IND vs BAN 2nd Test: ಅಶ್ವಿನ್ ಪಂದ್ಯಶ್ರೇಷ್ಠ, ಪೂಜಾರ ಸರಣಿಶ್ರೇಷ್ಠ: ಭಾರತ-ಬಾಂಗ್ಲಾದೇಶ ರೋಚಕ ಪಂದ್ಯ ಹೇಗಿತ್ತು?
India vs Bangladesh 2nd Test: ಇದೀಗ ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ನಲ್ಲಿ 3 ವಿಕೆಟ್ಗಳ ರೋಚಕ ಜಯದೊಂದಿಗೆ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಭಾರತ-ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯ ಹೇಗಿತ್ತು?, ಇಲ್ಲಿದೆ ನೋಡಿ.
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ (India vs Bangladesh) ಭರ್ಜರಿ ಜಯ ಸಾಧಿಸಿದೆ. ಬಾಂಗ್ಲಾ ನೀಡಿದ್ದ 145 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆದರೆ, ಅಂತಿಮ ಹಂತದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ರವಿಚಂದ್ರನ್ ಅಶ್ವಿನ್ (R Ashwin) ಎಚ್ಚರಿಕೆಯ ಜೊತೆಯಾಟ ಆಡಿ ತಂಡಕ್ಕೆ ಆಧಾರವಾಗಿ ನಿಂತು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಇದೀಗ ಟೀಮ್ ಇಂಡಿಯಾ 3 ವಿಕೆಟ್ಗಳ ರೋಚಕ ಜಯದೊಂದಿಗೆ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಭಾರತ-ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯ ಹೇಗಿತ್ತು?, ಇಲ್ಲಿದೆ ನೋಡಿ.
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್:
ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, ಬಾಂಗ್ಲಾದ ಆರಂಭವು ಉತ್ತಮವಾಗಿರಲಿಲ್ಲ. ಮೊಮಿನುಲ್ ಹಕ್ (84) ಹೊರತುಪಡಿಸಿದರೆ ಯಾವ ಆಟಗಾರರು ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಹೀಗಾಗಿ 73.5 ಓವರ್‌ಗಳಲ್ಲಿ ಬಾಂಗ್ಲಾ 227 ರನ್‌ಗಳಿಗೆ ಸರ್ವಪತನ ಕಂಡಿತು. ನಜ್ಮುಲ್ ಹುಸೇನ್ ಶಾಂಟೊ (25), ಜಾಕಿರ್ ಹಸನ್(15), ಶಕಿಬ್ ಅಲ್ ಹಸನ್ (16), ಮುಷ್ಫಿಕರ್ ರಹೀಮ್ (26) ಹಾಗೂ ಲಿಟನ್ ದಾಸ್ (15) ಬ್ಯಾಟಿಂಗ್‌ನಲ್ಲಿ ನಿರಾಶೆ ಮೂಡಿಸಿದರು. ಉಮೇಶ್ ಯಾದವ್ 4 ವಿಕೆಟ್ ಕಬಳಿಸಿದರು. ಇವರ ಜೊತೆಗೆ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದರು.
A cracking unbeaten 71-run stand between @ShreyasIyer15 (29*) & @ashwinravi99 (42*) power #TeamIndia to win in the second #BANvIND Test and 2⃣-0⃣ series victory ??
Scorecard – https://t.co/CrrjGfXPgL pic.twitter.com/XVyuxBdcIB
— BCCI (@BCCI) December 25, 2022
ಭಾರತ ಮೊದಲ ಇನ್ನಿಂಗ್ಸ್:
ಮೊದಲ ಇನ್ನಿಂಗ್ಸ್ ಶುರು ಮಾಡಿದ್ದ ಟೀಮ್ ಇಂಡಿಯಾ ಪುನಃ ಆರಂಭಿಕ ವೈಫಲ್ಯ ಅನುಭವಿಸಿತು. ಕೆಎಲ್ ರಾಹುಲ್ 10 ರನ್ಗೆ (45 ಎಸೆತ), ಶುಭ್ಮನ್ ಗಿಲ್ (20) ಬೇಗನೆ ನಿರ್ಗಮಿಸಿದರು. ಪೂಜಾರ 55 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಕೂಡ 24 ರನ್ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ 5ನೇ ವಿಕೆಟ್ಗೆ ಜೊತೆಯಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಆಧಾರವಾದರು. ಪಂತ್ 105 ಎಸೆತಗಳಲ್ಲಿ 7 ಫೋರ್, 5 ಭರ್ಜರಿ ಸಿಕ್ಸರ್ನೊಂದಿಗೆ 93 ರನ್ ಸಿಡಿಸಿ ಔಟಾದರು. ಅಯ್ಯರ್ 87 ರನ್ ಚಚ್ಚಿದರು. ಭಾರತ 86.3 ಓವರ್‌ಗಳಲ್ಲಿ 314 ರನ್ಗೆ ಆಲೌಟ್ ಆಯಿತು. ಬಾಂಗ್ಲಾ ಪರ ಶಕಿಬ್ ಅಲ್ ಹಸನ್ ಹಾಗೂ ತೈಜುಲ್ ಇಸ್ಲಾಂ ತಲಾ 4 ವಿಕೆಟ್ ಕಿತ್ತರು.
RCB Squad 2023: ಬಲಿಷ್ಠವಾಗಿದೆ ಬೆಂಗಳೂರು: ಆರ್ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ ನೋಡಿ
ಬಾಂಗ್ಲಾ ಎರಡನೇ ಇನ್ನಿಂಗ್ಸ್:
ಎರಡನೇ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶ 70.2 ಓವರ್‌ಗಳಲ್ಲಿ 231 ರನ್ ಕಲೆಹಾಕಿತು. ಜಾಕಿರ್ ಹಸನ್ 135 ಎಸೆತಗಳಲ್ಲಿ 51 ರನ್ ಗಳಿಸಿದರು. ಲಿಟನ್ ದಾಸ್ ತಂಡಕ್ಕೆ ಆಧಾರವಗಿ 73 ರನ್ ಬಾರಿಸಿದರು. ನೂರುಲ್ ಹಸನ್ ಹಾಗೂ ಟಸ್ಕಿನ್ ಅಹ್ಮದ್ ತಲಾ 31 ರನ್ ಗಳಿಸಿದರು. ಭಾರತ ಪರ ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತರೆ, ಅಶ್ವಿನ್ ಹಾಗೂ ಸಿರಾಜ್ ತಲಾ 2 ವಿಕೆಟ್ ಪಡೆದರು.
ಭಾರತ ಎರಡನೇ ಇನ್ನಿಂಗ್ಸ್:
145 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಅಚ್ಚರಿಯ ರೀತಿಯಲ್ಲಿ ಕುಸಿತ ಕಂಡಿತು. ಓಪನರ್ಗಳಾದ ಶುಭ್ಮನ್ ಗಿಲ್ 7 ರನ್ಗೆ ಹಾಗೂ ನಾಯಕ ಕೆಎಲ್ ರಾಹುಲ್ 2 ರನ್ಗೆ ಪೆವಿಲಿಯನ್ ಸೇರಿಕೊಂಡರು. ಚೇತೇಶ್ವರ್ ಪೂಜಾರ ಕೂಡ 6 ರನ್ಗೆ ನಿರ್ಗಮಿಸಿ ಶಾಕ್ ನೀಡಿದರು. ವಿರಾಟ್ ಕೊಹ್ಲಿ (1) ಆಟ ಕೂಡ ನಡೆಯಲಿಲ್ಲ. 50 ರನ್ಗೂ ಮೊದಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 45 ರನ್ ಗಳಿಸಿತ್ತು. ಗೆಲುವಿಗೆ 100 ರನ್ಗಳ ಅವಶ್ಯಕತೆಯಿತ್ತು. ನಾಲ್ಕನೇ ದಿನನಾಟದ ಆರಂಭದಲ್ಲೇ ಅಕ್ಷರ್ ಪಟೇಲ್ (34) ಹಾಗೂ ಜಯದೇವ್ ಉನಾದ್ಕಟ್ (13) ಪೆವಿಲಿಯನ್ ಸೇರಿಕೊಂಡರು. ರಿಷಭ್ ಪಂತ್ ಕೂಡ 9 ರನ್ಗೆ ಔಟಾಗಿದ್ದು ತಂಡ ಆತಂಕಕ್ಕೆ ಸಿಲುಕಿತು.
ಈ ಸಂದರ್ಭ ಸೋಲಿನ ಸುಳಿಗೆ ಸಿಲುಕಿದ್ದ ಭಾರತಕ್ಕೆ ಆಸರೆಯಾಗಿದ್ದು ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್. ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ 71 ರನ್ಗಳ ಜೊತೆಯಾಟ ಆಡಿ ಕೊನೆಯವರೆಗೂ ನಿಂತು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಅಯ್ಯರ್ 46 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರೆ, ಅಶ್ವಿನ್ 62 ಎಸೆತಗಳಲ್ಲಿ ಅಜೇಯ 42 ರನ್ ಕಲೆಹಾಕಿದರು. ಭಾರತ 47 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವು ಕಂಡಿತು. ಅಶ್ವಿನ್ ಪಂದ್ಯಶ್ರೇಷ್ಠ ಬಾಚಿಕೊಂಡರೆ, ಪೂಜಾರ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ