IND vs ENG: ರಾಹುಲ್, ಜಡೇಜಾ ಅರ್ಧಶತಕ; ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ

|

Updated on: Jan 26, 2024 | 5:15 PM

IND vs ENG: ಹೈದರಾಬಾದ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ಇಂಗ್ಲೆಂಡ್ ತಂಡವನ್ನು 246 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆಡುತ್ತಿರುವ ರೋಹಿತ್ ಪಡೆ ಎರಡನೇ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 421 ರನ್ ಕಲೆಹಾಕಿದೆ.

IND vs ENG: ರಾಹುಲ್, ಜಡೇಜಾ ಅರ್ಧಶತಕ; ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ
ಟೀಂ ಇಂಡಿಯಾ
Follow us on

ಹೈದರಾಬಾದ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ಇಂಗ್ಲೆಂಡ್ ತಂಡವನ್ನು 246 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆಡುತ್ತಿರುವ ರೋಹಿತ್ (Rohit Sharma) ಪಡೆ ಎರಡನೇ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 421 ರನ್ ಕಲೆಹಾಕಿದೆ. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 175 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ತಂಡದ ಪರ ರವೀಂದ್ರ ಜಡೇಜಾ (Ravindra Jadeja) 81 ರನ್ ಹಾಗೂ ಅಕ್ಷರ್ ಪಟೇಲ್ (Akshar Patel) 35 ರನ್ ಬಾರಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಶತಕ ವಂಚಿತ ರಾಹುಲ್

119 ರನ್​ಗಳಿಗೆ 1 ವಿಕೆಟ್ ಕಳೆದುಕೊಂಡು 127 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತಕ್ಕೆ ದಿನದಾಟದ ಮೊದಲ ಓವರ್​ನಲ್ಲೇ ಆಘಾತ ಎದುರಾಯಿತು. ಆರಂಭಿಕ ಜೈಸ್ವಾಲ್ ಮೊದಲ ಓವರ್​ನಲ್ಲೇ 1 ಬೌಂಡರಿ ಬಾರಿಸಿ ಆ ಬಳಿಕ ಜೋ ರೂಟ್​ಗೆ ಕ್ಯಾಚಿತ್ತು ನಿರ್ಗಮಿಸಿದರು. 80 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಜೈಸ್ವಾಲ್ 20 ರನ್​ಗಳಿಂದ ಶತಕ ವಂಚಿತರಾದರು. ಆ ಬಳಿಕ ಬಂದ ಕೆಎಲ್ ರಾಹುಲ್, ಶುಭ್​ಮನ್ ಗಿಲ್ ಜೊತೆ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರು. ಆದರೆ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಗಿಲ್ 23 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಐದನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ 35 ರನ್​ಗಳ ಕೊಡುಗೆ ನೀಡಿ ಪೆವಿಲಿಯನ್ ಸೇರಿಕೊಂಡರು.

ಅಜೇಯ ಅರ್ಧಶತಕ ಸಿಡಿಸಿದ ಜಡೇಜಾ

ನಂತರ ರಾಹುಲ್​ಗೆ ಜೊತೆಯಾದ ಜಡೇಜಾ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ವೇಳೆ ರಾಹುಲ್ 86 ರನ್​ಗಳ ಇನ್ನಿಂಗ್ಸ್ ಆಡಿ ಶತಕ ವಂಚಿರಾದರೆ, ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ 41 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಅಶ್ವಿನ್ ಕೂಡ 1 ರನ್​ಗಳಿಗೆ ರನೌಟ್​ಗೆ ಬಲಿಯಾಗಬೇಕಾಯ್ತು. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ ರವೀಂದ್ರ ಜಡೇಜಾ ತಮ್ಮ ಅರ್ಧಶತಕ ಪೂರ್ಣಗೊಳಿಸಿದರು.

ಜೋ ರೂಟ್​ಗೆ 2 ವಿಕೆಟ್

ಅಶ್ವಿನ್ ವಿಕೆಟ್ ಬಳಿಕ ಬಂದ ಅಕ್ಷರ್ ಪಟೇಲ್ ದಿನದಾಟದಂತ್ಯವರೆಗೆ ಅಜೇಯರಾಗಿ ಉಳಿದು 35 ರನ್ ಸಿಡಿಸಿದರೆ, ರವೀಂದ್ರ ಜಡೇಜಾ ಕೂಡ 81 ರನ್ ಕಲೆಹಾಕಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲಿ ಹಾಗೂ ಜೋ ರೂಟ್ ತಲಾ 2 ವಿಕೆಟ್ ಪಡೆದರೆ, ಜ್ಯಾಕ್ ಲೀಚ್ ಹಾಗೂ ರೆಹಾನ್ ಅಹ್ಮದ್ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Fri, 26 January 24