IND vs SA: ಮಿಂಚಿದ ಕುಲ್ದೀಪ್, ಪ್ರಸಿದ್ಧ್; ಭಾರತಕ್ಕೆ 271 ರನ್‌ಗಳ ಟಾರ್ಗೆಟ್ ನೀಡಿದ ಆಫ್ರಿಕಾ
India vs South Africa 3rd ODI: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಕ್ವಿಂಟನ್ ಡಿ ಕಾಕ್ ಭರ್ಜರಿ ಶತಕ ಸಿಡಿಸಿದರೂ, ಕುಲ್ದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 4 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾವನ್ನು 270 ರನ್‌ಗಳಿಗೆ ನಿಯಂತ್ರಿಸಿದರು. ಭಾರತಕ್ಕೆ ಗೆಲ್ಲಲು 271 ರನ್‌ಗಳ ಗುರಿ ನೀಡಲಾಗಿದೆ. ಇದು ರೋಚಕ ಪಂದ್ಯಕ್ಕೆ ವೇದಿಕೆ ಸಿದ್ಧಪಡಿಸಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳಿಂದ ರನ್ ಮಳೆಯೇ ಹರಿದಿತ್ತು. ಹೀಗಾಗಿ ಮೂರನೇ ಪಂದ್ಯದಲ್ಲೂ ಅದನ್ನೇ ನಿರೀಕ್ಷಿಸಲಾಗಿತ್ತು. ಆದರೆ ಮೂರನೇ ಪಂದ್ಯದಲ್ಲಿ ಲಯ ಕಂಡುಕೊಂಡ ಟೀಂ ಇಂಡಿಯಾ ವೇಗಿಗಳು ಆಫ್ರಿಕಾ ತಂಡವನ್ನು 300 ರನ್‌ಗಳ ಒಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಕ್ವಿಂಟನ್ ಡಿ ಕಾಕ್ (Quinton de Kock) ಅವರ ಶತಕದ ನೆರವಿನಿಂದ 270 ರನ್ ಕಲೆಹಾಕಿದೆ. ಈ ಮೂಲಕ ಟೀಂ ಇಂಡಿಯಾ ಗೆಲುವಿಗೆ 271 ರನ್‌ಗಳ ಟಾರ್ಗೆಟ್ ನೀಡಿದೆ. ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ (Kuldeep Yadav) ಹಾಗೂ ಪ್ರಸಿದ್ಧ್ ಕೃಷ್ಣ (Prasidh Krishna) ತಲಾ 4 ವಿಕೆಟ್ ಕಬಳಿಸಿದರು.
ಆಫ್ರಿಕಾಗೆ ಡಿ ಕಾಕ್ ಶತಕದ ಬಲ
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ 106 ರನ್ ಗಳಿಸಿದರೆ, ನಾಯಕ ಟೆಂಬಾ ಬವುಮಾ 48 ರನ್ ಗಳಿಸಿದರು. ಡಿ ಕಾಕ್ ಮತ್ತು ಬವುಮಾ ಎರಡನೇ ವಿಕೆಟ್‌ಗೆ 114 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ವೇಳೆ ದಾಳಿಗಿಳಿದ ಜಡೇಜಾ, ಡಿ ಕಾಕ್ ಮತ್ತು ಬವುಮಾ ನಡುವಿನ ಪಾಲುದಾರಿಕೆಯನ್ನು ಮುರಿದರು. ನಂತರ ಪ್ರಸಿದ್ಧ್ ಕೃಷ್ಣ ಒಂದೇ ಓವರ್‌ನಲ್ಲಿ 2 ವಿಕೆಟ್ ಕಬಳಿಸಿ ಆಫ್ರಿಕಾಗೆ ಆಘಾತ ನೀಡಿದರು. ಇತ್ತ ಕುಲ್ದೀಪ್ ಯಾದವ್ ಕೂಡ ಅದ್ಭುತ ಬೌಲಿಂಗ್ ಮಾಡಿದರು. ಇನ್ನು ಆಫ್ರಿಕಾ ಪರ ಡಿ ಕಾಕ್ ಮತ್ತು ಬವುಮಾ ಜೊತೆಗೆ, ಡೆವಾಲ್ಡ್ ಬ್ರೆವಿಸ್ 29, ಮ್ಯಾಥ್ಯೂ ಬ್ರಿಟ್ಜ್ಕೆ 24, ಮಾರ್ಕೊ ಯಾನ್ಸೆನ್ 17 ಮತ್ತು ಕಾರ್ಬಿನ್ ಬಾಷ್ 9 ರನ್ ಗಳಿಸಿದರೆ, ಕೇಶವ್ ಮಹಾರಾಜ್ 20 ರನ್ ಗಳಿಸಿ ಅಜೇಯರಾಗಿ ಉಳಿದರು.
4 ವಿಕೆಟ್ ಪಡೆದ ಪ್ರಸಿದ್ಧ್
ಹಿಂದಿನ ಎರಡೂ ಪಂದ್ಯಗಳಲ್ಲಿ ಪ್ರಸಿದ್ಧ್ ಕಳಪೆ ಪ್ರದರ್ಶನ ನೀಡಿದ್ದರಿಂದ ಅವರನ್ನು ತಂಡದಿಂದ ಹೊರಹಾಕಬೇಕೆಂಬ ಒತ್ತಾಯ ಹೆಚ್ಚಾಗಿತ್ತು. ಆದಾಗ್ಯೂ ಅವರಿಗೆ ಆಡುವ ಅವಕಾಶ ನೀಡಲಾಯಿತು. ಆದರೆ ಈ ಬಾರಿಯೂ ಅವರು ತಮ್ಮ ಮೊದಲ ಮೂರು ಓವರ್‌ಗಳಲ್ಲಿ 29 ರನ್‌ಗಳನ್ನು ಬಿಟ್ಟುಕೊಟ್ಟು ತುಂಬಾ ದುಬಾರಿಯಾಗಿದ್ದರು. ಆದರೆ ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ದಾಳಿಗಿಳಿದ ಪ್ರಸಿದ್ಧ್ ಆರು ಎಸೆತಗಳಲ್ಲಿ ಪಂದ್ಯದ ದಿಕ್ಕನೇ ಬದಲಿಸಿದರು. ಇನ್ನಿಂಗ್ಸ್‌ನ 29 ನೇ ಓವರ್‌ನಲ್ಲಿ, ಪ್ರಸಿದ್ಧ್ ಮೊದಲು ಮ್ಯಾಥ್ಯೂ ಬ್ರೆಟ್ಜ್ಕಿಯನ್ನು ನಂತರ ಕೊನೆಯ ಎಸೆತದಲ್ಲಿ ಹಿಂದಿನ ಪಂದ್ಯದಲ್ಲಿ ಶತಕ ಗಳಿಸಿದ್ದ ಐಡೆನ್ ಮಾರ್ಕ್ರಾಮ್ ಅವರನ್ನು ಔಟ್ ಮಾಡಿದರು. ನಂತರ ಪ್ರಸಿದ್ಧ್ 33 ನೇ ಓವರ್‌ನಲ್ಲಿ ಡಿ ಕಾಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತಿಮವಾಗಿ ಒಟ್ನೀಲ್ ಬಾರ್ಟ್‌ಮನ್ ಅವರನ್ನು ಔಟ್ ಮಾಡುವ ಮೂಲಕ ಆಫ್ರಿಕಾ ಇನ್ನಿಂಗ್ಸ್ಗೆ ಅಂತ್ಯಹಾಡಿದರು.
IND vs SA: ಒಂದೇ ಓವರ್‌ನಲ್ಲಿ 2 ಪ್ರಮುಖ ವಿಕೆಟ್ ಕಿತ್ತ ಪ್ರಸಿದ್ಧ್ ಕೃಷ್ಣ; ವಿಡಿಯೋ ನೋಡಿ
ಮತ್ತೆ ಮಿಂಚಿದ ಕುಲ್ದೀಪ್ ಯಾದವ್
ಪ್ರಸಿದ್ಧ್ ಜೊತೆಗೆ ಕುಲ್ದೀಪ್ ಯಾದವ್ ಕೂಡ 4 ವಿಕೆಟ್ಗಳ ಗೊಂಚಲು ಪಡೆದರು. ಕುಲ್ದೀಪ್, ಡೆವಾಲ್ಡ್ ಬ್ರೆವಿಸ್ ಮತ್ತು ಮಾರ್ಕೊ ಯಾನ್ಸೆನ್ ಅವರನ್ನು ಮೂರು ಎಸೆತಗಳ ಅಂತರದಲ್ಲಿ ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ಗೆ ಸಂಪೂರ್ಣ ಬ್ರೇಕ್ ಹಾಕಿದರು. ನಂತರ, ಪ್ರಸಿದ್ಧ್ ಅವರಂತೆಯೇ, ಕುಲ್ದೀಪ್ ಕೂಡ 43 ನೇ ಓವರ್‌ನಲ್ಲಿ ಕಾರ್ಬಿನ್ ಬಾಷ್ ಅವರನ್ನು ಔಟ್ ಮಾಡುವ ಮೂಲಕ ಬೃಹತ್ ಮೊತ್ತ ಗಳಿಸಬೇಕೆಂಬ ಆಫ್ರಿಕಾದ ಭರವಸೆಯನ್ನು ಕೊನೆಗೊಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Sat, 6 December 25
