ಸೌತಾಂಪ್ಟನ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಏಕಪಕ್ಷೀಯವಾಗಿ 50 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಇದೀಗ ಶನಿವಾರದಂದು ಟೀಂ ಇಂಡಿಯಾ (Team India) ಎರಡನೇ ಟಿ20ಗೆ ಸರಣಿ ಗೆಲ್ಲುವ ಉದ್ದೇಶದಿಂದ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಗಳಾಗುವ ಸಾಧ್ಯತೆ ಹೆಚ್ಚಿದೆ. ವರದಿಗಳ ಪ್ರಕಾರ, ಟೀಂ ಇಂಡಿಯಾದ ಆಡುವ XI ನಲ್ಲಿ ನಾಲ್ಕು ಬದಲಾವಣೆಗಳಾಗಬಹುದು. ಜೊತೆಗೆ ಮೊದಲ T20 ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರು ತಂಡದಿಂದ ಹೊರಹೋಗುವ ಸಾಧ್ಯತೆಗಳಿವೆ. ಎರಡನೇ ಟಿ20ಯಲ್ಲಿ ವಿರಾಟ್ ಕೊಹ್ಲಿ (Virat Kohli) ಆಡುವ XIಗೆ ಬರುವುದು ಖಚಿತ. ಕೊಹ್ಲಿ, ಫೆಬ್ರವರಿಯಲ್ಲಿ ತನ್ನ ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. 2021 ರ T20 ವಿಶ್ವಕಪ್ ನಂತರ, ವಿರಾಟ್ ಕೇವಲ ಎರಡು T20 ಪಂದ್ಯಗಳನ್ನು ಆಡಿದ್ದಾರೆ, ಆದರೆ ಇದರ ಹೊರತಾಗಿಯೂ, ಕೊಹ್ಲಿ ಎಂಟ್ರಿಯಿಂದ ಉತ್ತಮ ಫಾರ್ಮ್‌ನಲ್ಲಿರುವ ದೀಪಕ್ ಹೂಡಾ (Deepak Hooda) ತಂಡದಿಂದ ಹೊರಹೋಗಬಹುದು. 2ನೇ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಾಗಬಹುದಾದ ನಾಲ್ಕು ಬದಲಾವಣೆಗಳು ಹೀಗಿವೆ.
ಟೀಂ ಇಂಡಿಯಾದಲ್ಲಿ 4 ಬದಲಾವಣೆ?
– ಟೀಮ್ ಇಂಡಿಯಾದಲ್ಲಿ ಮೊದಲ ಬದಲಾವಣೆಯೆಂದರೆ ವಿರಾಟ್ ಕೊಹ್ಲಿ ಟಿ20 ತಂಡಕ್ಕೆ ವಾಪಸಾಗಲಿದ್ದು, ದೀಪಕ್ ಹೂಡಾ ಬದಲಿಗೆ ಅವರಿಗೆ ಅವಕಾಶ ನೀಡಬಹುದು. ದೀಪಕ್ ಹೂಡಾ ಐರ್ಲೆಂಡ್‌ನಲ್ಲಿ ಅದ್ಭುತ T20 ಶತಕವನ್ನು ಗಳಿಸಿದ್ದಾರೆ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ T20 ನಲ್ಲಿಯೂ 17 ಎಸೆತಗಳಲ್ಲಿ 33 ರನ್ ಗಳಿಸಿದ್ದಾರೆ. ಆದರೆ ಕೊಹ್ಲಿಗಾಗಿ, ಹೂಡಾ ಸ್ಥಾನ ಬಿಟ್ಟುಕೊಡುವ ಸಾಧ್ಯತೆಗಳು ಹೆಚ್ಚಿವೆ.
– ಟೀಮ್ ಇಂಡಿಯಾದಲ್ಲಿ ಎರಡನೇ ಬದಲಾವಣೆ ಎಂದರೆ ರಿಷಬ್ ಪಂತ್ ಪ್ರವೇಶ. ಈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸ್ಥಾನದಲ್ಲಿ ಆಡುವ ಸಾಧ್ಯತೆಗಳಿವೆ. ಪಂತ್ ಅವರ T20 ಫಾರ್ಮ್ ವಿಶೇಷವಾಗಿಲ್ಲ, ಆದರೆ ದಿನೇಶ್ ಕಾರ್ತಿಕ್ ಇತ್ತೀಚ್ಚಿನ ದಿನಗಳಲ್ಲಿ ತಮ್ಮ ಸಾಮಥ್ರ್ಯ ಸಾಬೀತುಪಡಿಸಿದ್ದಾರೆ. ಆದರೆ ಇದರ ಹೊರತಾಗಿಯೂ, ಕಾರ್ತಿಕ್ ಜಾಗಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ.
– ಟೀಂ ಇಂಡಿಯಾದಲ್ಲಿ ಮೂರನೇ ಬದಲಾವಣೆ ಎಂದರೆ ರವೀಂದ್ರ ಜಡೇಜಾ ಎಂಟ್ರಿಯಿಂದ ಅಕ್ಷರ್ ಪಟೇಲ್ ಬೆಂಚ್ ಕಾಯಬೇಕಾಗಬಹುದು. ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ಉತ್ತಮ ಫಾರ್ಮ್‌ನಲ್ಲಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಜಡೇಜಾ ಆಡುವ ನಿರೀಕ್ಷೆಯಿದೆ. ಅಲ್ಲದೆ, ಜಡೇಜಾ ಬ್ಯಾಟ್‌ನಲ್ಲೂ ಅದ್ಭುತ ಫಾರ್ಮ್‌ನಲ್ಲಿದ್ದಾರೆ.
– ಜಸ್ಪ್ರೀತ್ ಬುಮ್ರಾ ಕೂಡ ಆಡುವ XI ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಚೊಚ್ಚಲ ಟಿ20ಯಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಅರ್ಷದೀಪ್ ಸಿಂಗ್ ಮೊದಲ ಟಿ20ಗೆ ಮಾತ್ರ ಟೀಂ ಇಂಡಿಯಾದ ಭಾಗವಾಗಿರುವುದರಿಂದ ತಂಡದಿಂದ ಹೊರಹೋಗುವುದು ಖಚಿತವಾಗಿದೆ. ಈಗ ಬುಮ್ರಾ ಎರಡು ಮತ್ತು ಮೂರನೇ ಟಿ20ಯಲ್ಲಿ ಆಡುವುದನ್ನು ಕಾಣಬಹುದು. ಮೊದಲ T20 ನಲ್ಲಿ ಅರ್ಶ್ದೀಪ್ ಎರಡು ವಿಕೆಟ್ಗಳನ್ನು ಪಡೆದರು. ಜೊತೆಗೆ ಅವರು ತಮ್ಮ ಮೊದಲ ಓವರ್ ಅನ್ನು ಮೇಡನ್ ಬೌಲ್ ಮಾಡಿದರು.
ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ XI- ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಮತ್ತು ಯುಜ್ವೇಂದ್ರ ಚಾಹಲ್.