ಪಾಕ್ ವಿರುದ್ಧ ಕನ್ನಡಿಗನ ಪರಾಕ್ರಮ: ಹಳೆಯ ವಿಶ್ವ ದಾಖಲೆಗಳು ಧೂಳೀಪಟ
Rachin Ravindra Records: ವಿಶೇಷ ಎಂದರೆ ಈ ಶತಕದೊಂದಿಗೆ ವಿಶ್ವಕಪ್ನ ಹಲವು ದಾಖಲೆಗಳು ರಚಿನ್ ರವೀಂದ್ರ ಹೆಸರಿಗೆ ಸೇರ್ಪಡೆಯಾಯಿತು. ಅದರಲ್ಲೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಕೂಡ ತಮ್ಮದಾಗಿಸಿಕೊಂಡರು. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...
Updated on: Nov 04, 2023 | 10:18 PM

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಮೂಲದ ನ್ಯೂಝಿಲೆಂಡ್ ಆಟಗಾರ ರಚಿನ್ ರವೀಂದ್ರ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರಚಿನ್ 94 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ 108 ರನ್ ಬಾರಿಸಿ ಔಟಾದರು.

ವಿಶೇಷ ಎಂದರೆ ಈ ಶತಕದೊಂದಿಗೆ ವಿಶ್ವಕಪ್ನ ಹಲವು ದಾಖಲೆಗಳು ರಚಿನ್ ರವೀಂದ್ರ ಹೆಸರಿಗೆ ಸೇರ್ಪಡೆಯಾಯಿತು. ಅದರಲ್ಲೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಕೂಡ ತಮ್ಮದಾಗಿಸಿಕೊಂಡರು. ಹಾಗಿದ್ರೆ ರಚಿನ್ ರವೀಂದ್ರ ನಿರ್ಮಿಸಿದ ದಾಖಲೆಗಳಾವುವು ಎಂದು ನೋಡೋಣ...

1- ಪಾಕಿಸ್ತಾನ್ ವಿರುದ್ಧ ಶತಕ ಸಿಡಿಸುವುದರೊಂದಿಗೆ ವಿಶ್ವಕಪ್ನಲ್ಲಿ 25 ವಯಸ್ಸಿಗೂ ಮುನ್ನ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ರಚಿನ್ ರವೀಂದ್ರ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ 25 ವಯಸ್ಸಿಗೂ ಮುನ್ನ ಏಕದಿನ ವಿಶ್ವಕಪ್ನಲ್ಲಿ 2 ಶತಕ ಬಾರಿಸಿದ್ದರು. ಆದರೆ ಈ ಬಾರಿಯ ವರ್ಲ್ಡ್ಕಪ್ನಲ್ಲಿ 23 ವರ್ಷದ ರಚಿನ್ ರವೀಂದ್ರ ಒಟ್ಟು 3 ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

2- ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ನ್ಯೂಝಿಲೆಂಡ್ ಪರ ಅತ್ಯಧಿಕ ಶತಕ ಬಾರಿಸಿದ ದಾಖಲೆ ಕೂಡ ಇದೀಗ ರಚಿನ್ ರವೀಂದ್ರ ಪಾಲಾಗಿದೆ. ಈ ಹಿಂದೆ ಗ್ಲೆನ್ ಟರ್ನರ್ (1975), ಮಾರ್ಟಿನ್ ಗಪ್ಟಿಲ್ (2015), ಕೇನ್ ವಿಲಿಯಮ್ಸನ್ (2019) ತಲಾ 2 ಶತಕ ಬಾರಿಸಿ ದಾಖಲೆ ಬರೆದಿದ್ದರು. ಇದೀಗ 3 ಶತಕದೊಂದಿಗೆ ರಚಿನ್ ರವೀಂದ್ರ ಹೊಸ ಇತಿಹಾಸ ನಿರ್ಮಿಸಿದ್ದಾರೆ.

3- 25 ವಯಸ್ಸಿಗೂ ಮುನ್ನ ಏಕದಿನ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರಚಿನ್ ಸರಿಗಟ್ಟಿದ್ದಾರೆ. 1996 ರ ವಿಶ್ವಕಪ್ನಲ್ಲಿ ಸಚಿನ್ 523 ರನ್ ಬಾರಿಸಿ ದಾಖಲೆ ಬರೆದಿದ್ದರು. ಈ ಬಾರಿಯ ವಿಶ್ವಕಪ್ನಲ್ಲಿ ರಚಿನ್ ರವೀಂದ್ರ ಒಟ್ಟು 523 ರನ್ ಬಾರಿಸಿ ಈ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.

4- ಚೊಚ್ಚಲ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ರಚಿನ್ ರವೀಂದ್ರ 2ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ 2019 ರಲ್ಲಿ 532 ರನ್ ಬಾರಿಸಿದ ಜಾನಿ ಬೈರ್ಸ್ಟೋವ್ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 523 ರನ್ ಬಾರಿಸಿರುವ ರಚಿನ್ ರವೀಂದ್ರಗೆ ಈ ದಾಖಲೆ ಮುರಿಯಲು ಕೇವಲ 10 ರನ್ಗಳ ಅವಶ್ಯಕತೆಯಿದೆ.

5- ಮೊದಲ ವಿಶ್ವಕಪ್ನಲ್ಲೇ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಕೂಡ ರಚಿನ್ ರವೀಂದ್ರ ಪಾಲಾಗಿದೆ. ಈ ಬಾರಿಯ ವಿಶ್ವಕಪ್ನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ್ ವಿರುದ್ಧ ಶತಕ ಸಿಡಿಸುವ ಮೂಲಕ ರಚಿನ್ ರವೀಂದ್ರ ಈ ಸಾಧನೆ ಮಾಡಿದ್ದಾರೆ.

ನ್ಯೂಝಿಲೆಂಡ್ಗೆ ಸೋಲು: ರಚಿನ್ ರವೀಂದ್ರ (108) ಅವರ ಈ ಶತಕದ ನೆರವಿನಿಂದ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು 6 ವಿಕೆಟ್ ನಷ್ಟಕ್ಕೆ 401 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಾಕ್ ಪರ ಫಖರ್ ಝಮಾನ್ (126) ಭರ್ಜರಿ ಸೆಂಚುರಿ ಬಾರಿಸಿದರು. ಅಲ್ಲದೆ 25.3 ಓವರ್ಗಳಲ್ಲಿ 200 ರನ್ ಕಲೆಹಾಕಿತು. ಇದೇ ವೇಳೆ ಬಂದಿದ್ದರಿಂದ ಪಂದ್ಯದವನ್ನು ಸ್ಥಗಿತಗೊಳಿಸಲಾಗಿದ್ದು, ಅದರಂತೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಾಕ್ ತಂಡ 21 ರನ್ಗಳ ಜಯ ಸಾಧಿಸಿದೆ.



















