India vs Sri Lanka, 2nd T20: ಶ್ರೀಲಂಕಾ ವಿರುದ್ದ ಟೀಮ್​ ಇಂಡಿಯಾಗೆ ವೀರೋಚಿತ ಸೋಲು

| Updated By: ಝಾಹಿರ್ ಯೂಸುಫ್

Updated on: Jan 05, 2023 | 10:50 PM

India vs Sri Lanka, 2nd T20: ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ನಿಧಾನಗತಿಯಲ್ಲಿ ರನ್ ಪೇರಿಸುತ್ತಾ ಸಾಗಿದರು. ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಅಕ್ಷರ್ ಪಟೇಲ್ ಲಂಕಾ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು.

India vs Sri Lanka, 2nd T20: ಶ್ರೀಲಂಕಾ ವಿರುದ್ದ ಟೀಮ್​ ಇಂಡಿಯಾಗೆ ವೀರೋಚಿತ ಸೋಲು
Follow us on

India vs Sri Lanka, 2nd T20: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 16 ರನ್​ಗಳಿಂದ ಸೋಲನುಭವಿಸಿದೆ. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಸರಣಿಯಲ್ಲಿ ಸಮಬಲ ಸಾಧಿಸಿದೆ. ಇದಕ್ಕೂ ಮುನ್ನ  ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ್ದ ಶ್ರೀಲಂಕಾ ಭರ್ಜರಿ ಬ್ಯಾಟಿಂಗ್ ನಡೆಸಿತು. ಆರಂಭಿಕರಾದ ಪಾತುಂ ನಿಸ್ಸಂಕಾ (33) ಹಾಗೂ ಕುಸಾಲ್ ಮೆಂಡಿಸ್ (52) ಮೊದಲ ವಿಕೆಟ್​ಗೆ 80 ರನ್​ಗಳ ಜೊತೆಯಾಟವಾಡಿದ್ದರು. ಆ ಬಳಿಕ ಬಂದ ಚರಿತ್ ಅಸಲಂಕಾ 19 ಎಸೆತಗಳಲ್ಲಿ 37 ರನ್​ ಚಚ್ಚಿದರು.

ಇತ್ತ ಲಂಕಾ ಬ್ಯಾಟ್ಸ್​ಮನ್​ಗಳ ಅಬ್ಬರದ ನಡುವೆ ಟೀಮ್ ಇಂಡಿಯಾ ಬೌಲರ್​ಗಳು ಲಯ ತಪ್ಪಿದರು. ಅದರಲ್ಲೂ ಬ್ಯಾಕ್ ಟು ಬ್ಯಾಕ್ ನೋಬಾಲ್ ಎಸೆಯುವ ಮೂಲಕ ದುಬಾರಿಯಾದರು. ಇನ್ನು ಅಂತಿಮ ಹಂತದಲ್ಲಿ ಕಣಕ್ಕಿಳಿದ ನಾಯಕ ದಸುನ್ ಶಾನಕ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು.

ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿದ ಶಾನಕ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ 22 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ನೊಂದಿಗೆ ಅಜೇಯ 52 ರನ್ ಬಾರಿಸಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ ಶ್ರೀಲಂಕಾ ತಂಡದ ಮೊತ್ತ 6 ವಿಕೆಟ್ ನಷ್ಟಕ್ಕೆ 206 ಕ್ಕೆ ಬಂದು ನಿಂತಿತು.

ಇದನ್ನೂ ಓದಿ
IPL 2023: 2 ದೇಶಗಳಿಂದ ಐಪಿಎಲ್​ಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗ
IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
IPL 2023: ಐಪಿಎಲ್​ಗೆ ನಮೀಬಿಯಾ, ಐರ್ಲೆಂಡ್, ಜಿಂಬಾಬ್ವೆ ಆಟಗಾರರು ಎಂಟ್ರಿ
IPL 2023 RCB Team: RCB ಹೊಸ ತಂಡ ಹೀಗಿದೆ

207 ರನ್​ಗಳ ಕಠಿಣ ಗುರಿ ಪಡೆದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಕಸುನ್ ರಜಿತ ಎಸೆದ 2ನೇ ಓವರ್​ನಲ್ಲೇ ಇಶಾನ್ ಕಿಶನ್ (2) ಹಾಗೂ ಶುಭ್​ಮನ್ ಗಿಲ್ (5) ವಿಕೆಟ್ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ಚೊಚ್ಚಲ ಪಂದ್ಯವಾಡಿದ ರಾಹುಲ್ ತ್ರಿಪಾಠಿ (5) ಕೂಡ ಔಟ್ ಆದರು.

ಆ ಬಳಿಕ ಬಂದ ನಾಯಕ ಹಾರ್ದಿಕ್ ಪಾಂಡ್ಯ 12 ರನ್​ಗಳಿಸಿ ಕರುಣತ್ನೆಗೆ ವಿಕೆಟ್​ ಒಪ್ಪಿಸಿದರೆ, ದೀಪಕ್ ಹೂಡಾ (9) ಹಸರಂಗ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ ಟೀಮ್ ಇಂಡಿಯಾ 9.1 ಓವರ್​ಗಳಲ್ಲಿ 57 ರನ್​ಗಳಿಸಿ 5 ವಿಕೆಟ್ ಕಳೆದುಕೊಂಡಿತ್ತು.

ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ನಿಧಾನಗತಿಯಲ್ಲಿ ರನ್ ಪೇರಿಸುತ್ತಾ ಸಾಗಿದರು. ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಅಕ್ಷರ್ ಪಟೇಲ್ ಲಂಕಾ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಅದರಲ್ಲೂ ಹಸರಂಗ ಎಸೆದ 14ನೇ ಓವರ್​ನಲ್ಲಿ ಅಕ್ಷರ್ ಹ್ಯಾಟ್ರಿಕ್ ಸಿಕ್ಸ್​ ಸಿಡಿಸಿದರು. ಹಾಗೆಯೇ ಸೂರ್ಯ ಕುಮಾರ್ ಒಂದು ಸಿಕ್ಸ್ ಬಾರಿಸುವ ಮೂಲಕ ಆ ಓವರ್​ನಲ್ಲಿ 26 ರನ್​ ಕಲೆಹಾಕಿದರು.

ಅದರಂತೆ ಕೊನೆಯ 6 ಓವರ್​ಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 83 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಅಕ್ಷರ್ ಪಟೇಲ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದರ ಬೆನ್ನಲ್ಲೇ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ಕೂಡ 33 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಆದರೆ ಅರ್ಧಶತಕದ ಬೆನ್ನಲ್ಲೇ ಸೂರ್ಯಕುಮಾರ್ (51) ಯಾದವ್ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು.

ಅಂತಿಮ 3 ಓವರ್​ಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 50 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಮಧುಶಂಕ ಓವರ್​ನಲ್ಲಿ ಶಿವಂ ಮಾವಿ 2 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 17 ರನ್​ ಚಚ್ಚಿದರು. ಪರಿಣಾಮ ಕೊನೆಯ 12 ಎಸೆತಗಳಲ್ಲಿ 33 ರನ್​ಗಳು ಬೇಕಿತ್ತು. ಈ ವೇಳೆ ಅಕ್ಷರ್-ಮಾವಿ 12 ರನ್​ ಕಲೆಹಾಕುವಲ್ಲಿ ಯಶಸ್ವಿಯಾದರು.

ಅದರಂತೆ ಕೊನೆಯ ಓವರ್​ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 21 ರನ್​ಗಳ ಅವಶ್ಯಕತೆಯಿತ್ತು. ಶಾನಕ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಮಾವಿ 1 ರನ್​ ಕಲೆಹಾಕಿದರು. 2ನೇ ಎಸೆತದಲ್ಲಿ ಅಕ್ಷರ್ ಪಟೇಲ್ 2 ರನ್ ಓಡಿದರು. ಮೂರನೇ ಎಸೆತದಲ್ಲಿ ಅಕ್ಷರ್ ಬಾರಿಸಿದ ಚೆಂಡು ಬೌಂಡರಿ ಲೈನ್​ನಲ್ಲಿ ಕ್ಯಾಚ್ ಆಯಿತು. ಇದರೊಂದಿಗೆ 31 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್​ನೊಂದಿಗೆ 65 ರನ್ ಬಾರಿಸಿದ್ದ ಅಕ್ಷರ್ ಪಟೇಲ್ ಇನಿಂಗ್ಸ್ ಅಂತ್ಯವಾಯಿತು. ಅಂತಿಮವಾಗಿ ಕೇವಲ 4 ರನ್ ನೀಡಿದ ದುಸನ್ ಶನಕಾ ಶ್ರೀಲಂಕಾ ತಂಡಕ್ಕೆ 16 ರನ್​ಗಳ ಜಯ ತಂದುಕೊಟ್ಟರು.

SL 206/6 (20)

IND 190/8 (20)

ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್

ಶ್ರೀಲಂಕಾ ಪ್ಲೇಯಿಂಗ್ 11 ಹೀಗಿದೆ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ದಸುನ್ ಶಾನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತಾ, ದಿಲ್ಶನ್ ಮಧುಶಂಕ

 

 

 

Published On - 10:45 pm, Thu, 5 January 23