Rohit Sharma: ರೋಹಿತ್ ಶರ್ಮಾ ಔಟಾಗಲು ಮಂಜ್ರೇಕರ್ ಕಾರಣ: ನೆಟ್ಟಿಗರಿಂದ ಆಕ್ರೋಶ..!

India vs England 2nd test: ಜಡೇಜಾ ಅವರು ಏಕದಿನದ ಪಂದ್ಯಗಳಿಗೆ ಸರಿಯಾದ ಆಟಗಾರನಾಗುವ ಮಾನದಂಡ ಹೊಂದಿಲ್ಲ. ಅಷ್ಟೇ ಅಲ್ಲದೆ ನನ್ನ ವೃತ್ತಿಜೀವನದಲ್ಲಿ ಈ ಮಟ್ಟದ ಬಾಲಂಗೋಚಿ ಆಟಗಾರನನ್ನ ನಾನು ಕಂಡಿಲ್ಲ.

Rohit Sharma: ರೋಹಿತ್ ಶರ್ಮಾ ಔಟಾಗಲು ಮಂಜ್ರೇಕರ್ ಕಾರಣ: ನೆಟ್ಟಿಗರಿಂದ ಆಕ್ರೋಶ..!
rohit sharma-sanjay manjrekar
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 12, 2021 | 10:25 PM

ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ (India vs England 2nd test) ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit Sharma) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆರಂಭದಲ್ಲಿ ತುಸು ಎಚ್ಚರಿಕೆಯ ಆಟವಾಡಿದ್ದ ಹಿಟ್​ಮ್ಯಾನ್ ಆ ಬಳಿಕ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಮಳೆಯ ಕಾರಣ 20 ನಿಮಿಷ ತಡವಾಗಿ ಶುರುವಾದ ಈ ಪಂದ್ಯದಲ್ಲಿ ಭಾರತ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿಸಲ್ಪಟಿತು. ಆದರೆ ಇಂಗ್ಲೆಂಡ್ ನಾಯಕನ ನಿರ್ಧಾರವನ್ನು ಪ್ರಶ್ನಿಸುವಂತೆ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಟೀಮ್ ಇಂಡಿಯಾ ಉತ್ತಮ ಆರಂಭ ಒದಗಿಸಿದರು.

ಮೊದಲ ವಿಕೆಟ್​ಗೆ 126 ರನ್​ ಪೇರಿಸುವ ಮೂಲಕ ಈ ಜೋಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಅಲ್ಲದೆ ಲಾರ್ಡ್ಸ್​ ಮೈದಾನದಲ್ಲಿ ಚೊಚ್ಚಲ ಶತಕ ಬಾರಿಸುವತ್ತ ರೋಹಿತ್ ಶರ್ಮಾ ಹೆಜ್ಜೆಯನ್ನಿಟ್ಟಿದ್ದರು. ಆದರೆ 44ನೇ ಓವರ್​ನಲ್ಲಿ ವೇಳೆ ಜೇಮ್ಸ್ ಅಂಡರ್ಸನ್ ಎಸೆದ ಚೆಂಡನ್ನು ಗುರುತಿಸುವಲ್ಲಿ ಎಡವಿದ ಹಿಟ್​ಮ್ಯಾನ್ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.

145 ಎಸೆತಗಳಲ್ಲಿ 83 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಹಿಟ್​ಮ್ಯಾನ್ ಔಟ್ ಆಗಲು ಕಾರಣ ಕಾಮೆಂಟ್ರಿ ಮಾಡುತ್ತಿದ್ದ ಸಂಜಯ್ ಮಂಜ್ರೇಕರ್ ಎಂಬುದು ಇದೀಗ ಅಭಿಮಾನಿಗಳ ವಾದ. ಏಕೆಂದರೆ ಇಂಗ್ಲೆಂಡ್ ಬೌಲರುಗಳನ್ನು ನಿರಾಯಾಸವಾಗಿ ಎದುರಿಸುತ್ತಿದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಬಗ್ಗೆ ಕಾಮೆಂಟ್ರಿ ಬಾಕ್ಸ್​ನಲ್ಲಿ ಮಂಜ್ರೇಕರ್ ವಿಶ್ಲೇಷಣೆಗೆ ಇಳಿದಿದ್ದರು. ಅದರಲ್ಲೂ ಅತ್ಯುತ್ತಮವಾಗಿ ಆಡುತ್ತಿದ್ದ ಹಿಟ್​ಮ್ಯಾನ್ ಬ್ಯಾಟಿಂಗ್ ಬಗ್ಗೆ ವಿಮರ್ಶಿಸಲಾರಂಭಿಸಿದ್ದರು. ಇತ್ತ ವಿಮರ್ಶೆಗಳೊಂದಿಗೆ ಸಂಜಯ್ ಮಂಜ್ರೇಕರ್ ಕಾಮೆಂಟ್ರಿ ಮಾಡುತ್ತಿದ್ದಂತೆ ಅತ್ತ ರೋಹಿತ್ ಶರ್ಮಾ ಕ್ಲೀನ್ ಬೌಲ್ಡ್ ಆಗಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮಂಜ್ರೇಕರ್ ಅವರ ವೀಕ್ಷಕ ವಿಶ್ಲೇಷಣೆ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.

ರೋಹಿತ್ ಶರ್ಮಾ ಟೀಮ್ ಇಂಡಿಯಾ ಕೋಚ್ ಹಾಗೂ ನಾಯಕ ಹೇಳಿದಂತೆ ಆಡುತ್ತಾರೆ. ಆದರೆ ಇದನ್ನು ಕಾಮೆಂಟ್ರಿ ಬಾಕ್ಸ್​ನಲ್ಲಿ ಕೂತು ಕುಹಕುವಾಡುವುದು ಎಷ್ಟು ಸರಿ. ಅಲ್ಲದೆ ನೇರ ವಿಮರ್ಶೆ ಮಾಡಿ ಅವರ ಬ್ಯಾಟಿಂಗ್ ಅನ್ನು ಪ್ರಶ್ನಿಸುವುದು ಸರಿನಾ ಎಂಬಿತ್ಯಾದಿ ಪ್ರಶ್ನೆಗಳನ್ನು ಅಭಿಮಾನಿಗಳು ಮುಂದಿಡುತ್ತಿದ್ದಾರೆ. ಇನ್ನು ಕೆಲವರು ಸಂಜಯ್ ಮಂಜ್ರೇಕರ್ ಕಾಮೆಂಟ್ರಿ ಮಾಡಿದ್ರೇನೆ ಟೀಮ್ ಇಂಡಿಯಾದ ವಿಕೆಟ್​ಗಳು ಬೀಳುತ್ತವೆ ಎಂದು ಆರೋಪಿಸಿದ್ದಾರೆ. ಮತ್ತೆ ಕೆಲವು ಸೋನಿ ಚಾನೆಲ್​ನವರಿಗೆ ಮಂಜ್ರೇಕರ್ ಅವರನ್ನು ಕಾಮೆಂಟ್ರಿಗಾಗಿ ಆಯ್ಕೆ ಮಾಡದಂತೆ ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದಾರೆ.

ಇನ್ನು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಹಿಟ್​ಮ್ಯಾನ್ ಬಗ್ಗೆ ಸಂಜಯ್ ಮಂಜ್ರೇಕರ್ ನೇರ ಟೀಕೆ ಮಾಡಿದ್ದರು. ಈ ಸರಣಿ ರೋಹಿತ್ ಶರ್ಮಾ ಒಂದು ಬ್ರೇಕ್. ಏಕೆಂದರೆ 40 ನೇ ಟೆಸ್ಟ್ ಆಡಿರುವ ರೋಹಿತ್​ 34 ವರ್ಷ ವಯಸ್ಸಿನ ಟೆಸ್ಟ್ ತಂಡದಲ್ಲಿ ಇರುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎನ್ನುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಈ ಹಿಂದೆ ಟೀಮ್ ಇಂಡಿಯಾ ಆಟಗಾರ ಜಡೇಜಾ ಅವರ ಆಟದ ಬಗ್ಗೆ ನೇರವಾಗಿ ದಾಳಿ ನಡೆಸಿದ್ದ ಮಂಜ್ರೇಕರ್, ಜಡೇಜಾ ಅವರು ಏಕದಿನದ ಪಂದ್ಯಗಳಿಗೆ ಸರಿಯಾದ ಆಟಗಾರನಾಗುವ ಮಾನದಂಡ ಹೊಂದಿಲ್ಲ. ಅಷ್ಟೇ ಅಲ್ಲದೆ ನನ್ನ ವೃತ್ತಿಜೀವನದಲ್ಲಿ ಈ ಮಟ್ಟದ ಬಾಲಂಗೋಚಿ ಆಟಗಾರನನ್ನ ನಾನು ಕಂಡಿಲ್ಲ. ಕೇವಲ ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆತ ಪರಿಣಾಮಕಾರಿ. ಹೀಗಾಗಿ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡುವುದು ಸೂಕ್ತವಲ್ಲ ಎಂದು ನೇರವಾಗಿ ವಿಮರ್ಶಿಸಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದರೂ, ಆ ಬಳಿಕ ಕೂಡ ಸಿಕ್ಕ ಅವಕಾಶದಲ್ಲಿ ಸಂಜಯ್ ಮಂಜ್ರೇಕರ್ ಜಡೇಜಾ ಅವರ ಮೇಲೆ ವಾಗ್ದಾಳಿ ಮುಂದುವೆಸಿದ್ದರು. ಇದೀಗ ರೋಹಿತ್ ಶರ್ಮಾ ವಿಷಯದಲ್ಲೂ ಸಂಜಯ್ ಮಂಜ್ರೇಕರ್ ವಿವಾದವನ್ನು ಮೈಮೇಳೆ ಎಳೆದುಕೊಳ್ಳುತ್ತೀದ್ದಾರಾ ಎಂಬ ಪ್ರಶ್ನೆಯೊಂದು ಇದೀಗ ಹುಟ್ಟಿಕೊಂಡಿದೆ.

ಇದನ್ನೂ ಓದಿ: Ola electric scooter: ಓಲಾ ಸ್ಕೂಟರ್​ನಲ್ಲಿ ರಿವರ್ಸ್ ಗೇರ್ ಇರಲಿದೆಯಾ? ಇಲ್ಲಿದೆ ಮಾಹಿತಿ

ಇದನ್ನೂ ಓದಿ: ಇಂಟರ್‌ನೆಟ್‌ ಸೇವೆಗೆ ಟಾಟಾ ಸಜ್ಜು: ನೆಟ್​ವರ್ಕ್ ಇಲ್ಲದೆಯೂ ಸಿಗಲಿದೆ ಅಂತರ್ಜಾಲ ಸೇವೆ

ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು

ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ

Published On - 10:23 pm, Thu, 12 August 21