
ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಇಂದಿನಿಂದ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 318 ರನ್ ಕಲೆಹಾಕಿದೆ. ಭಾರತದ ಪರ ದ್ವಿಶತಕದತ್ತ ದಾಪುಗಾಲಿಟ್ಟಿರುವ ಆರಂಭಿಕ ಯಶಸ್ವಿ ಜೈಸ್ವಾಲ್ (Yashasvi Jaiswal) ಅಜೇಯ 173 ರನ್ ಬಾರಿಸಿದರೆ, ನಾಯಕ ಶುಭ್ಮನ್ ಗಿಲ್ 20 ರನ್ ಬಾರಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಉಳಿದಂತೆ ಆರಂಭಿಕ ರಾಹುಲ್ 38 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಸಾಯಿ ಸುದರ್ಶನ್ (Sai Sudarshan) 87 ರನ್ ಬಾರಿಸಿ ಕೇವಲ 13 ರನ್ಗಳಿಂದ ಚೊಚ್ಚಲ ಟೆಸ್ಟ್ ಶತಕದಿಂದ ವಂಚಿತರಾಗಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಸಿಕ್ಕಿತು. ಆರಂಭಿಕ ರಾಹುಲ್ ಹಾಗೂ ಜೈಸ್ವಾಲ್ ಮೊದಲ ವಿಕೆಟ್‌ಗೆ 58 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ರಾಹುಲ್ 38 ರನ್‌ಗಳಿಸಿ ಸ್ಟಂಪ್ ಔಟ್ ಆದರು. ಆ ಬಳಿಕ ಜೊತೆಯಾದ ಜೈಸ್ವಾಲ್ ಹಾಗೂ ಸುದರ್ಶನ್, ಊಟದ ವಿರಾಮದ ವೇಳೆಗೆ ತಂಡದ ಮೊತ್ತವನ್ನು 94 ರನ್ಗಳಿಗೆ ಕೊಂಡೊಯ್ದರು. ಭೋಜನ ವಿರಾಮದ ಬಳಿಕ ಯಶಸ್ವಿ ಜೈಸ್ವಾಲ್ ತಮ್ಮ 12ನೇ ಟೆಸ್ಟ್ ಅರ್ಧಶತಕವನ್ನು ಪೂರೈಸಿದರು.
ಇತ್ತ ಎಚ್ಚರಿಕೆಯ ಬ್ಯಾಟಿಂಗ್ ಮುಂದುವರೆಸಿದ ಸಾಯಿ ಸುದರ್ಶನ್ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಅರ್ಧಶತಕವನ್ನು ಬಾರಿಸಿದರು. ಇತ್ತ ತಮ್ಮ ಅರ್ಧಶತಕವನ್ನು ಶತಕವಾಗಿ ಬದಲಿಸುವಲ್ಲಿ ಯಶಸ್ವಿಯಾದ ಜೈಸ್ವಾಲ್ ತಮ್ಮ ಏಳನೇ ಟೆಸ್ಟ್ ಶತಕವನ್ನು ಬಾರಿಸಿದರು. ಆದಾಗ್ಯೂ ತಂಡದ ಮೊತ್ತ 251 ರನ್‌ಗಳಿರುವಾಗ ತಂಡದ ಎರಡನೇ ವಿಕೆಟ್ ಪತನವಾಯಿತು. ಜೋಮೆಲ್ ವಾರಿಕನ್ ಸಾಯಿ ಸುದರ್ಶನ್ ಅವರನ್ನು ಎಲ್ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು. ಅಂತಿಮವಾಗಿ ಸುದರ್ಶನ್ 165 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 87 ರನ್ ಗಳಿಸಿ ಶತಕ ವಂಚಿತರಾದರು. ಇದರ ಜೊತೆಗೆ ಅವರು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಎರಡನೇ ವಿಕೆಟ್‌ಗೆ 193 ರನ್‌ಗಳ ಜೊತೆಯಾಟವಾಡಿದರು.
IND vs WI, 2nd Test: ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ: ಭಾರತ ಭರ್ಜರಿ ಬ್ಯಾಟಿಂಗ್
ಆ ಬಳಿಕ ನಾಯಕ ಶುಭ್ಮನ್ ಗಿಲ್ ಅವರಿಂದ ಉತ್ತಮ ಸಾಥ್ ಪಡೆದ ಯಶಸ್ವಿ ಜೈಸ್ವಾಲ್ 224 ಎಸೆತಗಳಲ್ಲಿ 150 ರನ್‌ಗಳ ಗಡಿ ದಾಟುವ ಮೂಲಕ ಐದನೇ ಬಾರಿಗೆ 150 ಕ್ಕೂ ಅಧಿಕ ರನ್ ಬಾರಿಸಿದ ದಾಖಲೆ ಬರೆದರು. ದಿನದಾಟ ಮುಗಿಯುವ ವೇಳೆಗೆ ಯಶಸ್ವಿ ಜೈಸ್ವಾಲ್ 173 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ನಾಯಕ ಶುಭ್ಮನ್ ಗಿಲ್ 20 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಈ ಜೋಡಿ ಇದುವರೆಗೆ ಮೂರನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ನಡೆಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Fri, 10 October 25