
ರಾಂಚಿಯಲ್ಲಿ ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಮೊದಲ ಪಂದ್ಯವನ್ನು ಗೆದ್ದು 1-0 ಮುನ್ನಡೆ ಸಾಧಿಸಿರುವ ಭಾರತ, ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಸತತ 10ನೇ ಟಿ20ಪಂದ್ಯವನ್ನು ಗೆಲ್ಲುವ ಇರಾದೆಯಲ್ಲಿದೆ. ಲಕ್ನೋದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 172 ರನ್‌ಗಳ ಗುರಿಯನ್ನು ಇನ್ನು 32 ಎಸೆತಗಳು ಬಾಕಿ ಇರುವಾಗಲೇ ಬೆನ್ನಟ್ಟಿತು. ಆ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಗೆಲುವಿನ ಶತಕ ಬಾರಿಸಿದ್ದರು. ಇಂದಿನ ಪಂದ್ಯದಲ್ಲೂ ಅದೇ ಲಯವನ್ನು ಮುಂದುವರೆಸಲು ನಾಯಕ ಅಯ್ಯರ್ ಹಾಗೂ ಇಡೀ ತಂಡ ಸಿದ್ಧವಾಗಿದೆ. ಆದಾಗ್ಯೂ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದ್ದು, ಪಂದ್ಯಕ್ಕೆ ಅಡ್ಡಿಯುಂಟಾಗುವ ಸಾಧ್ಯತೆಗಳಿವೆ.
ಉಭಯ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಮೊದಲ ಎರಡು ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಶೇ. 50 ಕ್ಕಿಂತ ಹೆಚ್ಚ್ಚಿದೆ. ಹವಾಮಾನ ವರದಿಯಂತೆ ನಡೆದರೆ ಪಂದ್ಯದ ಆರಂಭ ವಿಳಂಬವಾಗಬಹುದು ಮತ್ತು ಮೊದಲ ಇನ್ನಿಂಗ್ಸ್ ಮೇಲೆ ಪರಿಣಾಮ ಬೀರಬಹುದು. ಪಂದ್ಯ ಪ್ರಾರಂಭವಾದರೂ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಇದರರ್ಥ ಇಂದು ರಾಂಚಿಯಲ್ಲಿ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗಬಹುದು.
ರಾಂಚಿ ಮೈದಾನ ಇಲ್ಲಿಯವರೆಗೆ ಹೆಚ್ಚಿನ ಸ್ಕೋರ್‌ಗಳನ್ನು ಕಂಡಿಲ್ಲ. ಆರಂಭಿಕ ಹಂತದಲ್ಲಿ ಬೌಲರ್‌ಗಳು ಬೆಂಬಲ ಪಡೆಯುವ ನಿರೀಕ್ಷೆಯಿದೆ. ಇಲ್ಲಿ ಒಟ್ಟು ಏಳು ಟಿ20 ಪಂದ್ಯಗಳನ್ನು ಆಡಲಾಗಿದ್ದು, ಮೊದಲು ಬೌಲಿಂಗ್ ಮಾಡಿದ ತಂಡಗಳು ನಾಲ್ಕ ಪಂದ್ಯಗಳಲ್ಲಿ ಗೆದ್ದಿದ್ದರೆ, ಉಳಿದ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಈ ಮೈದಾನದಲ್ಲಿ ಟೀಂ ಇಂಡಿಯಾದ ಅತ್ಯಧಿಕ ಸ್ಕೋರ್196 ಆಗಿದೆ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 138 ಆಗಿದ್ದರೆ, ಎರಡನೇ ಇನ್ನಿಂಗ್ಸ್ ಸ್ಕೋರ್ 111 ಆಗಿದೆ. ಇಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ 155 ಆಗಿದೆ. ಹೀಗಾಗಿ, ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮನಾದ ನೆರವು ನೀಡುವುದು ಖಚಿತವಾಗಿದೆ.
ಭಾರತದ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ನಮನ್ ಧೀರ್.
ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ನಾಯಕ), ಜ್ಯುವೆಲ್ ಆಂಡ್ರ್ಯೂ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ಕಾಮಿಲ್ ಪೂರನ್, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್ಫೋರ್ಡ್, ಕ್ವೆಂಟಿನ್ ಸ್ಯಾಂಪ್ಸನ್, ರೊಮಾರಿಯೋ ಶೆಫರ್ಡ್, ಶಮರ್ ಸ್ಪ್ರಿಂಗರ್.