ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಇಂದು ಮಹತ್ವದ ಪಂದ್ಯ ನಡೆಯಲಿದೆ. ಕೋಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ತೆಂಬ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ (India vs South Africa) ಪಂದ್ಯಗಳ ನಡುವಣ ಕಾಳಗಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯ ಟೀಮ್ ಇಂಡಿಯಾಕ್ಕೆ ತುಂಬಾ ವಿಶೇಷ. ನವೆಂಬರ್ 5 ರಂದು ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹುಟ್ಟುಹಬ್ಬ. 35ನೇ ವಸಂತಕ್ಕೆ ಕಾಲಿಡಲಿರುವ ಕೊಹ್ಲಿಯ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಈಗಾಗಲೇ ಸಿಎಬಿ ಭರ್ಜರಿ ತಯಾರಿ ನಡೆಸುತ್ತಿದೆ. ಇದರ ನಡುವೆ ನಾಯಕ ರೋಹಿತ್ ಶರ್ಮಾ ಕೂಡ ಕೊಹ್ಲಿಗೆ ಗೆಲುವಿನ ಉಡುಗೊರೆ ನೀಡುವ ಪ್ಲಾನ್ನಲ್ಲಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಆಡಿರುವ ಎಲ್ಲ ಏಳು ಪಂದ್ಯಗಳಲ್ಲಿ ಗೆದ್ದು ಸೆಮಿ ಫೈನಲ್ಗೆ ಕ್ವಾಲಿಫೈಯರ್ ಆಗಿದೆ. ಇತ್ತ ದ. ಆಫ್ರಿಕಾ ಆಡಿರುವ ಏಳು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಹರಿಣಗಳ ಪಡೆ ಭಾರತಕ್ಕೆ ಸುಲಭ ಸವಾಲಂತು ಅಲ್ಲವೇ ಅಲ್ಲ. ಟೀಮ್ ಇಂಡಿಯಾಕ್ಕೆ ಜಯಕೂಡ ಮುಖ್ಯ ಆಗಿರುವ ಕಾರಣ ಹೊಸ ಆಟಗಾರನನ್ನು ಕರೆತರುವ ಪ್ರಯತ್ನ ರೋಹಿತ್ ಮಾಡಬಹುದು.
ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ಭಾರತೀಯ ಪಿಚ್ನಲ್ಲಿ ಸ್ಪಿನ್ನರ್‌ಗಳ ವಿರುದ್ಧ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಹೆನ್ರಿಚ್ ಕ್ಲಾಸೆನ್ ಈ ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳ ವಿರುದ್ಧ ಆರು ಇನ್ನಿಂಗ್ಸ್‌ಗಳಲ್ಲಿ 87 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 140.32 ಆಗಿದೆ. ಹೀಗಾಗಿ ಕುಲ್ದೀಪ್ ಯಾದವ್ರನ್ನು ಕೈಬಿಡುವ ಸಂಭವವಿದೆ. ಆಫ್ರಿಕಾ ಬ್ಯಾಟರ್ಗಳು ಸ್ಪಿನ್ನರ್ ವಿರುದ್ಧ ಚೆನ್ನಾಗಿ ಆಡುವ ಕಾರಣ ಕುಲ್ದೀಪ್ ಜಾಗಕ್ಕೆ ಪ್ರಸಿದ್ಧ್ ಕೃಷ್ಣ ಅಥವಾ ಶಾರ್ದೂಲ್ ಥಾಕೂರ್ ಎಕ್ಸ್ ಫ್ಯಾಕ್ಟರ್ ಇರುವ ಆಟಗಾರನನ್ನು ಕರೆತಂದು ಕಣಕ್ಕಿಳಿಸಲು ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಚಿಂತನೆ ನಡೆಸಬಹುದು.
ನಿನ್ನೆಯ ಪಾಕ್ ವಿರುದ್ಧದ ಪಂದ್ಯದಲ್ಲಿ ನ್ಯೂಝಿಲೆಂಡ್ ಸೋತ ಪರಿಣಾಮ ಆಫ್ರಿಕಾ ಸೆಮಿ ಫೈನಲ್ಗೆ ಪ್ರವೇಶ ಪಡೆದ ಎರಡನೇ ತಂಡವಾಗಿದೆ. ತಂಡದ ಪರ ಎಲ್ಲ ಬ್ಯಾಟರ್ಗಳು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕ್ವಿಂಟನ್ ಡಿಕಾಕ್ ಕಳೆದ ಪಂದ್ಯದಲ್ಲಿ 114 ರನ್ ಸಿಡಿಸಿದ್ದರು. ರಾಸ್ಸಿ ವ್ಯಾನ್ ಡೆರ್ ಡುಸೆನ್ 133 ರನ್ ಚಚ್ಚಿದ್ದರು. ಆಫ್ರಿಕಾ ಬೌಲರ್ಗಳು ಕೂಡ ಸಂಘಟಿತ ಪ್ರದರ್ಶನ ನೀಡುತ್ತಿದ್ದಾರೆ. ಕೇಶವ್ ಮಹರಾಜ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಮಿಂಚುತ್ತಿದ್ದಾರೆ.
ವಿಶೇಷವಾಗಿ ಭಾರತ-ಆಫ್ರಿಕಾ ಪಂದ್ಯದ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿಯ ಬರ್ತ್ಡೇ ಕೇಕ್ ಕಟ್ಟಿಂಗ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಾಗೆಯೇ ವಿರಾಟ್ ಕೊಹ್ಲಿಗೆ ನೆನಪಿನ ಕಾಣಿಕೆಯನ್ನು ನೀಡಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಯೋಜಿಸುತ್ತಿದೆ. ಇದಲ್ಲದೆ, ಇನಿಂಗ್ಸ್ ಮಧ್ಯಂತರದಲ್ಲಿ ಪಟಾಕಿ ಪ್ರದರ್ಶನ ಇರಲಿದೆ ಎಂದು ಹೇಳಲಾಗಿದೆ. ಸ್ಟೇಡಿಯಂಗೆ ಬರುವ ಪ್ರತಿಯೊಬ್ಬರಿಗೂ ವಿರಾಟ್ ಕೊಹ್ಲಿಯ ಮಾಸ್ಕ್ ನೀಡಲು ಪ್ಲ್ಯಾನ್ ರೂಪಿಸಿದೆ ಎಂದು ಕೂಡ ಹೇಳಲಾಗಿದೆ.
ಈಡನ್ ಗಾರ್ಡನ್ಸ್ ದೊಡ್ಡ ಸ್ಕೋರ್ ಮಾಡುವ ಸ್ಥಳವೆಂದು ಪರಿಗಣಿಸದಿದ್ದರೂ, ಇಲ್ಲಿನ ಮೇಲ್ಮೈ ಬ್ಯಾಟಿಂಗ್‌ಗೆ ಸಹಕಾತಿ ಆಗಿದೆ. ಮೈದಾನವು ಬ್ಯಾಟ್ ಮತ್ತು ಬಾಲ್ ಎರಡಕ್ಕೂ ನೆರವಾಗುತ್ತದೆ ಎನ್ನಬಹುದು. ಏಕೆಂದರೆ ಸ್ಪಿನ್ನರ್‌ಗಳು ಈ ಪಿಚ್ನಲ್ಲಿ ಯಶಸ್ಸು ಸಾಧಿಸುತ್ತಾರೆ. ವೇಗಿಗಳು ಹೊಸ ಚೆಂಡಿನ ಮೂಲಕ ಪ್ರಭಾವ ಬೀರಬಹುದು. ಇಬ್ಬನಿಯು ಟಾರ್ಗೆಟ್ ಬೆನ್ನಟ್ಟುವ ತಂಡಕ್ಕೆ ಸಹಾಯ ಮಾಡಲಿದೆ. ಇಲ್ಲಿ ಒಟ್ಟು 37 ಏಕದಿನ ಪಂದ್ಯಗಳು ನಡೆದಿದೆ. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 21 ಬಾರಿ ಗೆದ್ದರೆ, ಮೊದಲು ಬೌಲಿಂಗ್‌ನಲ್ಲಿ ಗೆದ್ದ ಪಂದ್ಯಗಳು 15. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 241 ಆಗಿದೆ.
ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), , ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್. , ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್ ಹೆಂಡ್ರಿಕ್ಸ್, ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:55 am, Sun, 5 November 23