India vs England: ಸ್ಟಾರ್ ಬ್ಯಾಟ್ಸ್​ಮನ್​ಗಳು ಔಟಾದ ನಂತರ ಬಂದು ವಿರೇಂದ್ರ ಸೆಹ್ವಾಗ್ ದಾಖಲೆ ಮುರಿದ ಶಾರ್ದೂಲ್ ಠಾಕೂರ್

Shardul Thakur: ಕೇವಲ 36 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಅಮೋಘ ಸಿಕ್ಸರ್ ಸಿಡಿಸಿದ ಠಾಕೂರ್ 57 ರನ್ ಚಚ್ಚಿದರು. 31ನೇ ಎಸೆತದಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ವಿಶೇಷ ದಾಖಲೆಯನ್ನೂ ಬರೆದರು.

India vs England: ಸ್ಟಾರ್ ಬ್ಯಾಟ್ಸ್​ಮನ್​ಗಳು ಔಟಾದ ನಂತರ ಬಂದು ವಿರೇಂದ್ರ ಸೆಹ್ವಾಗ್ ದಾಖಲೆ ಮುರಿದ ಶಾರ್ದೂಲ್ ಠಾಕೂರ್
Shardul Thakur
Follow us
TV9 Web
| Updated By: Vinay Bhat

Updated on: Sep 03, 2021 | 8:28 AM

ಲಂಡನ್: ಇಲ್ಲಿನ ಓವಲ್ (Ovel) ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England) ಬೌಲರ್​ಗಳಾದ ಕ್ರಿಸ್ ವೋಕ್ಸ್ ಮತ್ತು ಒಲಿ ರಾಬಿನ್ಸನ್ ಅವರ ಸ್ವಿಂಗ್ ದಾಳಿಗೆ ಭಾರತೀಯ (India) ಬ್ಯಾಟ್ಸ್​ಮನ್​ಗಳು ನೆಲಕಚ್ಚಿದರು. ಆದರೆ ಕೆಲ ಸಮಯ ಇದೇ ಬೌಲರ್​ಗಳ ಬೆವರಿಳಿಸಿದ್ದು ಶಾರ್ದೂಲ್ ಠಾಕೂರ್ (Shardul Thakur ). ಖ್ಯಾತ ಅನುಭವಿ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಸೇರಿಕೊಂಡ ನಂತರ ಕಣಕ್ಕಿಳಿದ ಠಾಕೂರ್ ಮಿಂಚಿನ ಬ್ಯಾಟಿಂಗ್ ಮಾಡಿದರು. ಬ್ಯಾಟ್ಸ್​ಮನ್​ಗಳೂ ನಾಚುವಂತೆ ಬ್ಯಾಟ್ ಬೀಸಿದ ಠಾಕೂರ್ ತಂಡದ ರನ್ ಗತಿಯನ್ನು ಏರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಜೊತೆಗೆ ವಿಶೇಷ ದಾಖಲೆಯನ್ನೂ ಬರೆದರು.

ಭಾರತ ಕೇವಲ 117 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ಗೆ ಇಳಿದರು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮೊತ್ತ 150ರ ಗಡಿ ದಾಟುವುದು ಕಷ್ಟ ಎಂಬ ಪರಿಸ್ಥಿತಿಯಿತ್ತು. ಇಂಗ್ಲೆಂಡ್ ಬೌಲರ್‌ಗಳು ಕೂಡ ಇದೇ ಲೆಕ್ಕಾಚಾರದಲ್ಲಿದ್ದರು. ಆದರೆ ಶಾರ್ದೂಲ್ ಠಾಕೂರ್ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು. ಇಂಗ್ಲೆಂಡ್ ವೇಗಿಗಳ ದಾಳಿಗೆ ಸ್ಪೋಟಕ ಪ್ರದರ್ಶನ ನೀಡಲು ಮುಂದಾಗುವ ಮೂಲಕ ರನ್‌ಗತಿ ಏರಿಸಿದರು.

ಕೇವಲ 36 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಅಮೋಘ ಸಿಕ್ಸರ್ ಸಿಡಿಸಿದ ಠಾಕೂರ್ 57 ರನ್ ಚಚ್ಚಿದರು. 31ನೇ ಎಸೆತದಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ವಿಶೇಷ ದಾಖಲೆಯನ್ನೂ ಬರೆದರು. ಭಾರತ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಅಚ್ಚರಿ ಎಂದರೆ ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ದಾಖಲೆಯನ್ನೂ ಮುರಿದಿದ್ದಾರೆ.

ಭಾರತ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ದಾಖಲೆ ಕಪಿಲ್ ದೇವ್ ಹೆಸರಲ್ಲಿದೆ. ಇವರು 1982 ರಲ್ಲಿ ಪಾಕಿಸ್ತಾನ ವಿರುದ್ಧ ಕೇವಲ 30 ಎಸೆತಗಳಲ್ಲಿ 50 ರನ್ ಬಾರಿಸಿದ್ದರು. ನಂತರದ ಸ್ಥಾನದಲ್ಲಿ ಠಾಕೂರ್ ಇದ್ದು31 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ವಿರೇಂದ್ರ ಸೆಹ್ವಾಗ್ 2008 ರಲ್ಲಿ ಇಂಗ್ಲೆಂಡ್ ವಿರುದ್ಧ 32 ಎಸೆತಗಳಲ್ಲಿ 50 ರನ್ ಪೂರೈಸಿದ್ದರು. ಹೀಗೆ ಸೆಹ್ವಾಗ್ ದಾಖಲೆಯನ್ನು ಠಾಕೂರ್ ಹಿಂದಿಕ್ಕಿದ್ದಾರೆ.

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಮೊದಲ ದಿನವೇ 191 ರನ್​ಗೆ ಸರ್ವಪತನ ಕಂಡಿರುವ ಕೊಹ್ಲಿ ಬಳಗ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕಿದೆ. ಇತ್ತ ಇಂಗ್ಲೆಂಡ್ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ.

ಭಾರತ ಪರ ಠಾಕೂರ್ 57 ರನ್ ಬಾರಿಸಿದರೆ, ನಾಯಕ ವಿರಾಟ್ ಕೊಹ್ಲಿ 96 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 50 ರನ್ ಗಳಿಸಿದರು. ಕೆ. ಎಲ್ ರಾಹುಲ್ 17 ರನ್ ಗಳಿಸಿದರು. ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 15ರ ಗಡಿ ದಾಟಲಿಲ್ಲ. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 4 ವಿಕೆಟ್ ಕಿತ್ತರೆ, ರಾಬಿನ್ಸನ್ 3, ಜೇಮ್ಸ್ ಆಂಡರ್ಸನ್ ಹಾಗೂ ಓವರ್ಟನ್ ತಲಾ 1 ವಿಕೆಟ್ ಪಡೆದರು.

India vs England: ಮೊದಲನೇ ದಿನ ಆಂಗ್ಲರ ಮೇಲುಗೈ: ಎರಡನೇ ದಿನಕ್ಕೆ ಟೀಮ್ ಇಂಡಿಯಾ ಮಾಡಬೇಕಿದೆ ಮಾಸ್ಟರ್ ಪ್ಲಾನ್

Cristiano Ronaldo: ಕೊನೇ ಕ್ಷಣದಲ್ಲಿ ಫಲಿತಾಂಶ ಬದಲಿಸಿ ವಿಶ್ವ ದಾಖಲೆ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ

(India vs England 4th Test: Shardul Thakur Breaks Virender Sehwag record second fastest fifty for India)