KL Rahul: ಕೆ. ಎಲ್ ರಾಹುಲ್ ಶತಕಕ್ಕೆ ದಾಖಲೆಗಳು ಪುಡಿಪುಡಿ: ಕನ್ನಡಿಗನಿಂದ ವಿಶೇಷ ಸಾಧನೆ
India vs England: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಶತಕ ಸಾಧಿಸಿದ ಮೂರನೇ ಕನ್ನಡಿಗ ಕೆ. ಎಲ್ ರಾಹುಲ್ ಆಗಿದ್ದಾರೆ. ಇದಕ್ಕೂ ಮುನ್ನ ಜಿ. ವಿಶ್ವನಾಥ್ ಹಾಗೂ ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು.
ಮಳೆಯ ಕಾಟದ ನಡುವೆ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ (England) ವಿರುದ್ಧದ ಎರಡನೇ ಟೆಸ್ಟ್ನ ಮೊದಲ ದಿನದಾಟ ಟೀಮ್ ಇಂಡಿಯಾ (Team India) ಮೇಲುಗೈ ಸಾಧಿಸಿತು. ಕೆ. ಎಲ್ ರಾಹುಲ್ (KL Rahul) ಅಮೋಘ ಶತಕ ಸಿಡಿಸಿ ಮಿಂಚಿದರೆ, ರೋಹಿತ್ ಶರ್ಮಾ (Rohit Sharma) ಅರ್ಧಶತಕದ ನೆರವಿನಿಂದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 276 ರನ್ ಬಾರಿಸಿದೆ. ಈ ಮೂಲಕ ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿದೆ. ಅಜೇಯ ಶತಕ ಸಿಡಿಸಿ ರಾಹುಲ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ರಾಹುಲ್ ಟೆಸ್ಟ್ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ವಿದೇಶದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಓಪನರ್ ಎಂಬ ದಾಖಲೆಯನ್ನು ರಾಹುಲ್ ಮಾಡಿದ್ದಾರೆ. ಇದಕ್ಕೂ ಮುನ್ನ ರಾಹುಲ್ ಅವರೇ 2018 ರಲ್ಲಿ ಓವಲ್ ಮೈದಾನದಲ್ಲಿ ಈ ಸಾಧನೆ ಮಾಡಿದ್ದರು. ತನ್ನ ಆರನೇ ಶತಕ ಪೂರೈಸಿರುವ ಕನ್ನಡಿಗ ಏಷ್ಯಾದ ಹೊರಗಡೆ 4 ಶತಕ ಬಾರಿಸಿದ್ದಾರೆ. ಈ ಮೂಲಕ ಓಪನರ್ಗಳ ಸಾಲಿನಲ್ಲಿ ವಿರೇಂದ್ರ ಸೆಹ್ವಾಗ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಶತಕ ಸಾಧಿಸಿದ ಮೂರನೇ ಕನ್ನಡಿಗ ಕೆ. ಎಲ್ ರಾಹುಲ್ ಆಗಿದ್ದಾರೆ. ಇದಕ್ಕೂ ಮುನ್ನ ಜಿ. ವಿಶ್ವನಾಥ್ ಹಾಗೂ ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು. ಜೊತೆಗೆ ಒಟ್ಟಾರೆಯಾಗಿ ಲಾರ್ಡ್ಸ್ ಮೈದಾನದಲ್ಲಿ ಶತಕ ಸಿಡಿಸಿದ 10ನೇ ಭಾರತೀಯ ಎನಿಸಿಕೊಂಡರು. ಅಲ್ಲದೇ 2014ರಲ್ಲಿ ಅಜಿಂಕ್ಯಾ ರಹಾನೆ ನಂತರ ಶತಕ ಗಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಭರ್ಜರಿ ಫಾರ್ಮ್ನಲ್ಲಿರುವ ರಾಹುಲ್ ಮೊದಲ ಟೆಸ್ಟ್ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. 214 ಎಸೆತಗಳಲ್ಲಿ 84 ರನ್ ಗಳಿಸಿದ್ದರು. ಸದ್ಯ ಎರಡನೇ ಟೆಸ್ಟ್ನ ಮೊದಲ ದಿನವೇ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. 248 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ ಅಜೇಯ 127 ರನ್ ಗಳಿಸಿದ್ದಾರೆ.
ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆ. ಎಲ್ ರಾಹುಲ್ 126 ರನ್ಗಳ ಜೊತೆಯಾಟ ಆಡಿದರು. ಇದರೊಂದಿಗೆ, 2011 ರ ನಂತರ ಮೊದಲ ಬಾರಿಗೆ, ಭಾರತದ ಆರಂಭಿಕ ಜೋಡಿ ಏಷ್ಯಾದ ಹೊರಗೆ ಶತಕದ ಪಾಲುದಾರಿಕೆಯನ್ನು ಮಾಡಿತು. ರೋಹಿತ್ 145 ಎಸೆತಗಳಲ್ಲಿ 83 ರನ್ಗೆ ಔಟ್ ಆದರೆ, ಚೇತೇಶ್ವರ್ ಪೂಜಾರ ಬಂದ ಬೆನ್ನಲ್ಲೆ 9 ರನ್ಗೆ ನಿರ್ಗಮಿಸಿದರು
ನಾಯಕ ವಿರಾಟ್ ಕೊಹ್ಲಿ 103 ಎಸೆತಗಳಲ್ಲಿ 42 ರನ್ಗೆ ಔಟ್ ಆಗುವ ಮೂಲಕ ಅರ್ಧಶತಕ ವಂಚಿತರಾದರು. ಮೊದಲನೇ ದಿನದಾಟದ ಅಂತ್ಯಕ್ಕೆ ಭಾರತ 90 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿತು. ರಾಹುಲ್ 127 ಹಾಗೂ ಅಜಿಂಕ್ಯಾ ರಹಾನೆ 1 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Rohit Sharma: ರೋಹಿತ್ ಶರ್ಮಾ ಔಟಾಗಲು ಮಂಜ್ರೇಕರ್ ಕಾರಣ: ನೆಟ್ಟಿಗರಿಂದ ಆಕ್ರೋಶ..!