India vs Srilanka: 13 ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಿದ ಶ್ರೀಲಂಕಾ

| Updated By: ಝಾಹಿರ್ ಯೂಸುಫ್

Updated on: Jul 30, 2021 | 6:41 PM

13 ವರ್ಷಗಳ ಭಾರತದ ಸರಣಿ ಗೆಲುವಿನ ನಾಗಾಲೋಟವನ್ನು ತಡೆಯುವಲ್ಲಿ ಶ್ರೀಲಂಕಾ ತರುಣರು ಯಶಸ್ವಿಯಾದರು. ಭಾರತ ಮತ್ತು ಶ್ರೀಲಂಕಾ ಇದುವರೆಗೆ 19 ಬಾರಿ ಚುಟುಕು ಕದನದಲ್ಲಿ ಮುಖಾಮುಖಿಯಾಗಿದೆ.

India vs Srilanka: 13 ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಿದ ಶ್ರೀಲಂಕಾ
India vs Sri Lanka
Follow us on

ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಶ್ರೀಲಂಕಾ ( India vs Sri Lanka ) ವಿರುದ್ದ ಭಾರತ ಹೀನಾಯ ಸೋಲನುಭವಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಭಾರತ ( Team India ) ಕೇವಲ 81 ರನ್​ಗಳಿಸಿತು. ಈ ಸಾಧಾರಣ ಸವಾಲನ್ನು ಬೆನ್ನತ್ತಿದ ಲಂಕಾ 19.3 ಓವರ್​ನಲ್ಲಿ ಗುರಿ ಮುಟ್ಟುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಟಿ20 ಸರಣಿಯನ್ನು ಲಂಕಾ ತಂಡ 2-1 ಅಂತರದಿಂದ ವಶಪಡಿಸಿಕೊಂಡಿತು.

ಇನ್ನು ಈ ಪಂದ್ಯದಲ್ಲಿ ಕೇವಲ 81 ರನ್​ಗಳಿಸುವ ಟೀಮ್ ಇಂಡಿಯಾ ಹೀನಾಯ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಹೌದು, ಶ್ರೀಲಂಕಾ ವಿರುದ್ಧದ ಟಿ 20 ಪಂದ್ಯಗಳಲ್ಲಿ ಇದು ಭಾರತದ ಅತ್ಯಂತ ಕಡಿಮೆ ಸ್ಕೋರ್. ಹಾಗೆಯೇ ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಮೂರನೇ ಅತಿ ಕಡಿಮೆ ಸ್ಕೋರ್ ಆಗಿದೆ. 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 74 ರನ್​ಗಳಿಸಿದ್ದು ಅತ್ಯಂತ ಹೀನಾಯ ದಾಖಲೆಯಾಗಿದೆ. ಇದಾಗ್ಯೂ ಭಾರತ ಶ್ರೀಲಂಕಾ ವಿರುದ್ದ ಟಿ20 ಕ್ರಿಕೆಟ್​ನಲ್ಲಿ 100 ಕ್ಕಿಂತ ಕಡಿಮೆ ಮೊತ್ತ ದಾಖಲಿಸಿರಲಿಲ್ಲ. ಇದೀಗ 81 ರನ್​ಗಳಿಸುವ ಮೂಲಕ ಟೀಮ್ ಇಂಡಿಯಾ ಕಳಪೆ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಇದಲ್ಲದೆ 13 ವರ್ಷಗಳ ಭಾರತದ ಸರಣಿ ಗೆಲುವಿನ ನಾಗಾಲೋಟವನ್ನು ತಡೆಯುವಲ್ಲಿ ಶ್ರೀಲಂಕಾ ತರುಣರು ಯಶಸ್ವಿಯಾದರು. ಭಾರತ ಮತ್ತು ಶ್ರೀಲಂಕಾ ಇದುವರೆಗೆ 19 ಬಾರಿ ಚುಟುಕು ಕದನದಲ್ಲಿ ಮುಖಾಮುಖಿಯಾಗಿದೆ. ಅದರಲ್ಲಿ ಟೀಮ್ ಇಂಡಿಯಾ 13 ಬಾರಿ ಭರ್ಜರಿ ಜಯ ಸಾಧಿಸಿದರೆ, 5 ಬಾರಿ ಶ್ರೀಲಂಕಾ ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯದಲ್ಲಿ ಫಲಿತಾಂಶ ಮೂಡಿಬಂದಿರಲಿಲ್ಲ. ಹಾಗೆಯೇ 1985 ರಿಂದ ಭಾರತ-ಶ್ರೀಲಂಕಾ ದ್ವಿಪಕ್ಷೀಯ ಸರಣಿ ಆಡುತ್ತಿದೆ. ಅದರಲ್ಲೂ ಲಂಕಾ ವಿರುದ್ಧ ಭಾರತ ಮೇಲುಗೈ ಸಾಧಿಸುತ್ತಾ ಬಂದಿದೆ. ಇಲ್ಲಿ ವಿಶೇಷ ಎಂದರೆ ಶ್ರೀಲಂಕಾ ತಂಡವು ಭಾರತದ ವಿರುದ್ದ 2008ರ ಬಳಿಕ ಮೂರು ಮಾದರಿಯ ಕ್ರಿಕೆಟ್​​ನಲ್ಲೂ ಯಾವುದೇ ಸರಣಿ ಗೆದ್ದಿರಲಿಲ್ಲ.

ಅಂದರೆ 2008 ರಲ್ಲಿ ತವರಿನಲ್ಲಿ ಭಾರತದ ವಿರುದ್ದದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡವು 2-1 ಅಂತರದಿಂದ ಗೆದ್ದುಕೊಂಡಿತು. ಆ ಬಳಿಕ ಏಕದಿನ, ಟೆಸ್ಟ್ ಹಾಗೂ ಟಿ20 ಕ್ರಿಕೆಟ್​ನಲ್ಲಿ ಶ್ರೀಲಂಕಾ ತಂಡವು ಭಾರತದ ವಿರುದ್ದ ಸರಣಿ ಗೆದ್ದಿಲ್ಲ. ಇದೀಗ ಹದಿಮೂರು ವರ್ಷಗಳ ಸುದೀರ್ಘ ಸರಣಿ ಸೋಲಿಗೆ ಲಂಕಾ ತರುಣರು ಇತಿಶ್ರೀ ಹಾಡಿದ್ದಾರೆ. ಟೀಮ್ ಇಂಡಿಯಾವನ್ನು 2-1 ಅಂತರದಿಂದ ಬಗ್ಗು ಬಡಿದು, 13 ವರ್ಷಗಳ ಬಳಿಕ ಭಾರತದ ವಿರುದ್ದದ ದ್ವಿಪಕ್ಷೀಯ ಸರಣಿಯಲ್ಲಿ ಟ್ರೋಫಿ ಗೆದ್ದುಕೊಂಡಿದೆ.

ಕಳಪೆ ದಾಖಲೆ ಬರೆದ ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿತ್ತು:
ಶಿಖರ್ ಧವನ್ (ನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ಸಂದೀಪ್ ವಾರಿಯರ್, ಚೇತನ್ ಸಕರಿಯಾ, ರಾಹುಲ್ ಚಹರ್

ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್​..!

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ