲುವಿಗೆ ಬಹುದೊಡ್ಡ ಕಾರಣವಾಗಿತ್ತು. ಭಾರತ ಅಲ್ಪ ರನ್ಗಳಿಗೆ ಏಳು ವಿಕೆಟ್ ಕಳೆದುಕೊಂಡಿದ್ದರಿಂದ ಇಬ್ಬರ ಮೇಲೂ ಒತ್ತಡವಿತ್ತು. 74 ರನ್ಗಳಿಂದ ಇನ್ನಿಂಗ್ಸ್ ಕಟ್ಟಲು ಮುಂದಾದ ಈ ಇಬ್ಬರು ತಂಡವನ್ನು ಗೆಲುವಿನ ದಡ ಸೇರಿಸಿದ ಬಳಿಕವೇ ಮೈದಾನ ತೊರೆದರು. ಇವರಿಬ್ಬರ ನಡುವೆ 104 ಎಸೆತಗಳಲ್ಲಿ 71 ರನ್‌ಗಳ ಅಜೇಯ ಜೊತೆಯಾಟವಿತ್ತು.
IND vs BAN: ಅಶ್ವಿನ್- ಅಯ್ಯರ್ ರೋಚಕ ಜೊತೆಯಾಟ; ಬಾಂಗ್ಲಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತ
ವಾಸ್ತವವಾಗಿ ಟೀಂ ಇಂಡಿಯಾದ ಈ ಸರಣಿ ಗೆಲುವಿಗೆ ಶ್ರೇಯರ್ ಅಯ್ಯರ್ ಅವರ ಆಟವೇ ಪ್ರಮುಖ ಕಾರಣವಾಗಿದೆ. ಮೊದಲ ಇನಿಂಗ್ಸ್‌ನಲ್ಲಿಯೂ ಟೀಂ ಇಂಡಿಯಾದ ಅಗ್ರ ಕ್ರಮಾಂಕದ ವೈಫಲ್ಯದ ನಡುವೆಯೂ ಅಯ್ಯರ್ 87 ರನ್‌ಗಳ ಇನ್ನಿಂಗ್ಸ್ ಆಡಿದರು. ಹೀಗಾಗಿ ರಿಷಬ್ ಪಂತ್ ಜತೆಗಿನ ಜೊತೆಯಾಟದಿಂದಾಗಿ ತಂಡ ಮೊದಲ ಇನಿಂಗ್ಸ್‌ನಲ್ಲಿ 87 ರನ್‌ಗಳ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಅದೇ ವೇಳೆ ಎರಡನೇ ಇನಿಂಗ್ಸ್ನಲ್ಲೂ ಸಂಕಷ್ಟದ ಪರಿಸ್ಥಿತಿಯಲ್ಲಿ ಸಮಯೋಜಿತ ಬ್ಯಾಟಿಂಗ್ ಮಾಡಿದರು.
ಅಕ್ಷರ್ ಪಟೇಲ್ ಕೂಡ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬೌಲಿಂಗ್ ಜೊತೆಗೆ ಬ್ಯಾಟ್‌ನಲ್ಲೂ ಅದ್ಭುತ ಪ್ರದರ್ಶನ ತೋರಿದ ಅಕ್ಷರ್, ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದರು. ಇದಾದ ಬಳಿಕ ರಾತ್ರಿ ಕಾವಲುಗಾರನಾಗಿ ಬ್ಯಾಟಿಂಗ್ಗೆ ಇಳಿದ ಅಕ್ಷರ್ ಆ ಜವಾಬ್ದಾರಿಯನ್ನೂ ಚೆನ್ನಾಗಿ ನಿರ್ವಹಿಸಿದರು. ಅಲ್ಲದೆ ನಾಲ್ಕನೇ ದಿನದಲ್ಲೂ ಬ್ಯಾಟಿಂಗ್ ಮಾಡಿದ ಅಕ್ಷರ್, ಕೊಹ್ಲಿ, ಪೂಜಾರ ಮತ್ತು ರಾಹುಲ್ ಅವರಂತಹ ಆಟಗಾರರು ವಿಫಲವಾದಾಗ 69 ಎಸೆತಗಳಲ್ಲಿ 34 ರನ್ ಗಳಿಸಿ ಗೆಲುವಿಗೆ ನೆರವಾದರು.
ಅಶ್ವಿನ್ ಕೂಡ ಇಲ್ಲಿ ಉತ್ತಮ ಆಲ್ ರೌಂಡ್ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಇದಲ್ಲದೇ ಟೀಂ ಇಂಡಿಯಾ ಪರ ಬ್ಯಾಟ್‌ನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಒತ್ತಡದ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ತಂಡಕ್ಕೆ ನೆರವಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 62 ಎಸೆತಗಳನ್ನು ಎದುರಿಸಿದ ಅಶ್ವಿನ್ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 42 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದರು. ಇದಕ್ಕಾಗಿ ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Sun, 25 December 22