ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ಇಂದು ನಡೆಯುತ್ತಿದೆ. ಮೊದಲ ಪಂದ್ಯವನ್ನು ಟೀಂ ಇಂಡಿಯಾ 61 ರನ್‌ಗಳಿಂದ ಗೆದ್ದಿತ್ತು. ಆದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ರೋಚಕ ಪಂದ್ಯದಲ್ಲಿ ಭಾರತವನ್ನು 3 ವಿಕೆಟ್‌ಗಳಿಂದ ಸೋಲಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿನ ಮೇಲೆ ಕಣ್ಣಿಟ್ಟಿದ್ದು, ಸದ್ಯ ಸರಣಿ 1-1ರಲ್ಲಿ ಸಮಬಲವಾಗಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ದಕ್ಷಿಣ ಆಫ್ರಿಕಾ ನಾಯಕ ಏಡನ್ ಮಾರ್ಕ್ರಾಮ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಪಂದ್ಯಕ್ಕಾಗಿ ಭಾರತ ತಂಡ ತನ್ನ ಪ್ಲೇಯಿಂಗ್-11 ರಲ್ಲಿ ಒಂದು ಬದಲಾವಣೆ ಮಾಡಿದೆ. ಅದರಂತೆ ಬೌಲರ್ ಅವೇಶ್ ಖಾನ್ ಬದಲಿಗೆ ರಮಣದೀಪ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಪಂದ್ಯದಿಂದ ರಮಣದೀಪ್ ಅಂತಾರಾಷ್ಟ್ರೀಯ ಟಿ20ಗೆ ಪಾದಾರ್ಪಣೆ ಮಾಡಲಿದ್ದಾರೆ.
ಮೇಲೆ ಹೇಳಿದಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಯುವ ಆಲ್ ರೌಂಡರ್ ರಮಣದೀಪ್ ಸಿಂಗ್ ಪಾದಾರ್ಪಣೆ ಮಾಡುವ ಅವಕಾಶ ಪಡೆದಿದ್ದಾರೆ. 27 ವರ್ಷದ ರಮಣದೀಪ್ ಸಿಂಗ್ ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹಾಗೆಯೇ ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದಾರೆ. ಕಳೆದ ಸೀಸನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದ ರಮಣದೀಪ್ಗೆ ಟೀಂ ಇಂಡಿಯಾ ಕದ ತೆರೆದಿದೆ.
Say hello 👋 to the Debutant 😎
A special moment for Ramandeep Singh as he receives his #TeamIndia Cap 🧢 from @hardikpandya7 👏👏
Live – https://t.co/JBwOUCgZx8#SAvIND pic.twitter.com/dZD9uasHzm
— BCCI (@BCCI) November 13, 2024
ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆದ ಬಳಿಕ ಕೆಕೆಆರ್ ತಂಡದ ಹಲವು ಆಟಗಾರರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ವಾಸ್ತವವಾಗಿ ಗೌತಮ್ ಗಂಭೀರ್ ಟೀಂ ಇಂಡಿಯಾದ ಕೋಚ್ ಆಗುವುದಕ್ಕೂ ಮುನ್ನ ಕೆಕೆಆರ್ ತಂಡದ ಮೆಂಟರ್ ಆಗಿದ್ದರು. ಹೀಗಾಗಿ ತೀರ ಹತ್ತಿರದಿಂದ ಈ ಆಟಗಾರರ ಪ್ರದರ್ಶನವನ್ನು ಗಮನಿಸಿದ್ದ ಗಂಭೀರ್, ಪ್ರತಿಭಾನ್ವೀತರನ್ನು ಟೀಂ ಇಂಡಿಯಾಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ.
ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್.
ದಕ್ಷಿಣ ಆಫ್ರಿಕಾ ತಂಡ: ಏಡೆನ್ ಮಾರ್ಕ್ರಾಮ್ (ನಾಯಕ), ರಿಯಾನ್ ರಿಕೆಲ್ಟನ್, ರೀಜಾ ಹೆಂಡ್ರಿಕ್ಸ್, ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸನ್, ಆಂಡಿಲ್ ಸಿಮೆಲೇನ್, ಜೆರಾಲ್ಡ್ ಕೋಟ್ಜಿ, ಕೇಶವ್ ಮಹಾರಾಜ್, ಲುಥೋ ಸಿಪಾಮ್ಲಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 pm, Wed, 13 November 24