ಅಗ್ರಸ್ಥಾನದತ್ತ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Sep 13, 2023 | 5:09 PM

Team India: ಟಿ20 ತಂಡಗಳ ಶ್ರೇಯಾಂಕದಲ್ಲಿ ಈಗಾಗಲೇ ಟೀಮ್ ಇಂಡಿಯಾ ಅಗ್ರಸ್ಥಾನ ಅಲಂಕರಿಸಿದೆ. ಇನ್ನು ಟೆಸ್ಟ್​ ಕ್ರಿಕೆಟ್​ನಲ್ಲೂ ಭಾರತ ತಂಡವೇ ನಂಬರ್ 1. ಇದೀಗ ಏಕದಿನ ಕ್ರಿಕೆಟ್​ನಲ್ಲೂ ಅಗ್ರಸ್ಥಾನ ಅಲಂಕರಿಸುವ ಸನಿಹದಲ್ಲಿದೆ ಟೀಮ್ ಇಂಡಿಯಾ. ಈ ಮೂಲಕ ಏಕದಿನ ವಿಶ್ವಕಪ್​ಗೂ ಮುನ್ನ ಮೂರು ಸ್ವರೂಪಗಳಲ್ಲೂ ನಂಬರ್ 1 ತಂಡ ಎನಿಸಿಕೊಳ್ಳಲು ಟೀಮ್ ಇಂಡಿಯಾಗೆ ಉತ್ತಮ ಅವಕಾಶವಿದೆ.

ಅಗ್ರಸ್ಥಾನದತ್ತ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ
Team India
Follow us on

ಏಷ್ಯಾಕಪ್​ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್​ನಲ್ಲಿ ನಂಬರ್ 1 ಸ್ಥಾನಕ್ಕೇರುವ ಸನಿಹದಲ್ಲಿದೆ. ಇದಕ್ಕಾಗಿ ಭಾರತ ತಂಡವು ಮುಂದಿನ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಬೇಕಾಗುತ್ತದೆ. ಅಂದರೆ ಬಾಂಗ್ಲಾದೇಶ್ ವಿರುದ್ಧದ ಸೂಪರ್-4 ಹಂತದ ತನ್ನ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕು. ಅಲ್ಲದೆ ಏಷ್ಯಾಕಪ್​ ಫೈನಲ್​ನಲ್ಲೂ ಜಯಭೇರಿ ಬಾರಿಸಬೇಕು. ಹೀಗಾದರೆ ಟೀಮ್ ಇಂಡಿಯಾ ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದು.

ಏಕೆಂದರೆ ಪ್ರಸ್ತುತ ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ 3ನೇ ಸ್ಥಾನದಲ್ಲಿದೆ. ಇಲ್ಲಿ ಮೊದಲ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾ. ಆಸೀಸ್ ಪಡೆ 118 ರೇಟಿಂಗ್​​ನೊಂದಿಗೆ ಮೊದಲ ಸ್ಥಾನ ಅಲಂಕರಿಸಿದೆ. ಇನ್ನು ದ್ವಿತೀಯ ಸ್ಥಾನದಲ್ಲಿರುವ ಪಾಕಿಸ್ತಾನ್ ಹೊಂದಿರುವ ರೇಟಿಂಗ್ ಕೂಡ 118. ಇನ್ನು ತೃತೀಯ ಸ್ಥಾನದಲ್ಲಿರುವ ಟೀಮ್ ಇಂಡಿಯಾ 116 ರೇಟಿಂಗ್​ಗಳನ್ನು ಹೊಂದಿದೆ. ಅಂದರೆ ಮೊದಲೆರಡು ಸ್ಥಾನಗಳಲ್ಲಿರುವ ತಂಡಗಳಿಗಿಂತ 2 ಅಂಕಗಳ ವ್ಯತ್ಯಾಸವಿದೆ ಅಷ್ಟೇ.

ಹಾಗೆಯೇ ಇಲ್ಲಿ ಪಾಯಿಂಟ್ಸ್​ ಗಣನೆಗೆ ತೆಗೆದುಕೊಂಡರೆ ಮೊದಲೆರಡು ಸ್ಥಾನಗಳಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ್​ಗಿಂತ ಟೀಮ್ ಇಂಡಿಯಾದ ಅಂಕಗಳು ಹೆಚ್ಚಿದೆ. ಇಲ್ಲಿ ಆಸ್ಟ್ರೇಲಿಯಾ 3,061 ಪಾಯಿಂಟ್ಸ್ ಹೊಂದಿದ್ದರೆ, ಪಾಕಿಸ್ತಾನ್ ಕೂಡ 3,061 ಅಂಕಗಳನ್ನು ಕಲೆಹಾಕಿದೆ. ಆದರೆ ಟೀಮ್ ಇಂಡಿಯಾ ಒಟ್ಟು 4,516 ಪಾಯಿಂಟ್ಸ್​ಗಳನ್ನು ಹೊಂದಿದೆ. ಅಂದರೆ ಇಲ್ಲಿ ರೇಟಿಂಗ್​ನಲ್ಲಿ ಮೇಲೇರಿದರೆ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೇರುವುದು ಖಚಿತ.

ಹೀಗಾದ್ರೂ ಟೀಮ್ ಇಂಡಿಯಾ ನಂಬರ್ 1:

ಒಂದು ವೇಳೆ ಟೀಮ್ ಇಂಡಿಯಾ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಗೆದ್ದರೆ ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದು. ಆದರೆ ಇದಕ್ಕೆ ಇತರೆ ತಂಡಗಳ ಫಲಿತಾಂಶಗಳನ್ನು ಅವಲಂಭಿಸಬೇಕಾಗುತ್ತದೆ.

ಇಲ್ಲಿ ಪಾಕಿಸ್ತಾನ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲಬೇಕು. ಹಾಗೆಯೇ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವು ಸೌತ್ ಆಫ್ರಿಕಾ ವಿರುದ್ಧದ 2 ಏಕದಿನ ಪಂದ್ಯಗಳಲ್ಲಿ ಪರಾಜಯಗೊಳ್ಳಬೇಕು. ಇದರಿಂದ ಈ ಎರಡು ತಂಡಗಳನ್ನು ಹಿಂದಿಕ್ಕಿ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೇರಬಹುದು. ಇಲ್ಲದಿದ್ದರೆ ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡವು ಅಗ್ರಸ್ಥಾನಕ್ಕೇರಲು ಏಷ್ಯಾಕಪ್ ಫೈನಲ್​ವರೆಗೂ ಕಾಯಬೇಕು.

ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!

ಟಾಪ್​ನಲ್ಲಿ ಟೀಮ್ ಇಂಡಿಯಾ:

ಟಿ20 ತಂಡಗಳ ಶ್ರೇಯಾಂಕದಲ್ಲಿ ಈಗಾಗಲೇ ಟೀಮ್ ಇಂಡಿಯಾ ಅಗ್ರಸ್ಥಾನ ಅಲಂಕರಿಸಿದೆ. ಇನ್ನು ಟೆಸ್ಟ್​ ಕ್ರಿಕೆಟ್​ನಲ್ಲೂ ಭಾರತ ತಂಡವೇ ನಂಬರ್ 1. ಇದೀಗ ಏಕದಿನ ಕ್ರಿಕೆಟ್​ನಲ್ಲೂ ಅಗ್ರಸ್ಥಾನ ಅಲಂಕರಿಸುವ ಸನಿಹದಲ್ಲಿದೆ ಟೀಮ್ ಇಂಡಿಯಾ. ಈ ಮೂಲಕ ಏಕದಿನ ವಿಶ್ವಕಪ್​ಗೂ ಮುನ್ನ ಮೂರು ಸ್ವರೂಪಗಳಲ್ಲೂ ನಂಬರ್ 1 ತಂಡ ಎನಿಸಿಕೊಳ್ಳಲು ಟೀಮ್ ಇಂಡಿಯಾಗೆ ಉತ್ತಮ ಅವಕಾಶವಿದೆ.