India vs England: ಇಂಗ್ಲೆಂಡ್ ಡ್ರಾ ಸಾಧಿಸಿದ್ರು, ಗೆದ್ದಿದ್ದು ಭಾರತ..!

| Updated By: ಝಾಹಿರ್ ಯೂಸುಫ್

Updated on: Aug 09, 2021 | 6:57 PM

Team India: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದ ಪ್ರದರ್ಶನವನ್ನು ಗಮನಿಸಿದರೆ, ಇಂಗ್ಲೆಂಡ್​ ವಿರುದ್ದದ ಮೊದಲ ಟೆಸ್ಟ್​ನಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನ ನೀಡಿದೆ.

India vs England: ಇಂಗ್ಲೆಂಡ್ ಡ್ರಾ ಸಾಧಿಸಿದ್ರು, ಗೆದ್ದಿದ್ದು ಭಾರತ..!
Team India Test
Follow us on

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ (India vs England 1st test) ಡ್ರಾನಲ್ಲಿ ಅಂತ್ಯ ಕಂಡಿದೆ. ಪಂದ್ಯದ ಐದನೇ ದಿನ, ಟೀಮ್ ಇಂಡಿಯಾಗೆ ಗೆಲ್ಲಲು ಕೇವಲ 157 ರನ್ ಗಳ ಅಗತ್ಯವಿತ್ತು. ಆದರೆ ಮಳೆಯಿಂದಾಗಿ ಅಂತಿಮ ದಿನದಾಟ ನಡೆಯಲಿಲ್ಲ. ಹೀಗಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಈ ಪಂದ್ಯವನ್ನು ಟೀಮ್ ಇಂಡಿಯಾಗೆ ಗೆಲ್ಲಲು ಸಾಧ್ಯವಾಗದಿದ್ದರೂ ಒಟ್ಟಾರೆ ಪ್ರದರ್ಶನದಲ್ಲಿ ಜಯ ಸಾಧಿಸಿದೆ ಎಂದೇ ಹೇಳಬಹುದು. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಮುಗ್ಗರಿಸಿದ್ದ ಭಾರತ ಆತಿಥೇಯ ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್​ನಲ್ಲೇ ಭರ್ಜರಿ ಪ್ರದರ್ಶನ ನೀಡಿತು. ಅಷ್ಟೇ ಅಲ್ಲದೆ ಆತಿಥೇಯರ ಮೇಲೆ ಮಾನಸಿಕ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಿದ್ರೆ ಈ ಪಂದ್ಯದಲ್ಲಿ ಭಾರತದ ಪಾಲಿಗೆ ಪ್ಲಸ್ ಪಾಯಿಂಟ್ ಆದ ಪ್ರಮುಖ ಅಂಶಗಳೇನು ನೋಡೋಣ.

ಕೆಎಲ್ ರಾಹುಲ್ ಕಂಬ್ಯಾಕ್: ಎರಡು ಪೂರ್ಣ ವರ್ಷಗಳ ನಂತರ ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಟೆಸ್ಟ್ ಪಂದ್ಯವನ್ನಾಡಿದ್ದರು. ಈ ಪಂದ್ಯದಲ್ಲಿ ಉತ್ತಮ ಫಾರ್ಮ್​ ಪ್ರದರ್ಶಿಸಿದಲ್ಲದೆ, ಮೊದಲ ಇನ್ನಿಂಗ್ಸ್‌ನಲ್ಲಿ 84 ರನ್ ಬಾರಿಸಿದ್ದರು. ಹಾಗೆಯೇ ಎರಡನೇ ಇನ್ನಿಂಗ್ಸ್‌ನಲ್ಲಿ 26 ರನ್ ಕಲೆಹಾಕಿದ್ದರು. ಪ್ರಸ್ತುತ ಉತ್ತಮ ಫಾರ್ಮ್​ನಲ್ಲಿರುವ ರಾಹುಲ್ ಮುಂದಿನ ಟೆಸ್ಟ್ ಪಂದ್ಯದಲ್ಲೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಟೀಮ್ ಇಂಡಿಯಾದ ಆರಂಭಿಕ ಸಮಸ್ಯೆಯನ್ನು ದೂರ ಮಾಡುವ ಭರವಸೆ ಹುಟ್ಟುಹಾಕಿದ್ದಾರೆ.

ಬೌಲರುಗಳ ಪರಾಕ್ರಮ: ಇಂಗ್ಲೆಂಡ್​ ಪಿಚ್​ಗಳಲ್ಲಿ ಭಾರತೀಯ ಬೌಲರುಗಳು ಮಿಂಚುವುದು ಅತೀ ವಿರಳ. ಆದರೆ ನಾಟಿಂಗ್ಹ್ಯಾಮ್ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ವೇಗಿಗಳು ಪರಾಕ್ರಮ ಮೆರೆದಿದ್ದರು. ಅದರಲ್ಲೂ ಜಸ್​ಪ್ರೀತ್ ಬುಮ್ರಾ ಕಂಬ್ಯಾಕ್ ಮಾಡಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಯ್ತು. ಮೊದಲ ಇನಿಂಗ್ಸ್​ನಲ್ಲಿ 4 ವಿಕೆಟ್ ಉರುಳಿಸಿದ ಬುಮ್ರಾ, 2ನೇ ಇನಿಂಗ್ಸ್​ನಲ್ಲಿ 5 ವಿಕೆಟ್ ಕಬಳಿಸಿದರು. ಇನ್ನು ಶಾರ್ದುಲ್ ಠಾಕುರ್, ಮೊಹಮ್ಮದ್ ಶಮಿ ತಲಾ 4 ವಿಕೆಟ್ ಪಡೆದರೆ, ಸಿರಾಜ್ 3 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ತನ್ನ ಬೌಲಿಂಗ್ ವಿಭಾಗದ ವೈಫಲ್ಯತೆಯನ್ನು ಟೀಮ್ ಇಂಡಿಯಾ ಮರೆ ಮಾಡಿದೆ ಎಂದೇ ಹೇಳಬಹುದು.

ಬಲಿಷ್ಠ ಪ್ಲೇಯಿಂಗ್ ಇಲೆವೆನ್: ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್​ ಅನ್ನು ಕಣಕ್ಕಿಳಿಸಿತು. ನಾಲ್ಕು ವೇಗದ ಬೌಲರ್‌ಗಳು ಮತ್ತು ಒಬ್ಬ ಸ್ಪಿನ್ನರ್‌ನೊಂದಿಗೆ ಪ್ರಯೋಗ ನಡೆಸಿತ್ತು. ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ಸ್ಪಿನ್ನರ್​ಗಳು ಯಶಸ್ಸು ಸಾಧಿಸುವುದು ಕಡಿಮೆ. ಹೀಗಾಗಿ ಅಶ್ವಿನ್ ಬದಲು ಆಲ್​ರೌಂಡರ್ ರವೀಂದ್ರ ಜಡೇಜಾರನ್ನು ಕಣಕ್ಕಿಳಿಸಲಾಗಿತ್ತು. ಈ ಪ್ಲ್ಯಾನ್ ಫಲ ನೀಡಿತು. ಅತ್ತ ವೇಗಿಗಳು ಮಿಂಚಿದರೆ, ಸ್ಪಿನ್ ಆಲ್​ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆದ ಜಡೇಜಾ ಮೊದಲ ಇನ್ನಿಂಗ್ಸ್‌ನಲ್ಲಿ 56 ರನ್ ಬಾರಿಸಿದರು.

ಬೌಲರುಗಳ ಮಿಂಚಿಂಗ್: ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್ ಬೌಲರುಗಳನ್ನು ಟೀಮ್ ಇಂಡಿಯಾ ವೇಗಿಗಳು ಆತ್ಮ ವಿಶ್ವಾಸದಿಂದಲೇ ಎದುರಿಸಿದ್ದು ವಿಶೇಷವಾಗಿತ್ತು. ಬುಮ್ರಾ 28 ರನ್ ಬಾರಿಸಿದರೆ ಶಮಿ 13 ಮತ್ತು ಸಿರಾಜ್ ಔಟಾಗದೆ 7 ರನ್ ಗಳಿಸಿದ್ದರು. ಅಲ್ಲದೆ ಕೊನೆಯ 3 ಬ್ಯಾಟ್ಸ್‌ಮನ್‌ಗಳು 48 ರನ್ ಕೊಡುಗೆ ನೀಡುವ ಮೂಲಕ 95 ರನ್ ಗಳ ಮುನ್ನಡೆ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇಂಗ್ಲೆಂಡ್ ಪರದಾಟ: ಟೀಮ್ ಇಂಡಿಯಾ ಆಟಗಾರರ ಅದ್ಭುತ ಪ್ರದರ್ಶನದ ಮುಂದೆ ತವರಿನಲ್ಲಿಯೇ ಇಂಗ್ಲೆಂಡ್ ಆಟಗಾರರು ಅಕ್ಷರಶಃ ಪರದಾಡಿದ್ದರು. ಜೋ ರೂಟ್ ಹೊರತುಪಡಿಸಿ, ಎಲ್ಲಾ ಬ್ಯಾಟ್ಸ್‌ಮನ್‌ಗಳು ಭಾರತೀಯ ವೇಗದ ಬೌಲರ್‌ಗಳ ಮುಂದೆ ಮಂಡಿಯೂರಿದ್ದರು. ಡೊಮ್ ಸಿಬ್ಲಿ, ಡಾನ್ ಲಾರೆನ್ಸ್, ಜ್ಯಾಕ್ ಕ್ರೌಲಿ, ರೋರಿ ಬರ್ನ್ಸ್ ಅವರನ್ನು ಬುಮ್ರಾ-ಸಿರಾಜ್ ಮತ್ತು ಶಮಿ ವೇಗದಿಂದ ಕಂಗಾಲಾಗಿದ್ದರು. ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ದೌರ್ಬಲ್ಯವನ್ನು ಅರಿತ ಭಾರತೀಯ ವೇಗಿಗಳು ಅದರ ಸಂಪೂರ್ಣ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಮುಂದಿನ ಟೆಸ್ಟ್​ನಲ್ಲೂ ಭಾರತೀಯ ವೇಗಿಗಳು ಇಂಗ್ಲೆಂಡ್ ವಿರುದ್ದ ಹಿಡಿತ ಸಾಧಿಸುವುದರಲ್ಲಿ ಸಂಶಯವೇ ಇಲ್ಲ ಎನ್ನಬಹುದು.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದ ಪ್ರದರ್ಶನವನ್ನು ಗಮನಿಸಿದರೆ, ಇಂಗ್ಲೆಂಡ್​ ವಿರುದ್ದದ ಮೊದಲ ಟೆಸ್ಟ್​ನಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಪಂದ್ಯ ಡ್ರಾ ಆದರೂ ಒಟ್ಟಾರೆ ಪ್ರದರ್ಶನದ ಮೂಲಕ ಟೀಮ್ ಇಂಡಿಯಾ ಜಯ ಸಾಧಿಸಿದೆ ಎನ್ನಬಹುದು. ಅಷ್ಟೇ ಅಲ್ಲದೆ ಈ ಭರ್ಜರಿ ಪ್ರದರ್ಶನವು ಮುಂದಿನ ಪಂದ್ಯದಲ್ಲೂ ಪ್ರತಿಫಲಿಸಲಿದೆ ಎಂದೇ ಹೇಳಬಹುದು.

ಇದನ್ನೂ ಓದಿ:  IPL 2021: ಐಪಿಎಲ್​ನ ಹೊಸ ನಿಯಮದಿಂದ ಯಾರಿಗೆ ಅನುಕೂಲ?

ಇದನ್ನೂ ಓದಿ: IPL 2021: ಐಪಿಎಲ್ ಹೊಸ ಅಪ್ಡೇಡ್: ಆಟಗಾರರಿಗೆ ಬಿಗ್ ರಿಲೀಫ್

(India vs England 1st test 5 biggest positives for virat kohli team)

Published On - 6:56 pm, Mon, 9 August 21