IND vs ENG: ನಾಲ್ವರಿಂದ 424 ರನ್; ಉಳಿದವರಿಂದ ಕೇವಲ 16 ರನ್..! ಭಾರತ ಎಡವಿದ್ದೇಲಿ?
India vs England Test: ಲೀಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಆರಂಭ ಪಡೆಯಿತು. ಗಿಲ್ ಮತ್ತು ಪಂತ್ ಅವರ ಶತಕಗಳಿಂದಾಗಿ ಭಾರತ 400 ರನ್‌ಗಳ ಗಡಿ ದಾಟಿತು. ಆದರೆ ನಂತರದ ವಿಕೆಟ್‌ಗಳ ಪತನದಿಂದಾಗಿ ತಂಡ 471 ರನ್‌ಗಳಿಗೆ ಆಲೌಟ್ ಆಯಿತು. ಮಧ್ಯಮ ಮತ್ತು ಕೆಳಮಟ್ಟದ ಆಟಗಾರರ ವೈಫಲ್ಯ ಇದಕ್ಕೆ ಕಾರಣ.

ಇಂಗ್ಲೆಂಡ್ ಪ್ರವಾಸವನ್ನು ಟೀಂ ಇಂಡಿಯಾ (Team India) ಅತ್ಯುತ್ತಮ ರೀತಿಯಲ್ಲಿ ಆರಂಭಿಸಿ ಲೀಡ್ಸ್ ಟೆಸ್ಟ್‌ನಲ್ಲಿ ಪ್ರಾಬಲ್ಯ ಸಾಧಿಸಿತು. ಪಂದ್ಯದ ಮೊದಲ ದಿನದಂದು, ಭಾರತೀಯ ಬ್ಯಾಟ್ಸ್‌ಮನ್‌ಗಳು ಉತ್ತಮ ಪರಿಸ್ಥಿತಿಯ ಸಂಪೂರ್ಣ ಲಾಭವನ್ನು ಪಡೆದುಕೊಂಡು ರನ್‌ಗಳ ಮಳೆ ಸುರಿಸಿದರು. ಎರಡನೇ ದಿನವೂ ನಾಯಕ ಶುಭ್ಮನ್ ಗಿಲ್ (Shubman Gill) ಮತ್ತು ರಿಷಭ್ ಪಂತ್ (Rishabh Pant) ಇನ್ನಿಂಗ್ಸ್ ಅನ್ನು ಬಲಿಷ್ಠ ರೀತಿಯಲ್ಲಿ ಮುನ್ನಡೆಸಿ ತಂಡವನ್ನು 400 ರನ್‌ಗಳ ಗಡಿ ದಾಟಿಸಿದರು. ಆದರೆ ಆ ನಂತರ ಇದ್ದಕ್ಕಿದ್ದಂತೆ ಟೀಂ ಇಂಡಿಯಾ ಲಯ ತಪ್ಪಿತು. ಹೀಗಾಗಿ 600 ರನ್‌ಗಳ ಗಡಿ ಮುಟ್ಟುವಂತೆ ಕಾಣುತ್ತಿದ್ದ ಟೀಂ ಇಂಡಿಯಾ, ಕೊನೆಗೆ 500 ರನ್‌ಗಳನ್ನು ದಾಟಲಾಗದೆ 471 ರನ್‌ಗಳಿಗೆ ಆಲೌಟ್ ಆಯಿತು.
ನಾಲ್ವರಿಂದ 424 ರನ್
ಜೂನ್ 20, ಶುಕ್ರವಾರ ಹೆಡಿಂಗ್ಲೆ ಮೈದಾನದಲ್ಲಿ ಪ್ರಾರಂಭವಾದ ಈ ಟೆಸ್ಟ್ ಪಂದ್ಯದ ಮೊದಲ ದಿನದಂದು, ಟೀಂ ಇಂಡಿಯಾ 359 ರನ್ ಗಳಿಸಿ ಕೇವಲ 3 ವಿಕೆಟ್‌ಗಳನ್ನು ಮಾತ್ರ ಕಳೆದುಕೊಂಡಿತ್ತು. ಮೊದಲ ದಿನ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಗಿಲ್ ಶತಕ ಗಳಿಸಿದರೆ, ರಿಷಭ್ ಪಂತ್ ಕೂಡ ಅರ್ಧಶತಕ ಪೂರೈಸಿದ್ದರು. ಅಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಎರಡನೇ ದಿನದಂದು 600 ರನ್‌ಗಳ ಗಡಿ ದಾಡುತ್ತದೆ ಎಂದು ಎಂದು ನಿರೀಕ್ಷಿಸಲಾಗಿತ್ತು. ಮೊದಲ ಸೆಷನ್‌ನಲ್ಲಿ ಗಿಲ್ ಮತ್ತು ಪಂತ್ ಈ ಭರವಸೆಯನ್ನು ಜೀವಂತವಾಗಿರಿಸಿಕೊಂಡು ತಂಡವನ್ನು 425 ರನ್‌ಗಳಿಗೆ ಕೊಂಡೊಯ್ದರು.
ಹಠಾತ್ ವಿಕೆಟ್ ಪತನ
ಈ ಹೊತ್ತಿಗೆ, ಪಂತ್ ತಮ್ಮ ಅದ್ಭುತ ಶತಕವನ್ನು ಪೂರ್ಣಗೊಳಿಸಿದರೆ, ಇತ್ತ ಗಿಲ್ ಕೂಡ 150 ರನ್‌ಗಳ ಸಮೀಪದಲ್ಲಿದ್ದರು. ಆದರೆ ಇಲ್ಲಿಂದ ಇಡೀ ಆಟ ಬದಲಾಗಲು ಪ್ರಾರಂಭಿಸಿತು. ಸ್ಕೋರ್ 430 ರನ್‌ಗಳನ್ನು ತಲುಪುವ ಹೊತ್ತಿಗೆ ಶುಭ್ಮನ್ ಗಿಲ್ (147) ಔಟಾದರು. ಇಲ್ಲಿಂದ ಭಾರತದ ವಿಕೆಟ್‌ಗಳ ಪತನ ಶುರುವಾಯಿತು. ಇದರ ಪರಿಣಾಮವಾಗಿ ಮುಂದಿನ 41 ರನ್‌ಗಳಿಗೆ, ಪಂತ್ ಮತ್ತು ಉಳಿದ 6 ಬ್ಯಾಟ್ಸ್‌ಮನ್‌ಗಳು ಸಹ ಒಬ್ಬೊಬ್ಬರಾಗಿ ಪೆವಿಲಿಯನ್ ಸೇರಿಕೊಂಡರು ಅಂತಿಮವಾಗಿ ಇಡೀ ತಂಡವು 471 ರನ್‌ಗಳಿಗೆ ಕುಸಿಯಿತು.
IND vs ENG: ಮೂವರ ಶತಕ, ಮೂವರ ಸೊನ್ನೆ; 471 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ
ಈ ರೀತಿಯಾಗಿ, ಮಧ್ಯಮ ಮತ್ತು ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪಂತ್, ಜೈಸ್ವಾಲ್ ಮತ್ತು ಗಿಲ್ ಅವರು ಅತ್ಯುತ್ತಮ ಶತಕಗಳನ್ನು ಬಾರಿಸುವ ಮೂಲಕ ಹಾಕಿಕೊಟ್ಟ ಅಡಿಪಾಯದ ಲಾಭವನ್ನು ಪಡೆಯಲು ವಿಫಲರಾದರು. ಅಲ್ಲದೆ ಕರುಣ್ ನಾಯರ್ (0), ರವೀಂದ್ರ ಜಡೇಜಾ (11) ಮತ್ತು ಶಾರ್ದೂಲ್ ಠಾಕೂರ್ (1) ರಂತಹ ಬ್ಯಾಟ್ಸ್‌ಮನ್‌ಗಳ ಬೇಗನೇ ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ನಿರೀಕ್ಷಿತ ಗುರಿಯನ್ನು ತಲುಪಲಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
