IND vs BAN 2nd Test: ಪಂತ್-ಅಯ್ಯರ್ ಜೊತೆಯಾಟದ ಫಲ: ಭಾರತ 314 ರನ್ಸ್ಗೆ ಆಲೌಟ್
India vs Bangladesh 2nd Test: ಭಾರತದ ಟಾಪ್ ಆರ್ಡರ್ ಕುಸಿತ ಕಂಡರೂ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಹಾಗೂ ಶ್ರೇಯಸ್ ಅಯ್ಯರ್ ಅವರ ಶತಕದ ಜೊತೆಯಾಟದ ನೆರವಿನಿಂದ 314 ರನ್ ಕಲೆಹಾಕಿದೆ.
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ (India vs Bangladesh) ಟಾಪ್ ಆರ್ಡರ್ ಕುಸಿತ ಕಂಡರೂ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಹಾಗೂ ಶ್ರೇಯಸ್ ಅಯ್ಯರ್ ಅವರ ಶತಕದ ಜೊತೆಯಾಟದ ನೆರವಿನಿಂದ 314 ರನ್ ಕಲೆಹಾಕಿದೆ. 100 ರನ್ಗೂ ಮೊದಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಪಂತ್ ಹಾಗೂ ಶ್ರೇಯಸ್ ಅಯ್ಯರ್ (Shreyas Iyer) 159 ರನ್ಗಳ ಜೊತೆಯಾಟ ಆಡಿ ತಂಡಕ್ಕೆ ಆಧಾರವಾಗಿ ನಿಂತರು. ಟೀಮ್ ಇಂಡಿಯಾ 87 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಇದೀಗ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾ ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಿದೆ.
ಮೊದಲ ದಿನವೇ ಬಾಂಗ್ಲಾ ಪಡೆಯನ್ನು 227 ರನ್ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಶುರು ಮಾಡಿದ್ದ ಟೀಮ್ ಇಂಡಿಯಾ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 8 ಓವರ್ಗಳಿಗೆ 19 ರನ್ ಗಳಿಸಿತ್ತು. ಎರಡನೇ ದಿನವಾದ ಇಂದು ಬ್ಯಾಟಿಂಗ್ ಮುಂದುವರೆಸಿದ ಟೀಮ್ ಇಂಡಿಯಾ ಪುನಃ ಆರಂಭಿಕ ವೈಫಲ್ಯ ಅನುಭವಿಸಿತು. ತಂಡದ ಮೊತ್ತ 27 ಆಗುವಷ್ಟರಲ್ಲಿ ಕಳಪೆ ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ 10 ರನ್ಗೆ (45 ಎಸೆತ) ಔಟಾದರು. ಇದರ ಬೆನ್ನಲ್ಲೇ 39 ಎಸೆತಗಳಲ್ಲಿ 20 ರನ್ ಗಳಿಸಿ ಶುಭ್ಮನ್ ಗಿಲ್ ಕೂಡ ನಿರ್ಗಮಿಸಿದರು. ಈ ಸಂದರ್ಭ ಒಂದಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು.
ಐಪಿಎಲ್ ಮಿನಿಹರಾಜು ಪ್ರಕ್ರಿಯೆ ಲೈವ್
ಆದರೆ, ಈ ಜೋಡಿ 34 ರನ್ಗಳ ಜೊತೆಯಾಟ ಆಡಿತಷ್ಟೆ. ಪೂಜಾರ 55 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರೆ, ಊಟದ ವಿರಾಮದ ಬಳಿಕ ವಿರಾಟ್ ಕೊಹ್ಲಿ 73 ಎಸೆತಗಳಲ್ಲಿ 24 ರನ್ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ 5ನೇ ವಿಕೆಟ್ಗೆ ಜೊತೆಯಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಆಧಾರವಾದರು. ಪಂತ್ ತಮ್ಮದೇ ಶೈಲಿಯ ಸ್ಫೋಟಕ ಆಟದ ಮೊರೆಹೋದರೆ, ಅಯ್ಯರ್ ಇವರಿಗೆ ಉತ್ತಮ ಸಾಥ್ ನೀಡಿದರು. 49 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಪಂತ್ ಶತಕದ ಅಂಚಿನಲ್ಲಿ ಎಡವಿದರು. 105 ಎಸೆತಗಳಲ್ಲಿ 7 ಫೋರ್, 5 ಭರ್ಜರಿ ಸಿಕ್ಸರ್ನೊಂದಿಗೆ 93 ರನ್ ಸಿಡಿಸಿ ಔಟಾದರು.
ಇದರ ಬೆನ್ನಲ್ಲೇ ಅಯ್ಯರ್ ಕೂಡ 105 ಎಸೆತಗಳಲ್ಲಿ 10 ಫೋರ್, 2 ಸಿಕ್ಸರ್ನೊಂದಿಗೆ 87 ರನ್ಗೆ ಬ್ಯಾಟ್ ಕೆಳಗಿಟ್ಟರು. ಬಳಿಕ ಬಂದ ಬ್ಯಾಟರ್ಗಳು ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಅಕ್ಷರ್ 4, ಅಶ್ವಿನ್ 12, ಉಮೇಶ್ 14, ಸಿರಾಜ್ 7 ಹಾಗೂ ಜಯದೇವ್ ಉನಾದ್ಕಟ್ ಅಜೇಯ 14 ರನ್ ಗಳಿಸಿದರು. ಭಾರತ 86.3 ಓವರ್‌ಗಳಲ್ಲಿ 314 ರನ್ಗೆ ಆಲೌಟ್ ಆಯಿತು. ಬಾಂಗ್ಲಾ ಪರ ಶಕಿಬ್ ಅಲ್ ಹಸನ್ ಹಾಗೂ ತೈಜುಲ್ ಇಸ್ಲಾಂ ತಲಾ 4 ವಿಕೆಟ್ ಕಿತ್ತರು.
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್:
ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, ಬಾಂಗ್ಲಾದ ಆರಂಭವು ಉತ್ತಮವಾಗಿರಲಿಲ್ಲ. ಮೊಮಿನುಲ್ ಹಕ್ (84) ಹೊರತುಪಡಿಸಿದರೆ ಯಾವ ಆಟಗಾರರು ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಹೀಗಾಗಿ 73.5 ಓವರ್‌ಗಳಲ್ಲಿ ಬಾಂಗ್ಲಾ 227 ರನ್‌ಗಳಿಗೆ ಸರ್ವಪತನ ಕಂಡಿತು. ನಜ್ಮುಲ್ ಹುಸೇನ್ ಶಾಂಟೊ (25), ಜಾಕಿರ್ ಹಸನ್(15), ಶಕಿಬ್ ಅಲ್ ಹಸನ್ (16), ಮುಷ್ಫಿಕರ್ ರಹೀಮ್ (26) ಹಾಗೂ ಲಿಟನ್ ದಾಸ್ (15) ಬ್ಯಾಟಿಂಗ್‌ನಲ್ಲಿ ನಿರಾಶೆ ಮೂಡಿಸಿದರು. 130 ರನ್‌ಗಳವರೆಗೆ ಕೇವಲ 4 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ತಂಡವು ನಂತರ ನಿಂರತರವಾಗಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಲೇ ಸಾಗಿ ಆಲೌಟ್ ಆಯಿತು.
ಭಾರತ ತಂಡದ ಪರ ಶಿಸ್ತಿನ ದಾಳಿ ನಡೆಸಿದ ಉಮೇಶ್ ಯಾದವ್ 15 ಓವರ್ಗಳನ್ನು ಎಸೆದು 4 ಮೇಡನ್ ಓವರ್ಗಳೊಂದಿಗೆ ಕೇವಲ 25 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇವರ ಜೊತೆಗೆ ರವಿಚಂದ್ರನ್ ಅಶ್ವಿನ್ 71 ರನ್ ನೀಡಿ 4 ವಿಕೆಟ್ ಪಡೆದರು. 12 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ಜಯದೇವ್ ಉನಾದ್ಕತ್ 2 ವಿಕೆಟ್ ಕಬಳಿಸಿದರು. ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಒಂದು ಬದಲಾವಣೆ ತರಲಾಯಿತು. ಕಳೆದ ಪಂದ್ಯದಲ್ಲಿ 8 ವಿಕೆಟ್ ಕಬಳಿಸಿದ್ದ ಕುಲ್ದೀಪ್ ಯಾದವ್ ಅವರ ಬದಲು ಜಯದೇವ್ ಉನಾದ್ಕಟ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ