
ಐದು ಪಂದ್ಯಗಳ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿರುವ ಟೀಂ ಇಂಡಿಯಾ ಇದೀಗ ರಾಜ್ಕೋಟ್ನಲ್ಲಿ ಮೂರನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಳ್ಳುವ ಇರಾದೆಯಲ್ಲಿದೆ. ಇದಕ್ಕೆ ಪೂರಕವಾಗಿ ಇಂಗ್ಲೆಂಡ್ ತಂಡಕ್ಕೆ ರಾಜ್ಕೋಟ್ನಲ್ಲಿ ಇದು ಮೊದಲ ಟಿ20 ಪಂದ್ಯ ಆಗಿರುವ ಕಾರಣ ಟೀಂ ಇಂಡಿಯಾಕ್ಕೆ ಮೇಲುಗೈ ಸಾಧಿಸುವ ಅವಕಾಶವಿದೆ. ಇದೀಗ ತನ್ನ ಸಂಪ್ರದಾಯವನ್ನು ಮುಂದುವರೆಸಿರುವ ಇಂಗ್ಲೆಂಡ್ ತಂಡ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿಯೇ ತನ್ನ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದ್ದು, ಚೆನ್ನೈನಲ್ಲಿ ಆಡಿದ ಆಟಗಾರರನ್ನೇ ರಾಜ್ಕೋಟ್ನಲ್ಲೂ ಕಣಕ್ಕಿಳಿಸಲು ತೀರ್ಮಾನಿಸಿದೆ.
ಮೊದಲ ಎರಡು ಪಂದ್ಯಗಳಂತೆ, ಇಂಗ್ಲೆಂಡ್ ಈಗಾಗಲೇ ಮೂರನೇ ಪಂದ್ಯಕ್ಕೂ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಆದರೆ, ಅಚ್ಚರಿಯ ಸಂಗತಿ ಎಂದರೆ ಇಂಗ್ಲೆಂಡ್ ತಂಡ ಚೆನ್ನೈನಲ್ಲಿ ಕಣಕ್ಕಿಳಿಸಿದ್ದ ಅದೇ 11 ಆಟಗಾರರನ್ನು ರಾಜ್ಕೋಟ್ನಲ್ಲೂ ಆಡಿಸಲು ಮುಂದಾಗಿದೆ. ವಾಸ್ತವವಾಗಿ ಮೊದಲೆರಡು ಪಂದ್ಯಗಳಲ್ಲಿ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ವಿಫಲವಾಗಿತ್ತು. ಅದರಲ್ಲೂ ಆರಂಭಿಕರಿಬ್ಬರೂ ಯಾವುದೇ ರೀತಿಯ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಎಡವಿದ್ದರು. ಹೀಗಾಗಿ ಮೂರನೇ ಪಂದ್ಯಕ್ಕೆ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆಯನ್ನು ನಿರೀಕ್ಷಿಸಲಾಗಿತ್ತು. ಆದಾಗ್ಯೂ ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಇಂಗ್ಲೆಂಡ್ ತಂಡ: ಜೋಸ್ ಬ್ಯಾಟ್ಲರ್ (ನಾಯಕ), ಬೆನ್ ಡಕೆಟ್, ಫಿಲ್ ಸಾಲ್ಟ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ಸ್ಟನ್, ಜೇಮಿ ಸ್ಮಿತ್, ಜೇಮೀ ಓವರ್ಟನ್, ಬ್ರೇಡನ್ ಕಾರ್ಸೆ, ಜೋಫ್ರಾ ಆರ್ಚರ್, ಮಾರ್ಕ್ ವುಡ್ ಮತ್ತು ಆದಿಲ್ ರಶೀದ್.
ಭಾರತ ತಂಡ ಹೇಗಿರಲಿದೆ?
ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿದೆ. ಭಾರತ ತಂಡದ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಹೆಚ್ಚಿನ ಬದಲಾವಣೆಗೆ ಅವಕಾಶವಿಲ್ಲ. ಕೋಲ್ಕತ್ತಾ ಟಿ20 ನಂತರ ರಿಂಕು ಸಿಂಗ್ ಬೆನ್ನು ಸೆಳೆತ ಸಮಸ್ಯೆಯಿಂದಾಗಿ ಎರಡು ಪಂದ್ಯಗಳಿಂದ ಹೊರಗುಳಿದಿದ್ದರೆ, ನಿತೀಶ್ ಕುಮಾರ್ ರೆಡ್ಡಿ ಸ್ನಾಯು ಸೆಳೆತದಿಂದಾಗಿ ಇಡೀ ಸರಣಿಯಿಂದ ಹೊರಗುಳಿದಿದ್ದರು. ಇವರಿಬ್ಬರ ಜಾಗದಲ್ಲಿ ಶಿವಂ ದುಬೆ ಮತ್ತು ರಮಣದೀಪ್ ಸಿಂಗ್ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇಬ್ಬರಲ್ಲಿ ಯಾರಿಗಾದರೂ ರಾಜ್ಕೋಟ್ನಲ್ಲಿ ಅವಕಾಶ ಸಿಗಬಹುದು.
ಭಾರತದ ಸಂಭಾವ್ಯ ಪ್ಲೇಯಿಂಗ್ XI: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ/ರಮಣದೀಪ್ ಸಿಂಗ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:35 pm, Mon, 27 January 25