Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ 11ನೇ ಪದಕ: ಹೈ ಜಂಪ್​ನಲ್ಲಿ ಪ್ರವೀಣ್​ಗೆ ಬೆಳ್ಳಿ

ಪುರುಷರ ಹೈ ಜಂಪ್ ಟಿ64 ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ 11ನೇ ಪದಕ: ಹೈ ಜಂಪ್​ನಲ್ಲಿ ಪ್ರವೀಣ್​ಗೆ ಬೆಳ್ಳಿ
Praveen Kumar

ಟೋಕಿಯೊದಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಇಂದು ಭಾರತಕ್ಕೆ ಶುಭ ಶುಕ್ರವಾರ ಎಂದೇ ಹೇಳಬಹುದು. ಪುರುಷರ ಹೈ ಜಂಪ್ ಟಿ64 ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಪ್ರವೀಣ್ ಅವರು ಹೈ ಜಂಪ್​ನಲ್ಲಿ 2.07 ಮೀಟರ್ ಜಿಗಿದು ಏಷ್ಯಾದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ.

 

ಇದೇ ಪಂದ್ಯದಲ್ಲಿ ಬ್ರಿಟನ್ ನ ಜೋನಾಥನ್ ಬ್ರೂಮ್ ಎಡ್ವರ್ಡ್ಸ್ ಅವರು 2.10 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಚಿನ್ನದ ಪದಕ ಗೆದ್ದರೆ, 2.04 ಮೀಟರ್ ಎತ್ತರಕ್ಕೆ ಜಿಗಿದ ಪೋಲೆಂಡ್ ನ ಮ್ಯಾಕೀಜ್ ಲೆಪಿಯಾಟೊ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ಇನ್ನು ಈ ಬೆಳ್ಳಿ ಪದಕದ ಮೂಲಕ ಹಾಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಗಳಿಕೆ 11ಕ್ಕೆ ಏರಿಕೆಯಾಗಿದ್ದು, ಈ ಪೈಕಿ 2 ಚಿನ್ನ, 6 ಬೆಳ್ಳಿ ಮತ್ತು 3 ಕಂಚಿನ ಪದಕಗಳಿವೆ.

ಈ ಹಿಂದೆ ಪುರುಷರ ಹೈ ಜಂಪ್​ ವಿಭಾಗದಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. ಇವರು ಟಿ 47 ಹೈ ಜಂಪ್​ನಲ್ಲಿ 2.06 ಮೀಟರ್ ಜಿಗಿದಿದ್ದರು. ಈ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು. ಸದ್ಯ ಪ್ರವೀಣ್ 2.07 ಮೀಟರ್ ಜಿಗಿದು ಬೆಳ್ಳಿ ಪದಕ ತಮ್ಮದಾಗಿಸಿದ್ದಾರೆ.

ಇನ್ನೂ 25 ಮೀ. ಪಿಸ್ತೂಲ್‌ ಮಿಶ್ರ ವಿಭಾಗದ ಎಸ್‌ಎಚ್‌1 ಸ್ಪರ್ಧೆಯಲ್ಲಿ ಶೂಟರ್‌ ರಾಹುಲ್‌ ಜಕ್ಕರ್‌ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅರ್ಹತಾ ಸುತ್ತಿನಲ್ಲಿ 576 ಅಂಕಗಳೊಂದಿಗೆ 2ನೇ ಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿದ್ದ ಜಕ್ಕರ್‌ ಫೈನಲ್‌ನಲ್ಲಿ ನಿರಾಸೆ ಮೂಡಿಸಿದರು. ಭಾರತದ ಇನ್ನೊಬ್ಬ ಸ್ಪರ್ಧಿ ಆಕಾಶ್‌ ಅರ್ಹತಾ ಸುತ್ತಿನಲ್ಲಿ 20ನೇ ಸ್ಥಾನ ಪಡೆದು ಸ್ಪರ್ಧೆಯಿಂದ ಹೊರಬಿದ್ದರು.

ಪುರುಷರ ಶಾಟ್‌ಪುಟ್‌ನ ಎಫ್‌35 ಸ್ಪರ್ಧೆಯ ಫೈನಲ್‌ನಲ್ಲಿ ಅರವಿಂದ್‌ ಪದಕ ಗೆಲ್ಲಲು ವಿಫಲರಾದರು. ಅರವಿಂದ್‌ 13.48 ಮೀ. ದೂರಕ್ಕೆ ಶಾಟ್‌ಪುಟ್‌ ಎಸೆದು 7ನೇ ಸ್ಥಾನ ಪಡೆದರು. 16.13 ಮೀ. ದೂರ ಎಸೆದ ಉಜ್ಬೇಕಿಸ್ತಾನದ ಖುಸ್ನಿದ್ದಿನ್‌ ಚಿನ್ನ ಗೆದ್ದುಕೊಂಡರು.

Read Full Article

Click on your DTH Provider to Add TV9 Kannada