ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಬಳಿಕ ಟೀಮ್ ಇಂಡಿಯಾ ಐರ್ಲೆಂಡ್ (India Tour of Ireland) ವಿರುದ್ಧ ಸೀಮಿತ ಓವರ್‌ಗಳ ಸರಣಿ ಆಡಲಿದೆ. ಜೂನ್ 26 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟಿ20 ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯವು ಭಾನುವಾರ (ಜೂನ್ 26) ನಡೆಯಲಿದ್ದು, ಹಾಗೆಯೇ 2ನೇ ಪಂದ್ಯವು ಜೂನ್ 28 ರಂದು ಜರುಗಲಿದೆ. ಈ ಎರಡೂ ಪಂದ್ಯಗಳನ್ನು ಮಲಾಹೈಡ್‌ನ ದಿ ವಿಲೇಜ್ ಸ್ಟೇಡಿಯಂನಲ್ಲಿ ಆಡಲಾಗುತ್ತದೆ. ಈ ಸರಣಿಗಾಗಿ ಮೀಸಲು ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಏಕೆಂದರೆ ಜುಲೈ 1 ರಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯ ಆಡಲಿದೆ. ಹೀಗಾಗಿ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಪ್ರಮುಖ ಆಟಗಾರರು ಇಂಗ್ಲೆಂಡ್ಗೆ ತೆರಳಿದ್ದಾರೆ. ಹೀಗಾಗಿ ಐರ್ಲೆಂಡ್ ವಿರುದ್ದ ಭಾರತ ತಂಡದ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಕಾಣಿಸಿಕೊಳ್ಳಲಿದ್ದು, ಜೊತೆಗೆ ಎನ್‌ಸಿಎ ತರಬೇತುದಾರರಾದ ಸಿತಾಂಶು ಕೊಟಕ್, ಸಾಯಿರಾಜ್ ಬಹುತುಲೆ ಮತ್ತು ಮುನಿಶ್ ಬಾಲಿ ಟೀಮ್ ಇಂಡಿಯಾ ಜೊತೆ ಐರ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ.
ವಿಶೇಷ ಎಂದರೆ ಭಾರತ ತಂಡ 4 ವರ್ಷಗಳ ಬಳಿಕ ಐರ್ಲೆಂಡ್ ಪ್ರವಾಸ ಕೈಗೊಂಡಿದೆ. ಇದಕ್ಕೂ ಮೊದಲು, 2018 ರಲ್ಲಿ, ಭಾರತ ತಂಡವು ಟಿ20 ಸರಣಿಗಾಗಿ ಐರ್ಲೆಂಡ್‌ಗೆ ಪ್ರವಾಸ ಕೈಗೊಂಡಿತು. ಇದೀಗ ಮತ್ತೊಮ್ಮೆ ಐರ್ಲೆಂಡ್ ವಿರುದ್ದ ಸರಣಿ ಆಡುತ್ತಿದೆ. ಹೀಗಾಗಿ ಟೀಮ್ ಇಂಡಿಯಾ ವಿರುದ್ದದ ಸರಣಿಯನ್ನು ಐರ್ಲೆಂಡ್ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಪಂದ್ಯ ಎಷ್ಟು ಗಂಟೆಗೆ ಶುರು?
ಇನ್ನು ಈ ಪಂದ್ಯಗಳ ಟಾಸ್ ಭಾರತೀಯ ಕಾಲಮಾನ ರಾತ್ರಿ 8.30 ಕ್ಕೆ ನಡೆಯಲಿದೆ. ಹಾಗೆಯೇ ಪಂದ್ಯವು 9 ಗಂಟೆಗೆ ಶುರುವಾಗಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಪಂದ್ಯದ ನೇರ ಪ್ರಸಾರವನ್ನು ಸೋನಿ ನೆಟ್ವರ್ಕ್ ಮಾಡಲಿದ್ದು, ಅದರಂತೆ ಸೋನಿ ಸಿಕ್ಸ್, ಸೋನಿ ಸಿಕ್ಸ್ HD ಚಾನೆಲ್ಗಳಲ್ಲಿ ಹಾಗೂ ಸೋನಿ ಲೈವ್ ಆ್ಯಪ್ಗಳ ಮೂಲಕ ವೀಕ್ಷಿಸಬಹುದು.
ಭಾರತ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ದೀಪಕ್ ಹೂಡಾ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್
ಐರ್ಲೆಂಡ್ ಟಿ20 ತಂಡ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕ್ರೇಗ್ ಯಂಗ್.