RCB Squad 2023: ಬಲಿಷ್ಠವಾಗಿದೆ ಬೆಂಗಳೂರು: ಆರ್‌ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ ನೋಡಿ
IPL 2023: ಐಪಿಎಲ್ 2023 ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 7 ಕೋಟಿ ರೂ. ಖರ್ಚು ಮಾಡಿ 7 ಆಟಗಾರರ ಖರೀದಿ ಮಾಡಿದೆ. ಹಾಗಾದರೆ ಈ ಬಾರಿಯ ಐಪಿಎಲ್ಗೆ ಆರ್‌ಸಿಬಿ ಪ್ಲೇಯಿಂಗ್ XI ಹೇಗಿರಬಹುದು?
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿ 15 ಆವೃತ್ತಿಗಳು ಆಗಿದ್ದರೂ ಈವರೆಗೆ ಕಪ್ ಗೆಲ್ಲದ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಒಂದು. ಪ್ರತಿಬಾರಿ ಹರಾಜಿನಲ್ಲಿ (IPL uction) ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಖರೀದಿಸಿದರೂ ಟೂರ್ನಿ ಆರಂಭವಾಗುವ ಹೊತ್ತಿಗೆ ಆ ಪ್ಲೇಯರ್ಗೆ ಇಂಜುರಿ (Injury) ಅಥವಾ ಫಾರ್ಮ್ ಸಮಸ್ಯೆ ಕಾಡುತ್ತದೆ. ಈ ಹಿಂದೆ ಹೆಚ್ಚು ಬ್ಯಾಕಪ್ ಆಟಗಾರರನ್ನು ಹೊಂದಿಲ್ಲದ ಆರ್‌ಸಿಬಿ (RCB) ತಂಡ ಈ ಬಾರಿಯ ಹರಾಜಿನಲ್ಲಿ ಕೆಲ ಯೋಜನೆಗಳನ್ನು ಮಾಡಿ ಇದ್ದ ಹಣದಲ್ಲಿ ಏಳು ಆಟಗಾರರನ್ನು ಪಡೆದುಕೊಂಡಿದೆ. ಹರಾಜಿಗೂ ಮುನ್ನ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡು, 5 ಆಟಗಾರರನ್ನು ಬಿಡುಗಡೆ ಮಾಡಿತ್ತು. ಈಗ 7 ಕೋಟಿ ರೂ. ಖರ್ಚು ಮಾಡಿ ಆರ್‌ಸಿಬಿ 7 ಆಟಗಾರರ ಖರೀದಿ ಮಾಡಿದೆ.
ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ಕೆಲ ಸ್ಟಾರ್ ಆಟಗಾರರ ಖರೀದಿಗೆ ಬಲೆ ಬೀಸಿತಾದರೂ ತನ್ನ ಪರ್ಸ್ನಲ್ಲಿ ಕೇವಲ 8.75 ಕೋಟಿ ರೂ. ಇದ್ದ ಕಾರಣ ದೊಡ್ಡ ಮೊತ್ತದ ವರೆಗೆ ಬಿಡ್ ಮಾಡಲಿಲ್ಲ. ಇದೀಗ 7 ಹೊಸ ಆಟಗಾರರು ಸೇರ್ಪಡೆ ಆಗಿರುವುದರಿಂದ ಆರ್‌ಸಿಬಿ ತಂಡದಲ್ಲಿ ಒಟ್ಟು 25 ಆಟಗಾರರ ಸ್ಥಾನವನ್ನು ಭರ್ತಿಗೊಳಿಸಿದೆ. ಇಬ್ಬರು ವಿದೇಶಿ ಆಟಗಾರರು ಆರ್‌ಸಿಬಿ ಪಾಲಾದರೆ, ಉಳಿದ ಐವರು ದೇಶೀಯ ಆಟಗಾರರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮೊದಲ ಖರೀದಿಯಾಗಿ ಇಂಗ್ಲೆಂಡ್‌ನ ಎಡಗೈ ವೇಗಿ ರೀಸ್ ಟಾಪ್ಲೀ (1.9 ಕೋಟಿ ರೂ.) ಅವರನ್ನು ತೆಗೆದುಕೊಂಡಿತು. 2 ಕೋಟಿ ರೂ. ಗಳ ಬೆಲೆ ನೀಡಿ ಇಂಗ್ಲೆಂಡ್‌ನ ಆಲ್‌ರೌಂಡರ್ ವಿಲ್ ಜಾಕ್ಸ್ ಬೆಂಗಳೂರು ಪಾಲಾದರು.
ದೇಶೀ ಪ್ರತಿಭೆ ಮನೋಜ್ ಭಂಡಾಜೆ ಮೂಲ ಬೆಲೆ 20 ಲಕ್ಷ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡರು. ಅಂತೆಯೆ ಹಿಮಾಂಶು ಶರ್ಮಾ (20 ಲಕ್ಷ), ರಜನ್ ಕುಮಾರ್ (70 ಲಕ್ಷ), ಅವಿನಾಶ್ ಸಿಂಗ್ (60 ಲಕ್ಷ) ಹಾಗೂ ಸೋನು ಯಾದವ್ (20 ಲಕ್ಷ) ಹೊಸದಾಗಿ ತಂಡ ಸೇರಿಕೊಂಡವರಗಿದ್ದರೆ. ಹಾಗಾದರೆ, ಐಪಿಎಲ್ 2023 ರಲ್ಲಿ ಆರ್‌ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು?.
Kyle Jamieson: ಕಳೆದ ಸೀಸನ್ನಲ್ಲಿ 15 ಕೋಟಿಗೆ ಸೇಲ್ ಆದ ಈ ಪ್ಲೇಯರ್ ಈಬಾರಿ ಹರಾಜಾಗಿದ್ದು ಕೇವಲ 1 ಕೋಟಿಗೆ
ಆರ್‌ಸಿಬಿ ಪರ ಓಪನರ್ಗಳಾಗಿ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಕಣಕ್ಕಿಳಿಯುವುದು ಖಚಿತ. ರಜತ್ ಪಟಿದಾರ್ ಕಳೆದ ಸೀಸನ್ನಲ್ಲಿ ಭರ್ಜರಿ ಪ್ರದರ್ಶನ ತೋರಿ ತಮ್ಮ ಮೂರನೇ ಕ್ರಮಾಂಕವನ್ನು ಭದ್ರ ಪಡಿಸಿಕೊಂಡಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ. ಇಂಗ್ಲೆಂಡ್‌ನ ಆಲ್‌ರೌಂಡರ್ ವಿಲ್ ಜಾಕ್ಸ್ ಐದನೇ ಕ್ರಮಾಂಕದಲ್ಲಿ ಆಡಿದರೆ ಉತ್ತಮ. ಇವರು ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ತಂಡಕ್ಕೆ ನೆರವಾಗಲಿದ್ದಾರೆ. ದಿನೇಶ್ ಕಾರ್ತಿಕ್ 6ನೇ ಕ್ರಮಾಂಕದಲ್ಲಿ ಬಂದು ಫಿನಿಶಿಂಗ್ ಜವಾಬ್ದಾರಿ ವಹಿಸಲಿದ್ದಾರೆ.
ಶಹ್ಬಾಹ್ ಅಹ್ಮದ್ ಮತ್ತು ವನಿಂದು ಹಸರಂಗ ಸ್ಪಿನ್ ಜೋಡಿಯಾದರೆ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಹಾಗೂ ಅವಿನಾಶ್ ಸಿಂಗ್ ವೇಗಿಗಳಾಗಿದ್ದಾರೆ. ಆರ್‌ಸಿಬಿ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಜೋಶ್ ಹ್ಯಾಜ್ಲೆವುಡ್ ಈ ಬಾರಿಯ ಐಪಿಎಲ್ನಲ್ಲಿ ಆಡುವ ಬಗ್ಗೆ ಇನ್ನೂ ಅನುಮಾನವಿದೆ. ಐಪಿಎಲ್ ಬಳಿಕ ಪ್ರತಿಷ್ಠಿತ ಆ್ಯಶಸ್ ಸರಣಿ ಇರುವ ಕಾರಣ ಹ್ಯಾಜ್ಲೆವುಡ್ ವಿಶ್ರಾಂತಿ ಅಥವಾ ಅಭ್ಯಾಸಕ್ಕೆಂದು ಐಪಿಎಲ್ನಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಅಂತೆಯೆ ಗ್ಲೆನ್ ಮ್ಯಾಕ್ಸ್‌ವೆಲ್ ಇಂಜರಿಯಿಂದ ಇನ್ನೂ ಗುಣಮುಖರಾಗಿಲ್ಲ. ಇವರ ಲಭ್ಯತೆ ಬಗ್ಗೆಯೂ ಅನುಮಾನವಿದೆ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ವಿಲ್ ಜಾಕ್ಸ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹ್ಬಾಹ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಅವಿನಾಶ್ ಸಿಂಗ್.
ಒಟ್ಟು ಸದಸ್ಯರ ಆರ್‌ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ರಜತ್ ಪಾಟಿದಾರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವನಿಂದು ಹಸರಂಗ, ಶಹಬಾಜ್ ಅಹಮದ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹಿಮಾಂಶು ಶರ್ಮಾ, ವಿಲ್ ಜಾಕ್ಸ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಕರಣ್ ಶರ್ಮಾ, ರೀಸ್ ಟೋಪ್ಲಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Sat, 24 December 22