Rishabh Pant: ನನಗಿನ್ನು 24 ವರ್ಷ ಇಷ್ಟು ಬೇಗ ಪ್ರಶ್ನೆ ಮಾಡಿದ್ರೆ ಹೇಗೆ..?; ಟೀಕಿಸುವವರಿಗೆ ಪಂತ್ ಖಡಕ್ ರಿಪ್ಲೈ

| Updated By: ಪೃಥ್ವಿಶಂಕರ

Updated on: Nov 30, 2022 | 10:17 AM

Rishabh Pant: ನನಗೆ ದಾಖಲೆಗಳಲ್ಲಿ ನಂಬಿಕೆ ಇಲ್ಲ. ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿದ್ದೇನೆ. ಹಾಗೆಯೇ ವೈಟ್ ಬಾಲ್ ಕ್ರಿಕೆಟ್‌ನಲ್ಲಿಯೂ ನನ್ನ ದಾಖಲೆ ಉತ್ತಮವಾಗಿದೆ. ಅಲ್ಲದೆ ನನಗೀಗ ಕೇವಲ 24 ವರ್ಷ. ಯಾವುದಾದರೂ ಹೋಲಿಕೆ ಮಾಡಬೇಕಾದರೆ ನಾನು 31-32 ವರ್ಷದವನಿದ್ದಾಗ ಮಾಡಿ ಎಂದಿದ್ದಾರೆ.

Rishabh Pant: ನನಗಿನ್ನು 24 ವರ್ಷ ಇಷ್ಟು ಬೇಗ ಪ್ರಶ್ನೆ ಮಾಡಿದ್ರೆ ಹೇಗೆ..?; ಟೀಕಿಸುವವರಿಗೆ ಪಂತ್ ಖಡಕ್ ರಿಪ್ಲೈ
rishabh pant
Follow us on

ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ (India Vs New Zealand) ತನ್ನ ಪ್ರದರ್ಶನಕ್ಕಿಂತಲೂ ಹೆಚ್ಚಾಗಿ ರಿಷಬ್ ಪಂತ್ (Rishabh Pant) ವಿಚಾರದಲ್ಲಿ ಸುದ್ದಿಯಾಗಿದೆ. ಏಷ್ಯಾಕಪ್​ನಿಂದಲೂ ಕಳಪೆ ಫಾರ್ಮ್​ನಿಂದ ನರಳುತ್ತಿರುವ ಪಂತ್​ಗೆ ತಂಡದಲ್ಲಿ ಪದೇ ಪದೇ ಅವಕಾಶ ನೀಡುತ್ತಿರುವುದು ಭಾರತ ಕ್ರಿಕೆಟ್​ನಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಅದರಲ್ಲೂ ಪ್ರತಿಭೆಗಳ ದಂಡನ್ನೇ ಹೊಂದಿರುವ ಭಾರತದಲ್ಲಿ ಸತತ ವೈಫಲ್ಯಗಳನ್ನು ಕಾಣುತ್ತಿರುವ ಆಟಗಾರನಿಗೆ ನಿರಂತರ ಅವಕಾಶ ನೀಡುತ್ತಿರುವುದು ಟೀಂ ಇಂಡಿಯಾ (Team India) ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಪ್ರತಿ ಪ್ರವಾಸಕ್ಕೂ ಆಯ್ಕೆಯಾಗುವ ಸಂಜು ಸ್ಯಾಮ್ಸನ್​ಗೆ (Sanju Samson) ತಂಡದಲ್ಲಿ ಅವಕಾಶ ನೀಡದಿರುವುದು ಅಭಿಮಾನಿಗಳು ಮತ್ತಷ್ಟು ಕೆರಳುವಂತೆ ಮಾಡಿದೆ. ಇತ್ತ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಪದೇ ಪದೇ ವಿಫಲರಾಗುತ್ತಿರುವ ಪಂತ್ ಮೇಲೆಯೂ ಪ್ರಶ್ನೆಗಳು ಉದ್ಭವಿಸುತ್ತಿವೆ. ಈಗ ಇಂತಹ ಪ್ರಶ್ನೆಗಳಿಗೆ ಪಂತ್ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯಕ್ಕೂ ಮೊದಲು ವಿಶ್ಲೇಷಕ ಹರ್ಷ ಭೋಗ್ಲೆ ತಮ್ಮ ಪ್ರದರ್ಶನದ ಕುರಿತು ಎದ್ದಿರುವ ಪ್ರಶ್ನೆಗಳ ಬಗ್ಗೆ ಪಂತ್ ಬಳಿ ಪ್ರತಿಕ್ರಿಯೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಿಷಬ್ ಪಂತ್ ನನ್ನ ಏಕದಿನ ಮತ್ತು ಟಿ20 ಮಾದರಿಯ ಪ್ರದರ್ಶನ ಟೆಸ್ಟ್ ಕ್ರಿಕೆಟ್‌ನಲ್ಲಿರುವಂತೆಯೇ ಉತ್ತಮವಾಗಿದೆ ಎಂದಿದ್ದಾರೆ.

ನನಗೆ ಈಗ ಕೇವಲ 24 ವರ್ಷ- ಪಂತ್

ಟೆಸ್ಟ್ ಕ್ರಿಕೆಟ್ ಮತ್ತು ವೈಟ್ ಬಾಲ್ ಕ್ರಿಕೆಟ್‌ನ ಪ್ರದರ್ಶನದ ನಡುವಿನ ವ್ಯತ್ಯಾಸವೇನು?. ಎರಡೂ ಸ್ವರೂಪಗಳ ದಾಖಲೆಗಳು ಎರಡು ವಿಭಿನ್ನ ಕಥೆಗಳನ್ನು ಹೇಳುತ್ತವೆಯೇ? ಎಂಬ ಪ್ರಶ್ನೆಯನ್ನು ಪಂತ್ ಬಳಿ ಕೇಳಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಪಂತ್, ನನಗೆ ದಾಖಲೆಗಳಲ್ಲಿ ನಂಬಿಕೆ ಇಲ್ಲ. ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿದ್ದೇನೆ. ಹಾಗೆಯೇ ವೈಟ್ ಬಾಲ್ ಕ್ರಿಕೆಟ್‌ನಲ್ಲಿಯೂ ನನ್ನ ದಾಖಲೆ ಉತ್ತಮವಾಗಿದೆ. ಅಲ್ಲದೆ ನನಗೀಗ ಕೇವಲ 24 ವರ್ಷ. ಯಾವುದಾದರೂ ಹೋಲಿಕೆ ಮಾಡಬೇಕಾದರೆ ನಾನು 31-32 ವರ್ಷದವನಿದ್ದಾಗ ಮಾಡಿ ಎಂದಿದ್ದಾರೆ.

ಇದನ್ನೂ ಓದಿ: ಪಂತ್‌ಗೆ ಪದೇ ಪದೇ ಅವಕಾಶ ನೀಡುತ್ತಿರುವುದ್ಯಾಕೆ..? ಈ ಐದು ಕಾರಣಗಳೇ ಸ್ಯಾಮ್ಸನ್​ಗೆ ಮುಳುವಾಗಿವೆ..!

ಏಕದಿನ ಮತ್ತು ಟಿ20 ರೆಕಾರ್ಡ್​ ಹೀಗಿದೆ

ರಿಷಭ್ ಪಂತ್ ಅವರ ಏಕದಿನ ಕ್ರಿಕೆಟ್ ಪ್ರದರ್ಶನ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕುಸಿತ ಕಂಡಿದೆ. ಏಕದಿನ ಕ್ರಿಕೆಟ್‌ನಲ್ಲಿ, 2021 ರಲ್ಲಿ ಅವರ ಸರಾಸರಿ 77.50 ಆಗಿದ್ದರೆ, ಅದು 2022 ರಲ್ಲಿ 40.75 ಕ್ಕೆ ಇಳಿದಿದೆ. ಈ ವರ್ಷ ಒಂದು ಏಕದಿನ ಶತಕ ಸಿಡಿಸುವುದರೊಂದಿಗೆ ಪಂತ್ ತಮ್ಮ 30 ಪಂದ್ಯಗಳ ಏಕದಿನ ವೃತ್ತಿಜೀವನದ ಮೊದಲ ಶತಕ ದಾಖಲಿಸಿದರು. ಅಷ್ಟೇ ಅಲ್ಲ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ತಂಡಗಳ ವಿರುದ್ಧ ಅವರ ಬ್ಯಾಟಿಂಗ್ ಸರಾಸರಿ 30 ಕೂಡ ದಾಟಿಲ್ಲ.

ರಿಷಬ್ ಪಂತ್ ಅವರ ಇದೇ ರೀತಿಯ ಪ್ರದರ್ಶನ ಈ ವರ್ಷ ಟಿ20 ನಲ್ಲಿಯೂ ಮುಂದುವರೆದಿದೆ. ಟಿ20 ಮಾದರಿಯಲ್ಲಿ 25 ಪಂದ್ಯಗಳನ್ನು ಆಡಿರುವ ಪಂತ್ ಕೇವಲ 364 ರನ್ ಗಳಿಸಿದ್ದಾರೆ. 24ನೇ ವಯಸ್ಸಿನಲ್ಲಿಯೇ ಈ ರೀತಿಯ ಕಳಪೆ ಪ್ರದರ್ಶನ ನೀಡಿರುವ ಪಂತ್ 32ವರ್ಷ ವಯಸ್ಸಾಗುವಷ್ಟರಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅಲ್ಲದೆ ಪಂತ್ ಬ್ಯಾಟ್‌ನಿಂದ ಉತ್ತಮ ಪ್ರದರ್ಶನ ಹೊರಬೀಳದಿದ್ದರೆ ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆಯಾಗುವುದಂತೂ ಖಚಿತವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:09 am, Wed, 30 November 22