ಜೂನ್ 1ರ ಶನಿವಾರದಂದು ಅಂದರೆ ನಾಳೆ, ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Nassau County International Cricket Stadium) 2024 ರ ಟಿ20 ವಿಶ್ವಕಪ್ನ (T20 World Cup 2024) ಅಭ್ಯಾಸ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ (India vs Bangladesh) ಪರಸ್ಪರ ಮುಖಾಮುಖಿಯಾಗಲಿವೆ. ಚುಟುಕು ವಿಶ್ವಕಪ್ಗೆ ತಯಾರಿಯ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ. ಮೇ 26 ರಂದೇ ಅಮೆರಿಕಕ್ಕೆ ತೆರಳಿದ್ದ ಟೀಂ ಇಂಡಿಯಾ (Team India) ಈಗಾಗಲೇ ಅಭ್ಯಾಸದಲ್ಲಿ ನಿರತವಾಗಿದೆ. ಹೀಗಾಗಿ ಲೀಗ್ ಆರಂಭಕ್ಕೂ ಮುನ್ನ ತಂಡದ ಸಾಮಥ್ಯ್ರವನ್ನು ಕಂಡುಕೊಳ್ಳುವ ಸಲುವಾಗಿ ಈ ಪಂದ್ಯ ಭಾರತಕ್ಕೆ ಮಹತ್ವದ್ದಾಗಿದೆ. ಮತ್ತೊಂದೆಡೆ ಬಾಂಗ್ಲಾದೇಶದ ಅಮೆರಿಕ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದಾಗ್ಯೂ, ಈ ಅಭ್ಯಾಸ ಪಂದ್ಯಕ್ಕೂ ಮುನ್ನ ನಡೆದ ಉಭಯ ತಂಡಗಳ ಟಿ20 ಸರಣಿಯಲ್ಲಿ ಆತಿಥೇಯ ಅಮೆರಿಕ, ಬಾಂಗ್ಲಾದೇಶ ತಂಡವನ್ನು 2-1 ಅಂತರದಿಂದ ಮಣಿಸಿ ಸರಣಿ ಗೆದ್ದುಕೊಂಡಿತ್ತು. ಈ ಅವಮಾನಕರ ಸೋಲಿನಿಂದ ಹೊರಬರಬೇಕಾದರೆ, ಬಾಂಗ್ಲಾದೇಶ ತಂಡಕ್ಕೆ ಟೀಂ ಇಂಡಿಯಾ ವಿರುದ್ಧದ ಗೆಲುವು ಅತ್ಯವಶ್ಯಕವಾಗಿದೆ.
ಈ ಪಂದ್ಯ ಅಭ್ಯಾಸ ಪಂದ್ಯವಾಗಿರುವುದರ ಹೊರತಾಗಿಯೂ, ಉಭಯ ತಂಡಗಳ ನಡುವಿನ ಇತ್ತೀಚಿನ ಮುಖಾಮುಖಿಯನ್ನು ಪರಿಗಣಿಸಿದರೆ ಇದು ರೋಚಕ ಪಂದ್ಯವಾಗುವ ನಿರೀಕ್ಷೆಯಿದೆ. ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಕಾಳಗಕ್ಕೆ ಸಾಕಷ್ಟು ಮಹತ್ವವಿದೆ. ಕಳೆದ ಕೆಲವು ವರ್ಷಗಳಲ್ಲಿ ಎರಡು ತಂಡಗಳ ನಡುವೆ ಅನೇಕ ಸ್ಮರಣೀಯ ಪಂದ್ಯಗಳು ನಡೆದಿವೆ ಎಂಬುದು ಗಮನಿಸಬೇಕಾದ ಸಂಗತಿ. ಅದಾಗ್ಯೂ ಮೆನ್ ಇನ್ ಬ್ಲೂ, ಬಾಂಗ್ಲಾ ಟೈಗರ್ಸ್ ಮೇಲೆ ಮೇಲುಗೈ ಸಾಧಿಸಿದ್ದು, ಎರಡು ತಂಡಗಳ ನಡುವೆ ಆಡಿದ 13 ಪಂದ್ಯಗಳಲ್ಲಿ ಭಾರತ 12 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ ನಾಳೆ ಅಂದರೆ ಜೂನ್ 1 ರಂದು ನಡೆಯಲ್ಲಿದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲ್ಲಿದೆ.
ಅಭ್ಯಾಸ ಪಂದ್ಯ ಅಮೆರಿಕದಲ್ಲಿ ನಡೆಯುತ್ತಿರುವ ಕಾರಣ ಉಭಯ ದೇಶಗಳ ಸಮಯದಲ್ಲಿ ಸಾಕಷ್ಟು ವ್ಯತ್ಯಾಸ ಇರಲಿದೆ. ಅದಾಗ್ಯೂ ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಭಾರತ ಮತ್ತು ಬಾಂಗ್ಲಾದೇಶದ ಅಭ್ಯಾಸ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ. ಹಾಗೆಯೇ ಟಿವಿಯಲ್ಲಿ ಈ ಪಂದ್ಯದವನ್ನು ಸ್ಟಾರ್ ಸ್ಪೋಟ್ರ್ಸ್ ನೆಟ್ವರ್ಕ್ನ ವಿವಿದ ಚಾನೆಲ್ಗಳಲ್ಲಿ ವೀಕ್ಷಿಸಬಹುದು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್
ಬಾಂಗ್ಲಾದೇಶ ತಂಡ: ನಜ್ಮುಲ್ ಹುಸೇನ್ ಶಾಂಟೊ (ನಾಯಕ), ತಸ್ಕಿನ್ ಅಹ್ಮದ್, ಲಿಟ್ಟನ್ ದಾಸ್, ಸೌಮ್ಯ ಸರ್ಕಾರ್, ತಂಝಿದ್ ಹಸನ್ ತಮೀಮ್, ಶಕೀಬ್ ಅಲ್ ಹಸನ್, ತೌಹಿದ್ ಹೃದಯ್, ಮಹ್ಮದ್ ಉಲ್ಲಾ ರಿಯಾದ್, ಜೇಕರ್ ಅಲಿ ಅನಿಕ್, ತನ್ವಿರ್ ಇಸ್ಲಾಂ, ಮಹೇದಿ ಹಸನ್, ರಿಶಾದ್ ಹುಸೇನ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್.
ಮೀಸಲು ಆಟಗಾರರು: ಅಫೀಫ್ ಹೊಸೈನ್, ಹಸನ್ ಮಹಮೂದ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ