Team India: ಐದು ಆಟಗಾರರನ್ನು ಕಣಕ್ಕಿಳಿಸಿ ಇತಿಹಾಸ ಬರೆದ ಟೀಮ್ ಇಂಡಿಯಾ..!

| Updated By: ಝಾಹಿರ್ ಯೂಸುಫ್

Updated on: Jul 23, 2021 | 4:56 PM

ಭಾರತ (Team India Playing 11): ಪೃಥ್ವಿ ಶಾ, ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ

Team India: ಐದು ಆಟಗಾರರನ್ನು ಕಣಕ್ಕಿಳಿಸಿ ಇತಿಹಾಸ ಬರೆದ ಟೀಮ್ ಇಂಡಿಯಾ..!
Team India
Follow us on

ಭಾರತ-ಶ್ರೀಲಂಕಾ ನಡುವಣ ಮೂರನೇ ಏಕದಿನ ಪಂದ್ಯದ ವೇಳೆ ಟೀಮ್ ಇಂಡಿಯಾ ಇತಿಹಾಸವನ್ನು ಪುನರಾವರ್ತಿಸಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ತಂಡದಲ್ಲಿ ಆರು ಬದಲಾವಣೆ ಮಾಡಲಾಗಿದೆ ಎಂದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಅದರಲ್ಲೂ ಈ ಮೂಲಕ 5 ಹೊಸ ಆಟಗಾರರು ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ ಎಂದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಹೌದು, ಈಗಾಗಲೇ ಶ್ರೀಲಂಕಾ ವಿರುದ್ದ ಸರಣಿ ಗೆದ್ದಿರುವ ಭಾರತ ತಂಡದ ಪ್ಲೇಯಿಂಗ್ ಇಲೆವೆನ್​ಗೆ ಮೇಜರ್ ಸರ್ಜರಿ ಮಾಡಿದ್ದರು ಕೋಚ್ ರಾಹುಲ್ ದ್ರಾವಿಡ್.

ರಾಹುಲ್ ದ್ರಾವಿಡ್ ಅವರ ಅಣತಿಯಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಈಗಾಗಲೇ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವಿಶ್ರಾಂತಿ ನೀಡಿ, ಬೆಂಚ್ ಕಾದಿದ್ದ 6 ಆಟಗಾರರನ್ನು ಕಣಕ್ಕಿಳಿಸಿದರು. ಅದರಂತೆ ಇಶಾನ್ ಕಿಶನ್, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಕುಲ್ದೀಪ್ ಯಾದವ್, ದೀಪಕ್ ಚಹರ್, ಯಜುವೇಂದ್ರ ಚಹಲ್ ಪ್ಲೇಯಿಂಗ್​ ಇಲೆವೆನ್​ನಿಂದ ಹೊರಗುಳಿದರು. ಇವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕರಿಯಾ, ರಾಹುಲ್ ಚಹರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡುವ ಅವಕಾಶ ಪಡೆದರು.

1980ರಲ್ಲಿ ಭಾರತ ತಂಡವು ಇಂತಹದೊಂದು ಪ್ರಯೋಗ ಮಾಡಿತ್ತು. ಅಂದು ಆಸ್ಟ್ರೇಲಿಯಾ ವಿರುದ್ದ ಟೀಮ್ ಇಂಡಿಯಾ ಪರ ದಿಲೀಪ್ ದೋಶಿ, ಕೀರ್ತಿ ಆಜಾದ್, ರೋಜರ್ ಬಿನ್ನಿ, ಸಂದೀಪ್ ಪಾಟೀಲ್ ಮತ್ತು ತಿರುಮಲೈ ಶ್ರೀನಿವಾಸನ್ ಅವರು ಚೊಚ್ಚಲ ಬಾರಿ ಜೊತೆಯಾಗಿ ಕಣಕ್ಕಿಳಿದಿದ್ದರು. ಇದೀಗ 41 ವರ್ಷಗಳ ಬಳಿಕ ಭಾರತ ತಂಡವು ಮತ್ತೊಮ್ಮೆ 5 ಹೊಸ ಆಟಗಾರರನ್ನು ಜೊತೆಯಾಗಿ ಕಣಕ್ಕಿಳಿಸಿ ಇತಿಹಾಸ ನಿರ್ಮಿಸಿದೆ. ಅಂದು ತಂಡದಲ್ಲಿ ಕರ್ನಾಟಕದ ಆಟಗಾರ ರೋಜರ್ ಬಿನ್ನ ಸ್ಥಾನ ಪಡೆದಿದ್ದರೆ, ಇಂದು ಕನ್ನಡಿಗ ಕೃಷ್ಣಪ್ಪ ಗೌತಮ್ ಅವಕಾಶ ಪಡೆದಿರುವುದು ವಿಶೇಷ. ಒಟ್ಟಿನಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಬಹುತೇಕ ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.

ಭಾರತ (Team India Playing 11): ಪೃಥ್ವಿ ಶಾ, ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!

 

(India vs Sri Lanka 3rd ODI joint-most debutants for India in their 41 year history of ODI)

Published On - 4:56 pm, Fri, 23 July 21