India vs England: 90 ಓವರ್: ಭಾರತದ ಗೆಲುವಿಗೆ ಬೇಕು ಆಂಗ್ಲರ 10 ವಿಕೆಟ್, ಇಂಗ್ಲೆಂಡ್ಗೆ ಬೇಕು 291 ರನ್ಸ್: ಯಾರಿಗೆ ಜಯ?
ಕೊಹ್ಲಿ ಪಡೆ ತನ್ನ ಹಳೇಯ ಚಾಳಿಯನ್ನು ಮತ್ತೆ ಮುಂದುವರೆಸುತ್ತೆ ಎಂಬೊತ್ತಿಗೆ ಕ್ರೀಸ್ ಕಚ್ಚಿ ಬ್ಯಾಟ್ ಬೀಸಿದ್ದು ರಿಷಭ್ ಪಂತ್ ಹಾಗೂ ಶಾರ್ದೂಲ್ ಠಾಕೂರ್. ಪಂತ್ ಮತ್ತು ಠಾಕೂರ್ ಸೇರಿಕೊಂಡು 7ನೇ ವಿಕೆಟಿಗೆ ಭರ್ತಿ 100 ರನ್ ಪೇರಿಸಿ ತಂಡವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದರು.
ಅಂದುಕೊಂಡಂತೆ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದುನಿಂತಿದೆ. ಟೀಮ್ ಇಂಡಿಯಾ (Team India) ನೀಡಿರುವ 367 ರನ್‌ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿರುವ ಆಂಗ್ಲರು ನಾಲ್ಕನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 77 ರನ್ ಬಾರಿಸಿದೆ. ಪಂದ್ಯದ ಫಲಿತಾಂಶ ಅಂತಿಮ ದಿನಕ್ಕೆ ತಲುಪಿದ್ದು ಇಂಗ್ಲೆಂಡ್ ಗೆಲುವಿಗೆ 291 ರನ್‌ಗಳ ಅವಶ್ಯಕತೆಯಿದ್ದರೆ, ಭಾರತದ ಗೆಲುವಿಗೆ ರೂಟ್ ಪಡೆಯ ಎಲ್ಲ ವಿಕೆಟ್ಗಳು ಬೇಕಾಗಿದೆ. ಹೀಗಾಗಿ ಐದನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ.
ಮೊದಲ ಇನಿಂಗ್ಸ್‌ನಲ್ಲಿ 191ಕ್ಕೆ ಆಲ್‌ಔಟ್ ಆಗಿದ್ದ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿ 466 ರನ್‌ಗಳ ಶಿಖರ ನಿರ್ಮಿಸಿತು. ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಜಡೇಜಾ 17 ರನ್ಗೆ ಔಟ್ ಆದರೆ, ಕೊಹ್ಲಿ 44 ರನ್ಗೆ ನಿರ್ಗಮಿಸುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು. ಉಪ ನಾಯಕ ಅಜಿಂಕ್ಯಾ ರಹಾನೆ ಸೊನ್ನೆ ಸುತ್ತಿದ್ದು ವೈಕ್ತಿಕವಾಗಿ ಅವರಿಗೆ ಮಾತ್ರವಲ್ಲದೆ ತಂಡಕ್ಕೂ ದೊಡ್ಡ ಹೊಡೆತ ಬಿದ್ದಿತು.
ಕೊಹ್ಲಿ ಪಡೆ ತನ್ನ ಹಳೇಯ ಚಾಳಿಯನ್ನು ಮತ್ತೆ ಮುಂದುವರೆಸುತ್ತೆ ಎಂಬೊತ್ತಿಗೆ ಕ್ರೀಸ್ ಕಚ್ಚಿ ಬ್ಯಾಟ್ ಬೀಸಿದ್ದು ರಿಷಭ್ ಪಂತ್ ಹಾಗೂ ಶಾರ್ದೂಲ್ ಠಾಕೂರ್. ಲಂಚ್ ವೇಳೆ ಭಾರತ 6 ವಿಕೆಟಿಗೆ 329 ರನ್ ಗಳಿಸಿದ್ದ ಭಾರತಕ್ಕೆ ಪಂತ್ ಮತ್ತು ಠಾಕೂರ್ ಸೇರಿಕೊಂಡು 7ನೇ ವಿಕೆಟಿಗೆ ಭರ್ತಿ 100 ರನ್ ಪೇರಿಸಿ ತಂಡವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದರು.
ಪಂತ್ ಮತ್ತು ಠಾಕೂರ್ ಇಬ್ಬರೂ ಅರ್ಧ ಶತಕ ಬಾರಿಸಿ ಇಂಗ್ಲೆಂಡ್ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸಿದರು. ಪಂತ್ ಕೊಡುಗೆ ಭರ್ತಿ 50 ರನ್. 106 ಎಸೆತಗಳ ಈ ಆಟದಲ್ಲಿ 4 ಬೌಂಡರಿ ಸೇರಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 57 ರನ್ ಹೊಡೆದು ಟಾಪ್ ಸ್ಕೋರರ್ ಆಗಿದ್ದ ಠಾಕೂರ್ ಮತ್ತೂಂದು ಸ್ಫೋಟಕ ಇನ್ನಿಂಗ್ಸ್ ಮೂಲಕ ಮತ್ತೂಮ್ಮೆ ತಮ್ಮ ಬ್ಯಾಟಿಂಗ್ ಸಾಹಸವನ್ನು ತೆರೆದಿಟ್ಟರು. ಅದೇ ಬಿರುಸಿನಲ್ಲಿ ಸಾಗಿದ ಠಾಕೂರ್ 72 ಎಸೆತಗಳಿಂದ 60 ರನ್ ಸಿಡಿಸಿದರು.
ಬುಮ್ರಾ 38 ಎಸೆತಗಳಲ್ಲಿ 24 ಮತ್ತು ಉಮೇಶ್ ಯಾದವ್ 23 ಎಸೆತಗಳಲ್ಲಿ 25 ರನ್ ಬಾರಿಸಿದ್ದು ಕೂಡ ತಂಡಕ್ಕೆ ಸಹಾಯವಾಯಿತು. ಅಂತಿಮವಾಗಿ ಭಾರತ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 148.2 ಓವರ್ಗೆ 466 ರನ್ ಗಳಿಸಿ ಆಲೌಟ್ ಆಯಿತು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 3 ವಿಕೆಟ್ ಕಿತ್ತರೆ, ರಾಬಿನ್ಸನ್ ಮತ್ತು ಮೊಯೀನ್ ಅಲಿ ತಲಾ 2 ವಿಕೆಟ್ ಪಡೆದರು.
ಇತ್ತ 367 ರನ್‌ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿರುವ ಇಂಗ್ಲೆಂಡ್ ತಂಡ ಭರ್ಜರಿ ಆರಂಭ ಪಡೆದುಕೊಂಡಿದೆ. ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಹಸೀಬ್ ಹಮೀದ್ (43*) ಮತ್ತು ರೋರಿ ಬರ್ನ್ಸ್ (31*) ಮೊದಲ ವಿಕೆಟ್‌ಗೆ 77 ರನ್‌ಗಳ ಜೊತೆಯಾಟವಾಡಿ ತಂಡವನ್ನು ಸುಸ್ಥಿತಿಗೆ ಕೊಂಡೊಯ್ದಿದ್ದಾರೆ. ಇದರಿಂದ ಪಂದ್ಯದ ಅಂತಿಮ ದಿನ 90 ಓವರ್‌ಗಳಲ್ಲಿ ಕೈಲಿರುವ 10 ವಿಕೆಟ್‌ಗಳಿಂದ 291 ರನ್ ಗಳಿಸುವ ಗುರಿ ಇಂಗ್ಲೆಂಡ್ ಎದುರಿದೆ. ಹೀಗಾಗಿ ಎಲ್ಲ ರೀತಿಯ ಫಲಿತಾಂಶ ಹೊರಬರುವ ಸಾಧ್ಯತೆ ಇದೆ.
(India vs England 4th Test Day 4 Stumps Engl openers frustrate India England need 291 on final day)