ಟಿ20 ಮಾದರಿಯಲ್ಲಿ ಟೆಸ್ಟ್ ಆಡಿದ ಹಿಟ್​ಮ್ಯಾನ್: ಮಗುವಿನ ಮೇಲೆ ದಬ್ಬಾಳಿಕೆ ಎಂದ ನೆಟ್ಟಿಗರು

India vs England 2nd test: ಮೊದಲ ವಿಕೆಟ್​ಗೆ 126 ರನ್​ ಪೇರಿಸುವ ಮೂಲಕ ಈ ಜೋಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಇದೇ ವೇಳೆ ಜೇಮ್ಸ್ ಅಂಡರ್ಸನ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಹಿಟ್​ಮ್ಯಾನ್ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.

ಟಿ20 ಮಾದರಿಯಲ್ಲಿ ಟೆಸ್ಟ್ ಆಡಿದ ಹಿಟ್​ಮ್ಯಾನ್: ಮಗುವಿನ ಮೇಲೆ ದಬ್ಬಾಳಿಕೆ ಎಂದ ನೆಟ್ಟಿಗರು
Rohit Sharma
Updated By: ಝಾಹಿರ್ ಯೂಸುಫ್

Updated on: Aug 12, 2021 | 8:55 PM

ಲಾರ್ಡ್ಸ್​ ಮೈದಾನದಲ್ಲಿ ಭಾರತ-ಇಂಗ್ಲೆಂಡ್ (India vs England 2nd test) ನಡುವೆ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit Sharma) ಅಕ್ಷರಶಃ ಅಬ್ಬರಿಸಿದ್ದರು. ಆರಂಭದಲ್ಲಿ ತುಸು ಎಚ್ಚರಿಕೆಯ ಆಟ ಪ್ರದರ್ಶಿಸಿದ್ದ ಹಿಟ್​ಮ್ಯಾನ್ ಆ ಬಳಿಕ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಅದರಲ್ಲೂ ಇಂಗ್ಲೆಂಡ್ ಯುವ ಎಡಗೈ ವೇಗಿ ಸ್ಯಾಮ್ ಕರನ್ ಅವರನ್ನು ಬೆಂಡೆತ್ತುವ ಮೂಲಕ ರೋಹಿತ್ ಶರ್ಮಾ ಸ್ಪೋಟಕ ಇನಿಂಗ್ಸ್ ಕಟ್ಟಿದರು.

ಮಳೆಯ ಕಾರಣ 20 ನಿಮಿಷ ತಡವಾಗಿ ಶುರುವಾದ ಈ ಪಂದ್ಯದಲ್ಲಿ ಭಾರತ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿಸಲ್ಪಟಿತು. ಆದರೆ ಇಂಗ್ಲೆಂಡ್ ನಾಯಕನ ನಿರ್ಧಾರವನ್ನು ಪ್ರಶ್ನಿಸುವಂತೆ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಟೀಮ್ ಇಂಡಿಯಾ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 126 ರನ್​ ಪೇರಿಸುವ ಮೂಲಕ ಈ ಜೋಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಇದೇ ವೇಳೆ ಜೇಮ್ಸ್ ಅಂಡರ್ಸನ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಹಿಟ್​ಮ್ಯಾನ್ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ಆದರೆ ಇದಕ್ಕೂ ಮುನ್ನವೇ ರೋಹಿತ್ ಶರ್ಮಾ 145 ಎಸೆತಗಳಲ್ಲಿ 83 ರನ್ ಬಾರಿಸಿದ್ದರು.

ಸ್ವಿಂಗ್​ಗೆ ಸಹಕಾರಿಯಾಗಿದ್ದ ಪಿಚ್​ನಲ್ಲಿ ಹಿಟ್​ಮ್ಯಾನ್ ಮಾತ್ರ ತಮ್ಮ ಸ್ಪೋಟಕ ಆಟ ಪ್ರದರ್ಶಿಸಿದರು. ಈ ವೇಳೆ ರೋಹಿತ್ ಶರ್ಮಾ ವಿಕೆಟ್ ಉರುಳಿಸುವ ವಿಶ್ವಾಸದೊಂದಿಗೆ ಚೆಂಡೆತ್ತಿಕೊಂಡು ಬಂದ ಸ್ಯಾಮ್ ಕರನ್​ ಅವರನ್ನು ಬೆಂಡೆತ್ತಿದರು. ಒಂದೇ ಓವರ್​ನಲ್ಲಿ ನಾಲ್ಕು ಬೌಂಡರಿ ಬಾರಿಸಿ ಹಿಟ್​ಮ್ಯಾನ್ ಟಿ20 ಮಾದರಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಅಷ್ಟೇ ಅಲ್ಲದೆ ಕರನ್ ಎಸೆದ 10 ಎಸೆತಗಳನ್ನು ಎದುರಿಸಿದ ರೋಹಿತ್ 5 ಬೌಂಡರಿಗಳನ್ನು ಬಾರಿಸಿದರು. ಇತ್ತ ಹಿಟ್​ಮ್ಯಾನ್ ಅಬ್ಬರಕ್ಕೆ ಯುವ ವೇಗಿ ಕಂಗಾಲಾದರು.

ಇದೀಗ ರೋಹಿತ್ ಶರ್ಮಾ ಅವರ ಸಿಡಿಲಬ್ಬರದ ಬ್ಯಾಟಿಂಗ್ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಟೆಸ್ಟ್​ನಲ್ಲಿ ಟಿ20 ಮಾದರಿಯಲ್ಲಿ ಮಗುವಿನ ಮೇಲೆ ಹಿಟ್​ಮ್ಯಾನ್​ನ ಗದಾಪ್ರಹಾರ ಎಂದು ಟ್ರೋಲ್ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ಸೀಮಿತವಾಗಿದ್ದ ರೋಹಿತ್ ಶರ್ಮಾ ಇದೀಗ ಟೆಸ್ಟ್​ನಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ 107 ಎಸೆತಗಳಲ್ಲಿ ಕೇವಲ 36 ರನ್​ ಬಾರಿಸಿ ತಮ್ಮ ರಕ್ಷಣಾತ್ಮಕ ಆಟವನ್ನು ಪ್ರದರ್ಶಿಸಿದ್ದ ಹಿಟ್​ಮ್ಯಾನ್ ಲಾರ್ಡ್ಸ್​ ಮೈದಾನದಲ್ಲಿ 145 ಎಸೆತಗಳಲ್ಲಿ 83 ರನ್ ಸಿಡಿಸಿ ಘರ್ಜಿಸಿರುವುದು ವಿಶೇಷ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್:
ಟೀಮ್ ಇಂಡಿಯಾ- ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್

ಇಂಗ್ಲೆಂಡ್ – ರೋರಿ ಬರ್ನ್ಸ್, ಡೊಮ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್, ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್, ಮೊಯೀನ್ ಅಲಿ, ಸ್ಯಾಮ್ ಕರನ್, ಓಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಅಂಡರ್ಸನ್

ಇದನ್ನೂ ಓದಿ: Ola electric scooter: ಓಲಾ ಸ್ಕೂಟರ್​ನಲ್ಲಿ ರಿವರ್ಸ್ ಗೇರ್ ಇರಲಿದೆಯಾ? ಇಲ್ಲಿದೆ ಮಾಹಿತಿ

ಇದನ್ನೂ ಓದಿ: ಇಂಟರ್‌ನೆಟ್‌ ಸೇವೆಗೆ ಟಾಟಾ ಸಜ್ಜು: ನೆಟ್​ವರ್ಕ್ ಇಲ್ಲದೆಯೂ ಸಿಗಲಿದೆ ಅಂತರ್ಜಾಲ ಸೇವೆ

ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು

ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ