
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ 4 ಮ್ಯಾಚ್ಗಳು ಮುಗಿದಿವೆ. ಇನ್ನು ಉಳಿದಿರುವುದು ಕೇವಲ ಒಂದು ಪಂದ್ಯ ಮಾತ್ರ. ಈ ಪಂದ್ಯವು ಜುಲೈ 31 ರಿಂದ ಶುರುವಾಗಲಿದೆ. ಅಂದರೆ ಗುರುವಾರದಿಂದ ಸರಣಿ ನಿರ್ಣಾಯಕ ಪಂದ್ಯಕ್ಕೆ ಚಾಲನೆ ದೊರೆಯಲಿದೆ. ಇದಕ್ಕೂ ಮುನ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಭಾರತ ತಂಡ 336 ರನ್ಗಳ ಜಯಭೇರಿ ಬಾರಿಸಿದ್ದರು.
ಲಾರ್ಡ್ಸ್ ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 22 ರನ್ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ಜರುಗಿದ ನಾಲ್ಕನೇ ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿದೆ. ಈ ಡ್ರಾ ಹೊರತಾಗಿಯೂ ಇಂಗ್ಲೆಂಡ್ ತಂಡವು ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಹೊಂದಿದೆ.
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯವು ಸರಣಿ ನಿರ್ಣಾಯಕ. ಏಕೆಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಬಹುದು. ಅತ್ತ ಸರಣಿ ಗೆಲ್ಲಬೇಕಿದ್ದರೆ ಇಂಗ್ಲೆಂಡ್ ತಂಡವು ಅಂತಿಮ ಪಂದ್ಯದಲ್ಲಿ ಗೆಲ್ಲಬೇಕು ಇಲ್ಲ ಡ್ರಾ ಸಾಧಿಸಬೇಕು. ಹೀಗಾಗಿ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ಕಂಡು ಬರಲಿದೆ.
ಅದರಲ್ಲೂ ಸರಣಿಯಲ್ಲಿ ಸಮಬಲ ಸಾಧಿಸಬೇಕಿದ್ದರೆ ಟೀಮ್ ಇಂಡಿಯಾ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಗೆಲ್ಲಲೇಬೇಕು. ಹೀಗಾಗಿ ಯಂಗ್ ಇಂಡಿಯಾದಿಂದ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು. ಈ ಪೈಪೋಟಿಯೊಂದಿಗೆ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಡ್ರಾ ಗೊಳಿಸಲಿದೆಯಾ ಕಾದು ನೋಡಬೇಕಿದೆ.
ಇಂಗ್ಲೆಂಡ್ ಟೆಸ್ಟ್ ತಂಡ: ಝಾಕ್ ಕ್ರಾಲಿ , ಬೆನ್ ಡಕೆಟ್ , ಒಲೀ ಪೋಪ್ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜೇಮಿ ಸ್ಮಿತ್ (ವಿಕೆಟ್ ಕೀಪರ್) , ಕ್ರಿಸ್ ವೋಕ್ಸ್ , ಬ್ರೈಡನ್ ಕಾರ್ಸ್ , ಜೋಫ್ರಾ ಆರ್ಚರ್ , ಜೇಮಿ ಓವರ್ಟನ್ , ಜೋಶ್ ಟಂಗ್ , ಸ್ಯಾಮ್ ಜೇಮ್ಸ್ ಕುಕ್ , ಗಸ್ ಅಟ್ಕಿನ್ಸನ್ , ಜೇಕಬ್ ಬೆಥೆಲ್, ಲಿಯಾಮ್ ಡಾಸನ್.
ಇದನ್ನೂ ಓದಿ: ಗೆಲ್ಲಲು ಮಾತ್ರ ಹೊರಟ ಇಂಗ್ಲೆಂಡ್ಗೆ ಟೆಸ್ಟ್ನ ಟೇಸ್ಟ್ ತೋರಿಸಿದ ಟೀಮ್ ಇಂಡಿಯಾ
ಭಾರತ ಟೆಸ್ಟ್ ತಂಡ: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ಕರುಣ್ ನಾಯರ್ , ಶುಭಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ವಾಷಿಂಗ್ಟನ್ ಸುಂದರ್ , ಆಕಾಶ್ ದೀಪ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ , ಧ್ರುವ ಜುರೆಲ್ , ಸಾಯಿ ಸುದರ್ಶನ್ , ಅರ್ಷದೀಪ್ ಸಿಂಗ್ , ಅಭಿಮನ್ಯು ಈಶ್ವರನ್ , ಶಾರ್ದೂಲ್ ಠಾಕೂರ್ , ಕುಲ್ದೀಪ್ ಯಾದವ್, ಅನ್ಶುಲ್ ಕಂಬೋಜ್, ಎನ್ ಜಗದೀಸನ್ (ವಿಕೆಟ್ ಕೀಪರ್).