Akash Chopra: ಏಕದಿನ ಸರಣಿಗೆ ಈತನನ್ನು ಕೈಬಿಡಬಾರದು, ಅದು ಒಳ್ಳೆಯ ನಿರ್ಧಾರವಲ್ಲ ಎಂದ ಆಕಾಶ್ ಚೋಪ್ರಾ

| Updated By: Vinay Bhat

Updated on: Dec 19, 2021 | 7:24 AM

India vs South Africa: ಏಕೆಂದರೆ ಶಿಖರ್ ಧವನ್ ಭಾರತ ಪರ ಅದ್ಭುತವಾಗಿ ಆಡಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅವರನ್ನು ಕೈಬಿಡುವುದು ತಪ್ಪು ನಿರ್ಧಾರ ಎಂದು ನಾನು ಭಾವಿಸುತ್ತೇನೆಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

Akash Chopra: ಏಕದಿನ ಸರಣಿಗೆ ಈತನನ್ನು ಕೈಬಿಡಬಾರದು, ಅದು ಒಳ್ಳೆಯ ನಿರ್ಧಾರವಲ್ಲ ಎಂದ ಆಕಾಶ್ ಚೋಪ್ರಾ
Team India and Aakash Chopra
Follow us on

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ (IND vs SA Test) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 18 ಸದಸ್ಯರ ಬಲಿಷ್ಠ ಭಾರತ (Team India) ತಂಡವನ್ನು ಪ್ರಕಟ ಮಾಡಿದೆ. ಇದರ ನಡುವೆ ಅಚ್ಚರಿಯ ಬೆಳವಣಿಗೆಗಳು ಕೂಡ ನಡೆದಿವೆ. ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು (Virat Kohli) ಕೆಳಗಿಳಿಸಿ ರೋಹಿತ್ ಶರ್ಮಾ (Rohit Sharma) ಅವರಿಗೆ ಜವಾಬ್ದಾರಿ ನೀಡಲಾಯಿತು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿದ್ದು ಗೊತ್ತೇ ಇದೆ. ಸದ್ಯ ಭಾರತ ಟೆಸ್ಟ್ ತಂಡ ಹರಿಣಗಳ ನಾಡಿನಲ್ಲಿ ಬೀಡು ಬಿಟ್ಟಿದ್ದು ಕ್ವಾರಂಟೈನ್​ನಲ್ಲಿದೆ. ಆದರೆ, ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ (India vs South Africa) ಟೀಮ್ ಇಂಡಿಯಾ ಇನ್ನೂ ಪ್ರಕಟವಾಗಿಲ್ಲ. ಕೆಲವೇ ದಿನಗಳಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಈ ಬಗ್ಗೆ ಸಭೆ ನಡೆಸಿ ತಂಡವನ್ನು ಹೆರಿಸಲಿದೆ.

ಹೀಗಿರುವಾರ ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯುವ ಅಂಚಿನಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡವನ್ನ ಮುನ್ನಡೆಸುತ್ತಿರುವ, ಐಪಿಎಲ್‌ ಸೆನ್ಸೇಷನ್ ರುತುರಾಜ್ ಗಾಯಕ್ವಾಡ್ ಅವರು ಧವನ್ ಸ್ಥಾನಕ್ಕೆ ಕಂಟಕವಾಗಿದ್ದಾರೆ. ಹೀಗಿರುವಾಗ ಭಾರತ ತಂಡ ಮಾಜಿ ಆಟಗಾರ ಆಕಾಶ್ ಚೋಪ್ರಾ ಧವನ್​ರನ್ನು ಟೀಮ್ ಇಂಡಿಯಾದಿಂದ ಕೈ ಬಿಟ್ಟರೆ ಅದು ನಿಜಕ್ಕೂ ನ್ಯಾಯವಲ್ಲ ಎಂದು ಹೇಳಿದ್ದಾರೆ.

ಏಕದಿನ ಸರಣಿಯ ಆಯ್ಕೆ ಬಿಸಿಸಿಐಗೆ ನಿಜಕ್ಕೂ ಕಬ್ಬಿಣದ ಕಡಲೆಯಂತಾಗಿದೆ. ರುತುರಾಜ್ ಗಾಯಕ್ವಾಡ್, ಹರ್ಷಲ್ ಪಟೇಲ್ ಸೇರಿದಂತೆ ಅನೇಕ ಯುವ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಕಾದುಕುಳಿತಿದ್ದಾರೆ. ಇದರ ನಡುವೆ ಐದು ತಿಂಗಳ ಬಳಿಕ ಶಿಖರ್ ಧವನ್ ಕೂಡ ತಂಡಕ್ಕೆ ಕಮ್​ಬ್ಯಾಕ್ ಮಾಡುತ್ತಾರ ಎಂಬ ಅನುಮಾನ ಹುಟ್ಟಿದೆ. ಧವನ್ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊನೇಯದಾಗಿ ಕಣಕ್ಕಿಳಿದಿದ್ದರು.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಚೋಪ್ರಾ, “12, 18, 14, 12 ಮತ್ತು 0 ವಿಜಯ್ ಹಜಾರೆ ಟ್ರೋಫಿಯಲ್ಲಿ ಧವನ್‌ರ ಕೊನೆಯ ಐದು ಸ್ಕೋರ್‌ಗಳಾಗಿವೆ. ಆದರೂ ನೀವು ಅವನನ್ನು ಆಯ್ಕೆ ಮಾಡಬೇಕೇ? ಎಂಬ ಪ್ರಶ್ನೆಗೆ ನಾನು ಯೆಸ್ ಎನ್ನುತ್ತೇನೆ. ಏಕೆಂದರೆ ಶಿಖರ್ ಧವನ್ ಭಾರತ ಪರ ಅದ್ಭುತವಾಗಿ ಆಡಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ನಾವು 2023ರ ವಿಶ್ವಕಪ್ ಅನ್ನು ನೋಡಿದರೆ ಮಿಸ್ಟರ್ ಐಸಿಸಿ ಫಿಟ್ ಆಗಿದ್ರೆ ಏಕೆ ಕೈ ಬಿಡಬೇಕು” ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

”2021ರಲ್ಲಿ ಭಾರತ ಹೆಚ್ಚು ಏಕದಿನ ಕ್ರಿಕೆಟ್ ಆಡಿಲ್ಲ, ಹಾಗಾಗಿ ಅವರನ್ನು ಏಕೆ ಹೊರಗಿಡಬೇಕು? ಕೆಲವರು ಟಿ20 ವಿಶ್ವಕಪ್‌ನಲ್ಲೂ ಅವರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು. ರುತುರಾಜ್ ರನ್ ಗಳಿಸುತ್ತಿದ್ದಾರೆ ಅಥವಾ ಅಯ್ಯರ್ ಅವರು ಓಪನಿಂಗ್ ಮಾಡಬಹುದು, ಅಥವಾ ರೋಹಿತ್-ರಾಹುಲ್ ಜೋಡಿ ಸೆಟ್ಟೇರಿದೆ, ಆದ್ರೂ ಕೂಡ ಅವರನ್ನು ಕೈಬಿಡುವುದು ತಪ್ಪು ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಧವನ್ ಕಳಪೆಯಾಗಿ ಆಡಿದರೆ, ನೀವು ಅವನನ್ನು ಬಿಟ್ಟುಬಿಡಿ, ಆದರೆ ಯಾರಾದರೂ ಉತ್ತಮವಾಗಿ ಆಡುತ್ತಿದ್ದರೆ ಮತ್ತು ನಂತರ ನೀವು ಅವನನ್ನು ಬಿಡುತ್ತೀರಿ ಅಂದರೆ ಅದು ಸರಿಯಲ್ಲ” ಎಂಬುದು ಚೋಪ್ರಾ ಅಭಿಪ್ರಾಯ.

IPL 2022: ಕೆಎಲ್ ರಾಹುಲ್ ಅಥವಾ ಶ್ರೇಯಸ್ ಅಯ್ಯರ್: ಯಾರು ಬೆಸ್ಟ್ ಕ್ಯಾಪ್ಟನ್?

(India vs South Africa Akash Chopra backs Shikhar Dhawans selection for SA ODI series)