AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ಓವರ್​ಗಳ ಪಂದ್ಯದಲ್ಲಿ ಭಾರತ vs ಪಾಕಿಸ್ತಾನ್ ಮುಖಾಮುಖಿ

ಹಾಂಕಾಂಗ್ ಸಿಕ್ಸಸ್ ಎಂಬುದು ಕೇವಲ 6 ಓವರ್‌ಗಳ ಚುಟುಕು ಕ್ರಿಕೆಟ್ ಟೂರ್ನಿಯಾಗಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯುತ್ತಿವೆ. ಇಲ್ಲಿ ಪ್ರತಿ ತಂಡದಲ್ಲಿ ಒಟ್ಟು 7 ಆಟಗಾರರಿದ್ದು, ಕೇವಲ 6 ಮಂದಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಈ ಆರು ಆಟಗಾರರಲ್ಲಿ ವಿಕೆಟ್ ಕೀಪರ್ ಹೊರತುಪಡಿಸಿ ಉಳಿದ ಐದೂ ಆಟಗಾರರು ತಲಾ ಒಂದು ಓವರ್ ಬೌಲಿಂಗ್ ಮಾಡುವುದು ಕಡ್ಡಾಯವಾಗಿದೆ.

6 ಓವರ್​ಗಳ ಪಂದ್ಯದಲ್ಲಿ ಭಾರತ vs ಪಾಕಿಸ್ತಾನ್ ಮುಖಾಮುಖಿ
Ind Vs Pak Image Credit source: FC
ಝಾಹಿರ್ ಯೂಸುಫ್
|

Updated on: Oct 29, 2026 | 2:23 PM

Share

ಕ್ರಿಕೆಟ್ ಜಗತ್ತಿನ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮತ್ತೆ ಮುಖಾಮುಖಿಯಾಗಲು ಸಜ್ಜಾಗಿವೆ. ಆದರೆ, ಈ ಬಾರಿ ಇವೆರಡೂ ತಂಡಗಳು ಸೆಣಸಾಡುತ್ತಿರುವುದು ಕೇವಲ 6 ಓವರ್‌ಗಳ ಚುಟುಕು ಪಂದ್ಯದಲ್ಲಿ ಎಂಬುದು ವಿಶೇಷ. ಹಾಂಕಾಂಗ್‌ನಲ್ಲಿ ನಡೆಯಲಿರುವ ‘ಹಾಂಕಾಂಗ್ ಸಿಕ್ಸಸ್’ (Hong Kong Sixes 2026) ಟೂರ್ನಿಯ ಮೊದಲ ದಿನವೇ ಈ ಸಾಂಪ್ರದಾಯಿಕ ಎದುರಾಳಿಗಳು ಕಣಕ್ಕಿಳಿಯುತ್ತಿದ್ದಾರೆ. ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಹೈ-ವೋಲ್ಟೇಜ್ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ…

ಪಂದ್ಯ ನಡೆಯುವುದು ಎಲ್ಲಿ?

ಹಾಂಗ್​ ಕಾಂಗ್​ನ ಮೌಂಗ್ ಕಾಕ್‌ನ ಮಿಷನ್ ರೋಡ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ಜರುಗಲಿದೆ.

ಎಷ್ಟು ಗಂಟೆಗೆ ಮ್ಯಾಚ್ ಶುರು?

ಭಾರತ ಮತ್ತು ಪಾಕಿಸ್ತಾನ ನಡುವಣ ಈ ಹೈ-ವೋಲ್ಟೇಜ್ ಪಂದ್ಯವು ಶುಕ್ರವಾರ (ಅಕ್ಟೋಬರ್ 30) ಭಾರತೀಯ ಕಾಲಮಾನ (IST) ಬೆಳಗ್ಗೆ 11:45 ಕ್ಕೆ ಆರಂಭವಾಗಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಟಿವಿ ವಾಹಿನಿಗಳಲ್ಲಿ ಈ ಪಂದ್ಯದ ನೇರ ಪ್ರಸಾರ ಇರಲಿದೆ. ಹಾಗೆಯೇ ಫ್ಯಾನ್‌ಕೋಡ್ ಆ್ಯಪ್‌ನಲ್ಲಿ ಡಿಜಿಟಲ್ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದಾಗಿದೆ.

ಭಾರತ ತಂಡ: ಕೃನಾಲ್ ಪಾಂಡ್ಯ (ನಾಯಕ), ನಿತೀಶ್ ರಾಣಾ, ಶಶಾಂಕ್ ಸಿಂಗ್, ರಾಹುಲ್ ತೇವಾಟಿಯಾ, ರಾಹುಲ್ ತ್ರಿಪಾಠಿ, ಟಿ. ನಟರಾಜನ್, ಕುಲವಂತ್ ಖೇಜ್ರೋಲಿಯಾ.

ಪಾಕಿಸ್ತಾನ್ ತಂಡ: ಅಬ್ಬಾಸ್ ಅಫ್ರಿದಿ (ನಾಯಕ), ಅಹ್ಮದ್ ದಾನಿಯಾಲ್, ಇರ್ಫಾನ್ ಖಾನ್ ನಿಯಾಜಿ, ಸಾದ್ ಮಸೂದ್, ಖ್ವಾಜಾ ನಫೆ, ಅಬ್ದುಲ್ ಸಮದ್, ಮೊಹಮ್ಮದ್ ಶೆಹಝಾದ್.

ಟೂರ್ನಿಯಲ್ಲಿ ಭಾಗವಹಿಸುವ 12 ತಂಡಗಳು:

  • ಗ್ರೂಪ್ A: ಆಸ್ಟ್ರೇಲಿಯಾ, ಇಂಗ್ಲೆಂಡ್, ಹಾಂಗ್ ಕಾಂಗ್
  •  ಗ್ರೂಪ್ B: ಶ್ರೀಲಂಕಾ, ಬಾಂಗ್ಲಾದೇಶ್, ಸ್ಕಾಟ್‌ಲ್ಯಾಂಡ್
  • ಗ್ರೂಪ್ C: ಭಾರತ, ಪಾಕಿಸ್ತಾನ್, ಯುಎಇ
  •  ಗ್ರೂಪ್ D: ಸೌತ್ ಆಫ್ರಿಕಾ, ಅಫ್ಘಾನಿಸ್ತಾನ್, ಒಮಾನ್

ಕಳೆದ ಬಾರಿಯ ಚಾಂಪಿಯನ್ ಯಾರು?

2025ರ ನವೆಂಬರ್‌ನಲ್ಲಿ ನಡೆದ ಹಾಂಗ್ ಕಾಂಗ್​ ಸಿಕ್ಸಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಕುವೈತ್ ತಂಡವನ್ನು 43 ರನ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದು ಹಾಂಕಾಂಗ್ ಸಿಕ್ಸಸ್ ಇತಿಹಾಸದಲ್ಲಿ ಪಾಕಿಸ್ತಾನ ಗೆದ್ದ ದಾಖಲೆಯ 6ನೇ ಪ್ರಶಸ್ತಿಯಾಗಿದೆ. ಹೀಗಾಗಿ ನಾಳೆ ಕಣಕ್ಕಿಳಿಯುತ್ತಿರುವ ಪಾಕಿಸ್ತಾನ್ ತಂಡವು ಹಾಲಿ ಚಾಂಪಿಯನ್ ಆಗಿ ಟೂರ್ನಿಯನ್ನು ಆರಂಭಿಸುತ್ತಿದೆ.

ಟೀಮ್ ಇಂಡಿಯಾ ಎಷ್ಟು ಬಾರಿ ಗೆದ್ದಿದೆ?

2005ರಲ್ಲಿ ನಡೆದ ಹಾಂಕಾಂಗ್ ಸಿಕ್ಸಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಭಾರತ ತಂಡವು ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ, ಇದಾದ ಬಳಿಕ ಟೀಮ್ ಇಂಡಿಯಾಗೆ ಒಮ್ಮೆಯೂ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಕಳೆದ ಎರಡು ದಶಕಗಳಿಂದ ಪ್ರಶಸ್ತಿ ವಂಚಿತವಾಗಿರುವ ಭಾರತಕ್ಕೆ ಈ ಬಾರಿ ಇತಿಹಾಸ ಬದಲಿಸುವ ಸುವರ್ಣ ಅವಕಾಶವಿದೆ. ಈ ಬಾರಿ ಕೃನಾಲ್ ಪಾಂಡ್ಯ ನೇತೃತ್ವದಲ್ಲಿ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ, ಹಾಂಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯುವ ಭರಪೂರ ವಿಶ್ವಾಸದಲ್ಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧವೇ ಮೊದಲ ಪಂದ್ಯ ಇರುವುದರಿಂದ, ಭರ್ಜರಿ ಜಯದೊಂದಿಗೆ ಭಾರತ ತನ್ನ ಅಭಿಯಾನ ಆರಂಭಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More