- Kannada News Photo gallery Cricket photos Fakhar Zaman smashes fastest World Cup hundred for Pakistan
ಸಿಕ್ಸ್ಗಳ ಸುರಿಮಳೆ: ಸ್ಪೋಟಕ ಸೆಂಚುರಿ ಸಿಡಿಸಿ ದಾಖಲೆ ಬರೆದ ಫಖರ್ ಝಮಾನ್
Fakhar Zaman Records: ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಫಖರ್ ಝಮಾನ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಮೂಲಕ ಕೇವಲ 63 ಎಸೆತಗಳಲ್ಲಿ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು.
Updated on: Nov 04, 2023 | 7:28 PM

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಪಾಕ್ ತಂಡದ ಆರಂಭಿಕ ಆಟಗಾರ ಫಖರ್ ಝಮಾನ್.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 401 ರನ್ ಕಲೆಹಾಕಿತು. 402 ರನ್ಗಳ ಬೃಹತ್ ಗುರಿ ಪಡೆದ ಪಾಕಿಸ್ತಾನ್ ತಂಡಕ್ಕೆ ಫಖರ್ ಝಮಾನ್ ಸ್ಪೋಟಕ ಆರಂಭ ಒದಗಿಸಿದ್ದರು.

ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಫಖರ್ ಝಮಾನ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಮೂಲಕ ಕೇವಲ 63 ಎಸೆತಗಳಲ್ಲಿ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು.

ಈ ಸ್ಪೋಟಕ ಸೆಂಚುರಿಯೊಂದಿಗೆ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ಪರ ಅತೀ ವೇಗದ ಶತಕ ಸಿಡಿಸಿದ ದಾಖಲೆ ಫಖರ್ ಝಮಾನ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಸಲೀಮ್ ಮಲಿಕ್ ಹೆಸರಿನಲ್ಲಿತ್ತು. 1987ರ ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧ 94 ಎಸೆತಗಳಲ್ಲಿ ಸಲೀಮ್ ಮಲಿಕ್ ಶತಕ ಸಿಡಿಸಿ ದಾಖಲೆ ಬರೆದಿದ್ದರು.

ಇದೀಗ ಕೇವಲ 63 ಎಸೆತಗಳಲ್ಲಿ ಸ್ಪೋಟಕ ಸೆಂಚುರಿ ಸಿಡಿಸುವ ಮೂಲಕ ಫಖರ್ ಝಮಾನ್ ಹೊಸ ದಾಖಲೆ ಬರೆದಿದ್ದಾರೆ. ಇದಲ್ಲದೆ ಏಕದಿನ ವಿಶ್ವಕಪ್ನಲ್ಲಿ ಪಾಕ್ ಪರ ಇನಿಂಗ್ಸ್ವೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಇಮ್ರಾನ್ ನಝೀರ್ ಹೆಸರಿನಲ್ಲಿತ್ತು. 2007ರ ವಿಶ್ವಕಪ್ನಲ್ಲಿ ಝಿಂಬಾಬ್ವೆ ವಿರುದ್ಧ ಇಮ್ರಾನ್ ನಝೀರ್ 8 ಸಿಕ್ಸ್ ಬಾರಿಸಿದ್ದರು. ಇದೀಗ ಫಖರ್ ಝಮಾನ್ 11 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ 81 ಎಸೆತಗಳಲ್ಲಿ ಫಖರ್ ಝಮಾನ್ 11 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 126 ರನ್ ಬಾರಿಸಿದ್ದರು. ಪರಿಣಾಮ ಪಾಕಿಸ್ತಾನ್ ತಂಡವು 25.3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 200 ರನ್ ಕಲೆಹಾಕಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಅಲ್ಲದೆ ಫಲಿತಾಂಶ ನಿರ್ಣಯಕ್ಕಾಗಿ ಡಕ್ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಗಿದ್ದು, ಅದರಂತೆ ಈ ಪಂದ್ಯವನ್ನು ಪಾಕಿಸ್ತಾನ್ ತಂಡವು 21 ರನ್ಗಳಿಂದ ಗೆದ್ದುಕೊಂಡಿದೆ.
























