ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದ ಟೀಮ್ ಇಂಡಿಯಾ

India vs West Indies, 2nd Test: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ಶುಭ್​​ಮನ್ ಗಿಲ್ ಭರ್ಜರಿ ಶತಕಗಳನ್ನು ಸಿಡಿಸಿದ್ದಾರೆ. ಈ ಶತಕಗಳ ನೆರವಿನೊಂದಿಗೆ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತ ಪೇರಿಸಿದೆ.

ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದ ಟೀಮ್ ಇಂಡಿಯಾ
Ind Vs Wi

Updated on: Oct 11, 2025 | 1:16 PM

ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 518 ರನ್​ ಪೇರಿಸಿ ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್​​ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 58 ರನ್ ಪೇರಿಸಿದ ಬಳಿಕ ಕೆಎಲ್ ರಾಹುಲ್ (38) ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ಶತಕದ ಜೊತೆಯಾಟವಾಡಿದರು. ಇದರ ನಡುವೆ 87 ರನ್​ಗಳಿಸಿ ಸಾಯಿ ಸುದರ್ಶನ್ ಕೂಡ ವಿಕೆಟ್ ಒಪ್ಪಿಸಿದರು.

ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಯಶಸ್ವಿ ಜೈಸ್ವಾಲ್ ಮೊದಲ ದಿನದಾಟದ ಅಂತ್ಯಕ್ಕೆ 173 ರನ್​ ಬಾರಿಸಿ ಅಜೇಯರಾಗಿ ಉಳಿದರು. ಈ ಭರ್ಜರಿ ಶತಕದ ನೆರವಿನೊಂದಿಗೆ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 318 ರನ್​ ಕಲೆಹಾಕಿತು.

ಇನ್ನು ದ್ವಿತೀಯ ದಿನದಾಟದ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ (175) ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇದಾಗ್ಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾ ನಾಯಕ ಶುಭ್​​ಮನ್ ಗಿಲ್ 196 ಎಸೆತಗಳಲ್ಲಿ 16 ಫೋರ್ ಹಾಗೂ 2 ಸಿಕ್ಸರ್​ಗಳೊಂದಿಗೆ ಅಜೇಯ 128 ರನ್ ಬಾರಿಸಿದರು.

ಗಿಲ್​ಗೆ ಉತ್ತಮ ಸಾಥ್ ನೀಡಿದ ನಿತೀಶ್ ಕುಮಾರ್ ರೆಡ್ಡಿ 43 ರನ್ ಬಾರಿಸಿದರೆ, ಧ್ರುವ್ ಜುರೆಲ್ 44 ರನ್​​ಗಳಿಸಿ ಔಟಾದರು. ಜುರೆಲ್​ ಔಟಾಗುತ್ತಿದ್ದಂತೆ ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸಿತು. ಅದರಂತೆ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 5 ವಿಕೆಟ್ ಕಳೆದುಕೊಂಡು 518 ರನ್ ಕಲೆಹಾಕಿದೆ.

ಭಾರತ ಪ್ಲೇಯಿಂಗ್ ಇಲೆವೆನ್: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ಸಾಯಿ ಸುದರ್ಶನ್ , ಶುಭ್​ಮನ್ ಗಿಲ್ (ನಾಯಕ) , ಧ್ರುವ ಜುರೆಲ್ ( ​​ವಿಕೆಟ್ ಕೀಪರ್ ) , ರವೀಂದ್ರ ಜಡೇಜಾ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಕುಲ್ದೀಪ್ ಯಾದವ್ , ಜಸ್​ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: ಶಾನ್​ದಾರ್ ಶತಕದೊಂದಿಗೆ ಭರ್ಜರಿ ದಾಖಲೆ ಬರೆದ ಶುಭ್​ಮನ್ ಗಿಲ್

ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್: ಜಾನ್ ಕ್ಯಾಂಪ್‌ಬೆಲ್ , ತೇಜ್​ನರೈನ್ ಚಂದ್ರಪಾಲ್ , ಅಲಿಕ್ ಅಥನಾಝ್ , ಶೈ ಹೋಪ್ , ರೋಸ್ಟನ್ ಚೇಸ್ (ನಾಯಕ) , ಟೆವಿನ್ ಇಮ್ಲಾಚ್ (ವಿಕೆಟ್ ಕೀಪರ್) , ಜಸ್ಟಿನ್ ಗ್ರೀವ್ಸ್ , ಜೋಮೆಲ್ ವಾರಿಕನ್ , ಖಾರಿ ಪಿಯರೆ , ಆಂಡರ್ಸನ್ ಫಿಲಿಪ್ , ಜೇಡನ್ ಸೀಲ್ಸ್.