
T20 World Cup 2024: ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಣ ಹೈವೋಲ್ಟೇಜ್ ಪಂದ್ಯದಲ್ಲಿ ಬಾಜಿ ಕಟ್ಟಿದ್ದ ಕೆನಡಾದ ಖ್ಯಾತ ರಾಪರ್ ಆಬ್ರೆ ಡ್ರೇಕ್ ಗ್ರಹಾಂ ಬರೋಬ್ಬರಿ 7.6 ಕೋಟಿ ರೂ. ಜೇಬಿಗಿಳಿಸಿಕೊಂಡಿದ್ದಾರೆ. ಇಂಡೊ-ಪಾಕ್ ನಡುವಣ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲಿದೆ ಎಂದು ಡ್ರೇಕ್ 650,000 ಯುಎಸ್ ಡಾಲರ್ ಬೆಟ್ ಕಟ್ಟಿದ್ದರು. ಅಂದರೆ ಭಾರತೀಯ ರೂ. ಮೌಲ್ಯ ಸುಮಾರು 5.42 ಕೋಟಿ ರೂಪಾಯಿ.
ಇತ್ತ ಪಾಕ್ ತಂಡವನ್ನು ಭಾರತ ಬಗ್ಗು ಬಡಿಯುತ್ತಿದ್ದಂತೆ ಅತ್ತ ಡ್ರೇಕ್ ಬಾಜಿಯಲ್ಲಿ ಗೆದ್ದಿದ್ದಾರೆ. ಅದರಂತೆ ಒಟ್ಟು ಮೊತ್ತವಾಗಿ 910,000 ಯುಎಸ್ ಡಾಲರ್ ಗೆದ್ದಿದ್ದಾರೆ. ಅಂದರೆ ಡ್ರೇಕ್ ಭಾರತೀಯ ರೂಪಾಯಿ ಮೌಲ್ಯ ಬರೋಬ್ಬರಿ 7.6 ಕೋಟಿ ರೂ. ಪಡೆದಿದ್ದಾರೆ.
ಅಂದಹಾಗೆ ಕೆನಡಾ ಗಾಯಕ ಹೀಗೆ ಬೆಟ್ ಕಟ್ಟುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದಿನಿಂದಲೂ ಬಾಜಿಯಲ್ಲಿ ತೊಡಗಿಸಿಕೊಂಡಿರುವ ಡ್ರೇಕ್ ಗ್ರಹಾಂ ಐಪಿಎಲ್ನಿಂದ 2.5 ಕೋಟಿ ರೂ. ಸಂಪಾದಿಸಿದ್ದರು.
ಐಪಿಎಲ್ 2024 ರ ಫೈನಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಗೆಲ್ಲಲಿದೆ ಎಂದು ಡ್ರೇಕ್ 2.5 ಕೋಟಿ ರೂ. ಬೆಟ್ ಕಟ್ಟಿದ್ದರು. ಅದರಂತೆ ಫೈನಲ್ ಪಂದ್ಯದಲ್ಲಿ ಕೆಕೆಆರ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಸುಮಾರು 4.5 ಕೋಟಿ ರೂ. ಬೆಟ್ ಮೊತ್ತ ಪಡೆದಿದ್ದರು.
ಇದೀಗ ಪಾಕಿಸ್ತಾನ್ ಮತ್ತು ಭಾರತ ನಡುವಣ ಪಂದ್ಯದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದು ಆಬ್ರೆ ಡ್ರೇಕ್ ಗ್ರಹಾಂ 7.6 ಕೋಟಿ ರೂ. ಜೇಬಿಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ 19ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 19 ಓವರ್ಗಳಲ್ಲಿ 119 ರನ್ಗಳಿಸಿ ಆಲೌಟ್ ಆಗಿತ್ತು.
120 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು ಟೀಮ್ ಇಂಡಿಯಾದ ಕರಾರುವಾಕ್ ದಾಳಿಗೆ ರನ್ಗಳಿಸಲು ಪರದಾಡಿದರು. ಅಲ್ಲದೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ಗಳಿಸಿ 6 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಕೆನಡಾ ಗಾಯಕ ಆಬ್ರೆ ಡ್ರೇಕ್ ಗ್ರಹಾಂ 7.6 ಕೋಟಿ ರೂ. ಬೆಟ್ಟಿಂಗ್ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: T20 World Cup 2024: ಸೂಪರ್-8 ಹಂತಕ್ಕೇರಲು ಪಾಕಿಸ್ತಾನ್ ತಂಡಕ್ಕೆ ಇನ್ನೂ ಇದೆ ಚಾನ್ಸ್
ಗಮನಿಸಿ: ಟಿವಿ9 ಕನ್ನಡ ಯಾವುದೇ ರೀತಿಯ ಬೆಟ್ಟಿಂಗ್ ಅನ್ನು ಬೆಂಬಲಿಸುತ್ತಿಲ್ಲ.
Published On - 11:59 am, Mon, 10 June 24