IND vs ENG: ಕುಲ್ದೀಪ್, ಬುಮ್ರಾ ಆಡ್ತಾರಾ? ಗಂಭೀರ್ ವಿವಾದ ಬಗ್ಗೆ ಗಿಲ್ ಹೇಳಿದ್ದೇನು?
Shubman Gill press conference: ಓವಲ್‌ನಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಶುಭ್‌ಮನ್ ಗಿಲ್ ಜಸ್ಪ್ರೀತ್ ಬುಮ್ರಾ ಮತ್ತು ಕುಲ್ದೀಪ್ ಯಾದವ್ ಅವರ ಆಟದ ಸ್ಥಿತಿ, ಪಿಚ್ ಪರಿಸ್ಥಿತಿ ಮತ್ತು ಗೌತಮ್ ಗಂಭೀರ್ ವಿವಾದದ ಬಗ್ಗೆ ಮಾಹಿತಿ ನೀಡಿದ್ದಾರೆ. ಬುಮ್ರಾ ಆಡುವ ಬಗ್ಗೆ ಅಂತಿಮ ನಿರ್ಧಾರ ಪಂದ್ಯಕ್ಕೂ ಮುನ್ನ ತೆಗೆದುಕೊಳ್ಳಲಾಗುವುದು ಎಂದೂ, ಕುಲ್ದೀಪ್ ಯಾದವ್ ಆಡುವ ಸಾಧ್ಯತೆ ಕಡಿಮೆ ಎಂದೂ ಹೇಳಿದ್ದಾರೆ. ಪಿಚ್ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿದೆ ಎಂದೂ ಗಿಲ್ ತಿಳಿಸಿದ್ದಾರೆ.

ಓವಲ್‌ನಲ್ಲಿ (Oval Test Match) ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದನೇ ಟೆಸ್ಟ್ ಪಂದ್ಯ ಉಭಯ ತಂಡಗಳಿಗೂ ಬಹಳ ಮುಖ್ಯವಾಗಿದೆ. ಸರಣಿಯನ್ನು ಗೆಲ್ಲಲು ಇಂಗ್ಲೆಂಡ್, ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕು ಅಥವಾ ಗೆಲ್ಲಬೇಕು. ಇತ್ತ ಸರಣಿಯಲ್ಲಿ 1-2 ರಿಂದ ಹಿನ್ನಡೆಯಲ್ಲಿರುವ ಟೀಂ ಇಂಡಿಯಾ ಈ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಸರಣಿಯನ್ನು 2-2 ರಿಂದ ಸಮಬಲದೊಂದಿಗೆ ಕೊನೆಗೊಳಿಸಲಿದೆ. ಅಂದಹಾಗೆ, ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಾಯಕ ಶುಭ್‌ಮನ್ ಗಿಲ್ (Shubman Gill) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದರಲ್ಲೂ ಜಸ್ಪ್ರೀತ್ ಬುಮ್ರಾ ಆಡುವ ಬಗ್ಗೆಯೂ ಗಿಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಬುಮ್ರಾ ಆಡುತ್ತಾರೋ ಇಲ್ಲವೋ?
ಜಸ್ಪ್ರೀತ್ ಬುಮ್ರಾ ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗೆ ಶುಭ್‌ಮನ್ ಗಿಲ್ ನೇರವಾಗಿ ಉತ್ತರಿಸಲಿಲ್ಲ. ಅರ್ಷದೀಪ್ ಸಿಂಗ್ ಅವರನ್ನು ಸಿದ್ಧರಾಗಿರಲು ಹೇಳಲಾಗಿದೆ. ಆದರೆ ಪಿಚ್ ನೋಡಿದ ನಂತರ ಆಡುವ ಹನ್ನೊಂದರ ಬಳಗವನ್ನು ಘೋಷಿಸಲಾಗುವುದು ಎಂದು ಗಿಲ್ ಹೇಳಿದ್ದಾರೆ. ಅಲ್ಲದೆ ಜಸ್ಪ್ರೀತ್ ಬುಮ್ರಾ ಆಡುವ ಬಗ್ಗೆ ಅಂತಿಮ ನಿರ್ಧಾರವನ್ನು ಪಂದ್ಯಕ್ಕೂ ಮುನ್ನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಕುಲ್ದೀಪ್ ಯಾದವ್ ಆಡುತ್ತಾರಾ?
ಕುಲ್ದೀಪ್ ಯಾದವ್ ಓವಲ್ ಟೆಸ್ಟ್ನಲ್ಲೂ ಆಡುವುದಿಲ್ಲ ಎಂಬ ಸುಳಿವನ್ನು ಶುಭಮನ್ ಗಿಲ್ ನೀಡಿದ್ದಾರೆ. ವಾಸ್ತವವಾಗಿ, ಓವಲ್ ಟೆಸ್ಟ್‌ಗೆ ಇಂಗ್ಲೆಂಡ್ ತಂಡದಲ್ಲಿ ಒಬ್ಬನೇ ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್ಗೆ ಸ್ಥಾನ ನೀಡಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್, ಇಂಗ್ಲೆಂಡ್ ಒಬ್ಬ ಸ್ಪಿನ್ನರ್ಗೂ ತಂಡದಲ್ಲಿ ಅವಕಾಶ ನೀಡಿಲ್ಲ. ಆದರೆ ನಮ್ಮಲ್ಲಿ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಇದ್ದಾರೆ ಎಂದು ಹೇಳಿದರು. ಇದರರ್ಥ ಕುಲ್ದೀಪ್ ಯಾದವ್ ಕೊನೆಯ ಟೆಸ್ಟ್ನಲ್ಲೂ ಬೆಂಚ್ ಕಾಯುವುದು ಖಚಿತವಾಗಿದೆ.
ಪಿಚ್ ಬಗ್ಗೆ ಗಿಲ್ ಹೇಳಿದ್ದೇನು?
ಓವಲ್ ಟೆಸ್ಟ್‌ಗೆ ಬಳಸಲಾಗುತ್ತಿರುವ ಪಿಚ್ನಲ್ಲಿ ತುಂಬಾ ಹಸಿರಿದೆ. ಅಂದರೆ ಅದರ ಮೇಲೆ ಸಾಕಷ್ಟು ಹುಲ್ಲು ಇದೆ. ಇದರರ್ಥ ವೇಗದ ಬೌಲರ್‌ಗಳಿಗೆ ಓವಲ್‌ನಲ್ಲಿ ಹೆಚ್ಚಿನ ಸಹಾಯ ಸಿಗುತ್ತದೆ ಎಂದು ಶುಭ್‌ಮನ್ ಗಿಲ್ ಹೇಳಿದ್ದಾರೆ.
IND vs ENG: ಕ್ಯುರೇಟರ್ ಕಳ್ಳಾಟ; ಗಂಭೀರ್ ಜೊತೆ ಜಗಳ, ಮೆಕಲಮ್ ಜೊತೆ ಪಿಚ್ ಮೇಲೆಯೇ ಮಾತು
ಗಂಭೀರ್ ವಿವಾದದ ಬಗ್ಗೆ ಗಿಲ್ ಹೇಳಿದ್ದೇನು?
ಗೌತಮ್ ಗಂಭೀರ್ ಅವರ ವಿವಾದದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಗಿಲ್, ‘ಪಿಚ್ ಕ್ಯುರೇಟರ್ ಏಕೆ ಈ ರೀತಿ ವರ್ತಿಸಿದರು ಎಂದು ನನಗೆ ತಿಳಿದಿಲ್ಲ. ಆದರೆ ಇಡೀ ತಂಡವು ಬಹಳ ಸಮಯದಿಂದ ಅಭ್ಯಾಸ ಮಾಡುತ್ತಿತ್ತು. ಅಲ್ಲದೆ ಕೋಚಿಂಗ್ ಸಿಬ್ಬಂದಿಗಳು ರಬ್ಬರ್ ಶೂಗಳನ್ನು ಧರಿಸಿ ಅಥವಾ ಬರಿಗಾಲಿನಲ್ಲಿ ಪಿಚ್ ನೋಡಲು ಹೋಗುತ್ತಾರೆ ಎಂಬುದು ಕ್ಯುರೇಟರ್ಗೂ ತಿಳಿದಿದೆ. ಇದರ ಹೊರತಾಗಿಯೂ ಓವಲ್ ಪಿಚ್ ಕ್ಯುರೇಟರ್ ಏಕೆ ಈ ರೀತಿ ವರ್ತಿಸಿದರು ಎಂಬುದು ತಿಳಿದಿಲ್ಲ. ಆದರೆ ಟೀಂ ಇಂಡಿಯಾ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:22 pm, Wed, 30 July 25
