Ravi Shastri: ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ: ರವಿಶಾಸ್ತ್ರಿಗೆ ಮತ್ತೆ ಪಾಸಿಟಿವ್, 5ನೇ ಟೆಸ್ಟ್​ನಿಂದ ಹೊರಕ್ಕೆ

| Updated By: Vinay Bhat

Updated on: Sep 06, 2021 | 11:56 AM

Ravi Shastri Corona Positive: ನಾಲ್ಕನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಐದನೇ ಟೆಸ್ಟ್ ಪಂದ್ಯಕ್ಕಾಗಿ ಮ್ಯಾಂಚೆಸ್ಟರ್​ಗೆ ತೆರಳಲಿದೆ. ರವಿಶಾಸ್ತ್ರಿ 14 ದಿನಗಳ ಕ್ವಾರಂಟೈನ್​ನಲ್ಲಿ ಇರಬೇಕಿರುವುದರಿಂದ ಇವರನ್ನು ಬಿಟ್ಟು ಕೊಹ್ಲಿ ಪಡೆ ಪ್ರಯಾಣ ಬೆಳೆಸಲಿದೆ.

Ravi Shastri: ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ: ರವಿಶಾಸ್ತ್ರಿಗೆ ಮತ್ತೆ ಪಾಸಿಟಿವ್, 5ನೇ ಟೆಸ್ಟ್​ನಿಂದ ಹೊರಕ್ಕೆ
Ravi Shastri and Virat Kohli
Follow us on

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್​ನ (4th Test) ಅಂತಿಮ ದಿನದಾಟ ಶುರುವಾಗುವ ಮುನ್ನವೇ ಕೊಹ್ಲಿ ಪಡೆಗೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಅವರಿಗೆ ಎರಡನೇ ಬಾರಿಗೆ ಕೊರೊನಾ ಪಾಸಿಟಿವ್ (Corona Positive) ಕಂಡುಬಂದಿದ್ದು, 14 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಈ ಮೂಲಕ ಸೆಪ್ಟೆಂಬರ್ 10 ರಿಂದ ಆರಂಭವಾಗಲಿರುವ ಐದನೇ ಟೆಸ್ಟ್​ನಿಂದ ರವಿಶಾಸ್ತ್ರಿ ದೂರ ಉಳಿಯಲಿದ್ದಾರೆ. ತಂಡದ ಮುಖ್ಯ ಕೋಚ್​ನ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಿರುವುದು ದೊಡ್ಡ ಹಿನ್ನಡೆಯಾಗಿದೆ.

ಇನ್ನೂ ಮುನ್ನೆಚ್ಚರಿಕೆ ಕ್ರಮವಾಗಿ ರವಿಶಾಸ್ತ್ರಿ ಜೊತೆ ನಿಕಟ ಸಂಪರ್ಕದಲ್ಲಿದ್ದ ಸಪೋರ್ಟ್ ಸ್ಟಾಫ್​ನ ಮೂವರನ್ನೂ ಐಸೋಲೇಶನ್​ಗೆ ಕಳುಹಿಸಲಾಗಿದೆ. ಇವರಲ್ಲಿ ಬೌಲಿಂಗ್ ಕೋಚ್ ಆಗಿರುವ ಭರತ್ ಅರುಣ್ ಕೂಡ ಇದ್ದಾರೆ. ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಪ್ರಧಾನ ಫಿಸಿಯೋ ಥೆರಪಿಸ್ಟ್ ನಿತಿನ್ ಪಟೇಲ್ ಅವರು ಕೂಡ ಐಸೋಲೇಶನ್​ನಲ್ಲಿ ಇದ್ದಾರೆ. ಹೀಗಾಗಿ ಪ್ರಮುಖ ಮಾರ್ಗದರ್ಶಕರ ಅನುಪಸ್ಥಿತಿ ಭಾರತಕ್ಕೆ ಕಾಡಲಿದೆ.

ಆರಂಭದಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್​ನಲ್ಲಿ ರವಿಶಾಸ್ತ್ರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ನಂತರ ನೆಗೆಟಿವ್ ಬಂದಿತ್ತು. ಭಾನುವಾರ ಮತ್ತೆ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹೀಗಾಗಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಬೇಕಾಗಿದೆ ಎಂದು ಇನ್​ಸೈಡ್ ಸ್ಪೋರ್ಟ್ಸ್​ ವರದಿ ಮಾಡಿದೆ.

ಭಾರತ ತಂಡದ ಎಲ್ಲಾ ಸದಸ್ಯರಿಗೆ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಲಾಗಿದೆ. ಭರತ್ ಅರುಣ್ ಅವರಿಗೆ ಸೋಂಕು ದೃಢಪಡದಿದ್ದರೂ ಐಸೋಲೇಶನ್​ನಲ್ಲಿ ಇರಬೇಕಾದ ಸಂದರ್ಭ ಬಂದದ್ದು ಇದು ಎರಡನೇ ಬಾರಿ. ಸದ್ಯ ಯಾವ ಆಟಗಾರರಿಗೂ ರ್ಯಾಪಿಡ್ ಟೆಸ್ಟ್​ನಲ್ಲಿ ಪಾಸಿಟಿವ್ ಬಂದಿಲ್ಲ. ಮೂರನೇ ಬಾರಿ ನಡೆಸಲಾದ ರ್ಯಾಪಿಡ್ ಟೆಸ್ಟ್​ನಲ್ಲಿ ಬೇರೆಲ್ಲಾ ಆಟಗಾರರು ಮತ್ತು ಸಿಬ್ಬಂದಿಗೆ ನೆಗಟಿವ್ ರಿಪೋರ್ಟ್ ಬಂದಿದೆ.

ಸದ್ಯ ಸಾಗುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಐದನೇ ಟೆಸ್ಟ್ ಪಂದ್ಯಕ್ಕಾಗಿ ಮ್ಯಾಂಚೆಸ್ಟರ್​ಗೆ ತೆರಳಲಿದೆ. ರವಿಶಾಸ್ತ್ರಿ 14 ದಿನಗಳ ಕ್ವಾರಂಟೈನ್​ನಲ್ಲಿ ಇರಬೇಕಿರುವುದರಿಂದ ಇವರನ್ನು ಬಿಟ್ಟು ಕೊಹ್ಲಿ ಪಡೆ ಪ್ರಯಾಣ ಬೆಳೆಸಲಿದೆ. ಭಾರತ ತಂಡ ಇದ್ದ ಹೋಟೆಲ್​ನಲ್ಲಿ ರವಿಶಾಸ್ತ್ರಿ ಅವರಿಂದ ಪುಸ್ತಕ ಬಿಡುಗಡೆ ಸಮಾರಂಭ ನಡೆದಿತ್ತು. ಬ್ರಿಟನ್ ದೇಶದಲ್ಲಿ ಕಾರ್ಯಕ್ರಮ ಆಯೋಜನೆಯಲ್ಲಿ ಕಟ್ಟುನಿಟ್ಟಿನ ಕೋವಿಡ್ ನಿಯಮಗಳು ಇಲ್ಲ. ಹೀಗಾಗಿ, ಹೊರಗಿನಿಂದ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಶಾಸ್ತ್ರಿ ಅವರಿಗೆ ಸೋಂಕು ತಗುಲಿರಬಹುದು ಎಂದು ಹೇಳಲಾಗಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದುನಿಂತಿದೆ. ಟೀಮ್ ಇಂಡಿಯಾ ನೀಡಿರುವ 367 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿರುವ ಆಂಗ್ಲರು ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 77 ರನ್ ಬಾರಿಸಿದೆ. ಪಂದ್ಯದ ಫಲಿತಾಂಶ ಅಂತಿಮ ದಿನಕ್ಕೆ ತಲುಪಿದ್ದು ಇಂಗ್ಲೆಂಡ್ ಗೆಲುವಿಗೆ 291 ರನ್​ಗಳ ಅವಶ್ಯಕತೆಯಿದ್ದರೆ, ಭಾರತದ ಗೆಲುವಿಗೆ ರೂಟ್ ಪಡೆಯ ಎಲ್ಲ ವಿಕೆಟ್​ಗಳು ಬೇಕಾಗಿದೆ.

India vs England: ಟೀಮ್ ಇಂಡಿಯಾಕ್ಕೆ ಡಬಲ್ ಶಾಕ್: ಇಂದು ಫೀಲ್ಡ್​​ಗಿಳಿಯಲ್ಲ ಈ ಆಟಗಾರರು: 5ನೇ ಟೆಸ್ಟ್​ಗೂ ಅನುಮಾನ

India vs England: ಟೀಮ್ ಇಂಡಿಯಾ 2-1 ಮುನ್ನಡೆಗೆ ಅಡ್ಡಿ ಪಡಿಸುತ್ತಾನ ವರುಣ?: ಅಂತಿಮ ದಿನದ ಹವಾಮಾನ ವರದಿ ಇಲ್ಲಿದೆ

(India vs England Coach Ravi Shastri tested positive for COVID-19 again out of 5th test and 14 days quarantine)