India vs England: ಹೊಸ ಪ್ರಯೋಗಕ್ಕಿಳಿದು ಕೈಸುಟ್ಟುಕೊಂಡ ಕೊಹ್ಲಿ: ಜಡೇಜಾಗೆ ಬಡ್ತಿ ನೀಡಲು ಕಾರಣವೇನು ಗೊತ್ತಾ?

| Updated By: Vinay Bhat

Updated on: Sep 03, 2021 | 9:50 AM

Ravindra Jadeja: ಸತತ ವೈಫಲ್ಯ ಅನುಭವಿಸಿದ್ದರೂ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಅಜಿಂಕ್ಯಾ ರಹಾನೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ, ಕೊಹ್ಲಿ ಜಡೇಜಾ ಅವರನ್ನ ಬ್ಯಾಟಿಂಗ್​ಗೆ ಕಳುಹಿಸಿದ್ದು ಅಚ್ಚರಿ ಮೂಡಿಸಿತು.

India vs England: ಹೊಸ ಪ್ರಯೋಗಕ್ಕಿಳಿದು ಕೈಸುಟ್ಟುಕೊಂಡ ಕೊಹ್ಲಿ: ಜಡೇಜಾಗೆ ಬಡ್ತಿ ನೀಡಲು ಕಾರಣವೇನು ಗೊತ್ತಾ?
Ravindra Jadeja
Follow us on

ಆಂಗ್ಲರ ನಾಡಿನಲ್ಲಿ ಸಾಗುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್​ ಪಂದ್ಯದಲ್ಲೂ ಬ್ಯಾಟ್ಸ್​ಮನ್​ಗಳ ಆಟ ನಡೆಯುತ್ತಿಲ್ಲ. ಬೌಲರ್​ಗಳೇ ಪಾರುಪತ್ಯ ಮೆರೆಯುತ್ತಿದ್ದಾರೆ. 4ನೇ ಟೆಸ್ಟ್ ಆರಂಭವಾದ ಮೊದಲ ದಿನವೇ ಬರೋಬ್ಬರಿ 13 ವಿಕೆಟ್ ಉರುಳಿದವು. ಟೀಮ್ ಇಂಡಿಯಾ (Team India) 191 ರನ್​ಗಳಿಗೆ ಸರ್ವಪತನ ಕಂಡರೆ, ಇಂಗ್ಲೆಂಡ್ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 53 ರನ್ ಕಲೆಹಾಕಿದೆ. ಇಂದು ಎರಡನೇ ದಿನ ಭಾರತೀಯ ಬೌಲರ್​ಗಳು ಮಾರಕ ದಾಳಿ ಸಂಘಟಿಸಬೇಕಾದ ಅನಿವಾರ್ಯತೆ ಇದ್ದು 200 ರನ್ ಒಳಗೆ ಇಂಗ್ಲೆಂಡ್ ಅನ್ನು ಕಟ್ಟಿಹಾಕಬೇಕಿದೆ.

ನಾಲ್ಕನೇ ಟೆಸ್ಟ್​ನ ಮೊದಲನೇ ದಿನ ಅಷ್ಟೊಂದು ಕುತೂಹಲಕಾರಿಯಾಗಿ ಇರಲಿಲ್ಲ. ಶಾರ್ದೂಲ್ ಠಾಕೂರ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದೆಲ್ಲ ಬ್ಯಾಟ್ಸ್​ಮನ್​ಗಳು ತಮ್ಮ ಹಳೆಯ ಚಾಳಿ ಮುಂದುವರೆಸಿದರು. ಇದರ ನಡುವೆ ಟೀಮ್ ಇಂಡಿಯಾ ಹೊಸ ಪ್ರಯೋಗಕ್ಕೆ ಇಳಿಯಿತಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ.

ಸತತ ವೈಫಲ್ಯ ಅನುಭವಿಸಿದ್ದರೂ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಉಪ ನಾಯಕ ಅಜಿಂಕ್ಯಾ ರಹಾನೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ, ಕೊಹ್ಲಿ ರಹಾನೆಗಿಂತ ಮೊದಲು ರವೀಂದ್ರ ಜಡೇಜಾ ಅವರನ್ನ ಬ್ಯಾಟಿಂಗ್​ಗೆ ಕಳುಹಿಸಿದ್ದು ಅಚ್ಚರಿ ಮೂಡಿಸಿತು. ಥರ್ಡ್ ಡೌನ್​ನಲ್ಲಿ ಜಡೇಜಾ ಆಡಿರುವುದು ತೀರಾ ಅಪರೂಪ. ಅದರಲ್ಲೂ ವಿಶೇಷ ಸಂದರ್ಭ ಇಲ್ಲದಿದ್ದರೂ ಜಡೇಜಾಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.

ಆದರೆ, ಭಾರತ ಆಯ್ಕೆ ಮಾಡಿಕೊಂಡ ಪ್ಲಾನ್ ಸಂಪೂರ್ಣ ವಿಫಲವಾಯಿತು. ಜಡೇಜಾ ಮೇಲಿನ ಕ್ರಮಾಂಕಕ್ಕೆ ಬಂದ ಉದ್ದೇಶ ಈಡೇರಲಿಲ್ಲ. ಕೇವಲ 10 ರನ್ ಗಳಿಸಿ ಜಡ್ಡು ಪೆವಿಲಿಯನ್ ಹಾದಿ ಹಿಡಿದರು. ಇದರ ನಡುವೆ ಟಿವಿ ವೀಕ್ಷಕ ವಿವರಣೆಗಾರರಾಗಿದ್ದ ಸುನೀಲ್ ಗವಾಸ್ಕರ್ ಈ ಬೆಳವಣಿಗೆ ಬಗ್ಗೆ ತಮ್ಮದೇ ವಿಶ್ಲೇಷಣೆ ನೀಡಿದರು. ವಿರಾಟ್ ಕೊಹ್ಲಿ ಮೇಲೆ ಮುಗಿಬಿದ್ದಿದ್ದ ಇಂಗ್ಲೆಂಡ್ ಬೌಲರ್​ಗಳ ಲಯ ಮುರಿಯುವ ತಂತ್ರ ಇದಾಗಿರಬಹುದು ಎಂಬುದು ಅವರ ಅನಿಸಿಕೆ. ಜಡೇಜಾ ಎಡಗೈ ಬ್ಯಾಟ್ಸ್​ಮನ್, ವಿರಾಟ್ ಕೊಹ್ಲಿ ಬಲಗೈ ಬ್ಯಾಟ್ಸ್​ಮನ್ ಎಂಬ ಲೆಕ್ಕಾಚಾರ ಇರಬಹುದು ಎಂದು ಹೇಳಿದರು. ಆದರೆ, ಕೊಹ್ಲಿ ಪಡೆಯ ಪ್ಲಾನ್ ವರ್ಕೌಟ್ ಆಗಿಲ್ಲ.

 

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಮೊದಲ ದಿನವೇ 191 ರನ್​ಗೆ ಸರ್ವಪತನ ಕಂಡಿರುವ ಕೊಹ್ಲಿ ಬಳಗ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕಿದೆ. ಇತ್ತ ಇಂಗ್ಲೆಂಡ್ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ.

ಭಾರತ ಪರ ಠಾಕೂರ್ 57 ರನ್ ಬಾರಿಸಿದರೆ, ನಾಯಕ ವಿರಾಟ್ ಕೊಹ್ಲಿ 96 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 50 ರನ್ ಗಳಿಸಿದರು. ಕೆ. ಎಲ್ ರಾಹುಲ್ 17 ರನ್ ಗಳಿಸಿದರು. ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 15ರ ಗಡಿ ದಾಟಲಿಲ್ಲ. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 4 ವಿಕೆಟ್ ಪಡೆದರೆ, ರಾಬಿನ್ಸನ್ 3, ಜೇಮ್ಸ್ ಆಂಡರ್ಸನ್ ಹಾಗೂ ಓವರ್ಟನ್ ತಲಾ 1 ವಿಕೆಟ್ ಕಿತ್ತರು.

India vs England: ಸ್ಟಾರ್ ಬ್ಯಾಟ್ಸ್​ಮನ್​ಗಳು ಔಟಾದ ನಂತರ ಬಂದು ವಿರೇಂದ್ರ ಸೆಹ್ವಾಗ್ ದಾಖಲೆ ಮುರಿದ ಶಾರ್ದೂಲ್ ಠಾಕೂರ್

Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ 11ನೇ ಪದಕ: ಹೈ ಜಂಪ್​ನಲ್ಲಿ ಪ್ರವೀಣ್​ಗೆ ಬೆಳ್ಳಿ

(India vs England You know why Ravindra Jadeja Walks In To Bat Ahead Of Ajinkya Rahane)