
ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಕ್ತಾಯಗೊಂಡಿದೆ. ಎರಡನೇ ದಿನ ಆತಿಥೇಯ ಇಂಗ್ಲೆಂಡ್ ತಂಡ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ದಿನದ ಆರಂಭದಲ್ಲಿ ಭಾರತ ತಂಡವನ್ನು 471 ರನ್‌ಗಳಿಗೆ ಕಟ್ಟಿ ಹಾಕಿದ ಇಂಗ್ಲೆಂಡ್ ತಂಡ, ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿದೆ. ತಂಡದ ಪರ ಆರಂಭಿಕ ಬೆನ್ ಡಕೆಟ್ ಅರ್ಧಶತಕ ಸಿಡಿಸಿ ಔಟ್ ಆಗಿದ್ದರೆ, ಶತಕ ಸಿಡಿಸಿರುವ ಓಲಿ ಪೋಪ್ ಹಾಗೂ ಹ್ಯಾರಿ ಬ್ರೂಕ್ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಭಾರತದ ಪರ ಮಾರಕ ದಾಳಿ ನಡೆಸಿದ ಬುಮ್ರಾ (Jasprit Bumrah) 3 ವಿಕೆಟ್ ಕಬಳಿಸಿದ್ದಾರೆ.
ವಾಸ್ತವವಾಗಿ ಭಾರತವನ್ನು 471 ರನ್‌ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ಗೆ ಉತ್ತಮ ಆರಂಭ ಸಿಗಲಿಲ್ಲ. ವೇಗಿ ಜಸ್ಪ್ರೀತ್ ಬುಮ್ರಾ ಮೊದಲ ಓವರ್ನಲ್ಲೇ ಜ್ಯಾಕ್ ಕ್ರೌಲಿಯನ್ನು ಪೆವಿಲಿಯನ್ಗಟ್ಟಿದರು. ಹೀಗಾಗಿ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸುತ್ತಿರುವಂತೆ ತೋರಿತು. ಆದರೆ ಆ ಬಳಿಕ ಟೀಂ ಇಂಡಿಯಾ ಆಟಗಾರರು ಕೈಚೆಲ್ಲಿದ ಕ್ಯಾಚ್ಗಳು ಪಂದ್ಯವನ್ನು ಇಂಗ್ಲೆಂಡ್ನತ್ತ ವಾಲಿಸಿದವು.
ಆರಂಭದಲ್ಲಿ ಕ್ರೌಲಿ ವಿಕೆಟ್ ತೆಗೆದಿದ್ದ ಬುಮ್ರಾ ಆ ಬಳಿಕವೂ ಸತತವಾಗಿ ವಿಕೆಟ್ ಪಡೆಯುವ ಅವಕಾಶವನ್ನು ಸೃಷ್ಟಿಸಿದರು. ಆದರೆ ಯಶಸ್ವಿ ಜೈಸ್ವಾಲ್ ಹಾಗೂ ರವೀಂದ್ರ ಜಡೇಜಾ ಕ್ಯಾಚ್ಗಳನ್ನು ಕೈಚೆಲ್ಲುವ ಮೂಲಕ ಬೆನ್ ಡಕೆಟ್ಗೆ 2 ಜೀವದಾನಗಳನ್ನು ನೀಡಿದರು. ಇದರ ಲಾಭ ಪಡೆದ ಡಕೆಟ್ 62 ರನ್ಗಳ ಇನ್ನಿಂಗ್ಸ್ ಆಡಿ ಕೊನೆಗೆ ಬುಮ್ರಾ ಬೌಲಿಂಗ್ನಲ್ಲೇ ಔಟಾದರು. ಆ ನಂತರವೂ ಕಳಪೆ ಫೀಲ್ಡಿಂಗ್ ಮುಂದುವರೆಸಿದ ಜೈಸ್ವಾಲ್, ಅರ್ಧಶತಕ ಸಿಡಿಸಿದ್ದ ಓಲಿ ಪೋಪ್ ಅವರ ಕ್ಯಾಚನ್ನು ಕೈಚೆಲ್ಲಿದರು. ಈ ಕ್ಯಾಚ್ ಕೂಡ ಬುಮ್ರಾ ಬೌಲಿಂಗ್ನಲ್ಲೇ ಕೈತಪ್ಪಿತು. ಹೀಗಾಗಿ ಟೀಂ ಇಂಡಿಯಾ ಮೊದಲು ತನ್ನ ಕೆಳಕ್ರಮಾಂಕದ ಕಳಪೆ ಬ್ಯಾಟಿಂಗ್ನಿಂದಾಗಿ ಆ ನಂತರ ಕಳಪೆ ಫೀಲ್ಡಿಂಗ್ನಿಂದಾಗಿ ಎರಡನೇ ದಿನದಾಟದಲ್ಲಿ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿದೆ.
IND vs ENG: ಮೊದಲ ಓವರ್ನಲ್ಲೇ ವಿಕೆಟ್ ಉರುಳಿಸಿದ ಬುಮ್ರಾ; ವಿಡಿಯೋ
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಮೊದಲ ಇನ್ನಿಂಗ್ಸ್ 471 ರನ್ ಕಲೆಹಾಕಿದೆ. ಭಾರತದ ಪರ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದರೆ, ಕೆಎಲ್ ರಾಹುಲ್ 42 ರನ್ಗಳ ಕಾಣಿಕೆ ನೀಡಿದರು. ಈ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ, ಬೇರೆ ಯಾರೂ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಪರ, ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗಿ ಜೋಶ್ ಟಂಗ್ ತಲಾ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಬ್ರೈಡನ್ ಕಾರ್ಸೆ ಮತ್ತು ಶೋಯೆಬ್ ಬಶೀರ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 pm, Sat, 21 June 25