India vs England: 3 ವರ್ಷಗಳ ಬಳಿಕ ತಂಡ ಸೇರಿದ ಸ್ಟಾರ್ ಬ್ಯಾಟ್ಸ್​ಮನ್​: 3ನೇ ಟೆಸ್ಟ್​ಗೆ ಇಂಗ್ಲೆಂಡ್ ಮಾಸ್ಟರ್ ಪ್ಲಾನ್

Dawid Malan: ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗಿರುವ ಎಡಗೈ ಆಟಗಾರ ಡಾವಿಡ್‌ ಮಲಾನ್‌, ಬರೋಬ್ಬರಿ ಮೂರು ವರ್ಷಗಳ ಬಳಿಕ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

India vs England: 3 ವರ್ಷಗಳ ಬಳಿಕ ತಂಡ ಸೇರಿದ ಸ್ಟಾರ್ ಬ್ಯಾಟ್ಸ್​ಮನ್​: 3ನೇ ಟೆಸ್ಟ್​ಗೆ ಇಂಗ್ಲೆಂಡ್ ಮಾಸ್ಟರ್ ಪ್ಲಾನ್
Dawid Malan
Follow us
TV9 Web
| Updated By: Vinay Bhat

Updated on: Aug 19, 2021 | 7:13 AM

ಲಾರ್ಡ್ಸ್​ನಲ್ಲಿ ನಡೆದ ಭಾರತ (India) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸೋಲು ಕಂಡಿದ್ದ ಇಂಗ್ಲೆಂಡ್ (England) ತಂಡ ಸದ್ಯ ಮೂರನೇ ಟೆಸ್ಟ್ ಪಂದ್ಯಕ್ಕೆ ಮಾಸ್ಟರ್ ಪ್ಲಾನ್​ನೊಂದಿಗೆ ಕಣಕ್ಕಿಳಿಯಲು ತಯಾರು ನಡೆಸಿದೆ. ಲೀಡ್ಸ್​ನಲ್ಲಿ ನಡೆಯಲಿರುವ ಮೂರನೇ ಪಂದ್ಯಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತನ್ನ ಬಲಿಷ್ಠ ತಂಡವನ್ನು ಪ್ರಕಟಮಾಡಿದೆ. ಅಚ್ಚರಿ ಎಂಬಂತೆ ಬರೋಬ್ಬರಿ ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್​ಗೆ ಡಾವಿಡ್ ಮೆಲನ್ (Dawid Malan) ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಹೌದು, ಲಾರ್ಡ್ಸ್ ಅಂಗಳದಲ್ಲಿ ಇಂಗ್ಲೆಂಡ್ ತಂಡದ ಕೆಲ ಆಟಗಾರರ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಮೊದಲ ಎರಡು ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ನೀಡಿದ ಡಾಮ್ ಸಿಬ್ಲಿ ಹಾಗೂ ಜಾಕ್ ಕ್ರಾವ್ಲೆ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಭುಜದ ನೋವಿನ ಸಮಸ್ಯೆಗೆ ತುತ್ತಾಗಿರುವ ಬಲಗೈ ವೇಗದ ಬೌಲರ್‌ ಮಾರ್ಕ್‌ ವುಡ್‌ ಅವರನ್ನು ತಂಡದಲ್ಲಿ ಉಳಿಸಿಕೊಂಡಿರುವುದು ಮತ್ತೊಂದು ಅಚ್ಚರಿ.

ಇನ್ನೂ ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗಿರುವ ಎಡಗೈ ಆಟಗಾರ ಡಾವಿಡ್‌ ಮಲಾನ್‌, ಬರೋಬ್ಬರಿ ಮೂರು ವರ್ಷಗಳ ಬಳಿಕ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2018ರಲ್ಲಿ ಅವರು ಭಾರತ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ಕೊನೆಯ ಟೆಸ್ಟ್‌ ಆಡಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿತ್ತು. ಬಳಿಕ ಅವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

ಇದೇ ವೇಳೆ ಇತ್ತೀಚಿನ ಸೀಮಿತ ಓವರ್‌ಗಳ ಸರಣಿಗಳಲ್ಲಿ ಮಿಂಚಿದ್ದ ಸಕಿಬ್‌ ಮಹ್ಮೂದ್‌ ಅವರನ್ನು ಟೆಸ್ಟ್‌ ತಂಡಕ್ಕೆ ಇಸಿಬಿ ಕರೆತಂದಿದೆ. “ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೊಂದು ಅವಕಾಶ ಪಡೆಯಲು ಡಾವಿಡ್‌ ಮಲಾನ್‌ ಅರ್ಹರು. ಎಲ್ಲ ಮಾದರಿಯ ಕ್ರಿಕೆಟ್‌ ಆಡಿದ ಅನುಭವ ಅವರಲ್ಲಿದೆ. ಆದ್ದರಿಂದಲೇ ಅವರಿಗೆ ಬುಲಾವ್ ಸಿಕ್ಕಿದೆ. ಅವರು ಅದ್ಭುತ ಆಟವಾಡುತ್ತಾರೆಂಬ ವಿಶ್ವಾಸವಿದೆ,” ಎಂದು ಇಂಗ್ಲೆಂಡ್ ಕೊಚ್‌ ಕ್ರಿಸ್‌ ಸಿಲ್ವರ್‌ವುಡ್‌ ಹೇಳಿದ್ದಾರೆ.

ಮೂರನೇ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ:

ಜೋ ರೂಟ್‌ (ನಾಯಕ), ಮೊಯೀನ್‌ ಅಲಿ, ಜೇಮ್ಸ್‌ ಆಂಡರ್ಸನ್, ಜಾನಿ ಬೈರ್‌ಸ್ಟೋವ್, ರೋರಿ ಬರ್ನ್ಸ್‌, ಜೋಸ್‌ ಬಟ್ಲರ್‌ (ವಿಕೆಟ್ ಕೀಪರ್), ಸ್ಯಾಮ್‌ ಕರ್ರನ್, ಹಸೀಬ್‌ ಹಮೀದ್‌, ಡ್ಯಾನ್‌ ಲಾರೆನ್ಸ್‌, ಸಕಿಬ್‌ ಮಹ್ಮೂದ್‌, ಡಾವಿಡ್‌ ಮಲಾನ್, ಕ್ರೇಗ್‌ ಓವರ್‌ಟರ್ನ್, ಓಲ್ಲೀ ಪೋಪ್, ಓಲ್ಲೀ ರಾಬಿನ್ಸನ್‌ ಮತ್ತು ಮಾರ್ಕ್‌ ವುಡ್‌.

ಮೊದಲ ಟೆಸ್ಟ್‌ ಪಂದ್ಯದ ಕೊನೇ ದಿನ ಸಂಪೂರ್ಣ ಮಳೆ ಸುರಿದ ಪರಿಣಾಮ ಭಾರತ ತಂಡಕ್ಕೆ ಗೆಲುವು ಕೈತಪ್ಪಿತ್ತು. ಬಳಿಕ ಲಾರ್ಡ್ಸ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್‌ ಪಂದ್ಯ ಕೊನೇ ದಿನ ಬೌಲರ್​ಗಳ ಅದ್ಭುತ ಪ್ರದರ್ಶನದ ನೆರವಿನಿಂದ ಟೀಮ್ ಇಂಡಿಯಾ 151 ರನ್‌ಗಳ ಭರ್ಜರಿ ಜಯದೊಂದಿಗೆ 1-0 ಅಂತರದ ಸರಣಿ ಮುನ್ನಡೆ ಗಳಿಸಿತ್ತು. ಮೂರನೇ ಪಂದ್ಯ ಆಗಸ್ಟ್‌ 25ರಂದು ಲೀಡ್ಸ್‌ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.

Junior world wrestling championship: ಬೆಳ್ಳಿಯೊಂದಿಗೆ 6 ಪದಕ ಗೆದ್ದ ಭಾರತದ ಕುಸ್ತಿಪಟುಗಳು! ಫೈನಲ್​ಗೇರಿದ ಬಿಪಾಶಾ

Rahul Dravid: NCA ಗೆ ಅರ್ಜಿ ಸಲ್ಲಿಸಿದ ರಾಹುಲ್ ದ್ರಾವಿಡ್: ಟೀಮ್ ಇಂಡಿಯಾ ಕೋಚ್ ಆಗೋದು ಡೌಟ್

(India vs England England announce squad for third Test against India at Headingley Dawid Malan returns)