IND vs AFG: ಜೈಸ್ವಾಲ್- ದುಬೆ ಸಿಡಿಲಬ್ಬರದ ಅರ್ಧಶತಕ; ಟಿ20 ಸರಣಿ ಗೆದ್ದ ಭಾರತ
IND vs AFG: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 3 ಟಿ20 ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಭಾರತ 6 ವಿಕೆಟ್ಗಳ ಭರ್ಜರರಿ ಜಯ ಸಾಧಿಸಿದೆ. ಈ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವೆ ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 3 ಟಿ20 ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಭಾರತ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 20 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತದ ಬೆನ್ನಟ್ಟಿದ ಯುವ ಟೀಂ ಇಂಡಿಯಾ ಆರಂಭಿಕ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ಶಿವಂ ದುಬೆ (Shivam Dube) ಅವರ ಸಿಡಿಲಬ್ಬರದ ಅರ್ಧಶತಕದ ಆಧಾರದ ಮೇಲೆ 26 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆಬೀರಿತು.
28 ಎಸೆತಗಳಲ್ಲಿ ಅರ್ಧಶತಕ
ಮೇಲೆ ಹೇಳಿದಂತೆ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡದ ಆರಂಭಿಕರು ವೇಗವಾಗಿ ರನ್ ಕಲೆಹಾಕಲು ಪ್ರಯತ್ನಿಸಿದರು. ಆದರೆ ಗುಲ್ಬದಿನ್ ನೈಬ್ ಹೊರತುಪಡಿಸಿ, ಅಗ್ರ ಕ್ರಮಾಂಕದ ಯಾವುದೇ ಬ್ಯಾಟ್ಸ್‌ಮನ್ ಭಾರತೀಯ ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಲಿಲ್ಲ. ಮೂರನೆ ಕ್ರಮಾಂಕಕ್ಕೆ ಬಡ್ತಿ ಪಡೆದ ಆಲ್ ರೌಂಡರ್ ಗುಲ್ಬಾದಿನ್ ಭಾರತೀಯ ಬೌಲರ್‌ಗಳ ಮೇಲೆ ದಾಳಿ ನಡೆಸಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಆದರೆ 12ನೇ ಓವರ್‌ನಲ್ಲಿ ನೈಬ್ ಅವರನ್ನು ಔಟ್ ಮಾಡುವ ಮೂಲಕ ಅಕ್ಷರ್ ಪಟೇಲ್ ಭಾರತಕ್ಕೆ ಅವಶ್ಯಕ ವಿಕೆಟ್ ತಂದುಕೊಟ್ಟರು. ಅಂತಿಮವಾಗಿ ನೈಬ್ ಕೇವಲ 35 ಎಸೆತಗಳಲ್ಲಿ 57 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
172 ರನ್‌ಗಳ ಟಾರ್ಗೆಟ್
ಇವರನ್ನು ಬಿಟ್ಟರೆ ತಂಡದ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು ತಂಡಕ್ಕಾಗಿ ವಿಶೇಷವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. 17ನೇ ಓವರ್‌ವರೆಗೆ ಅಫ್ಘಾನಿಸ್ತಾನದ ಸ್ಕೋರ್ ಕೇವಲ 134 ರನ್ ಆಗಿತ್ತು. ಆದರೆ ನಂತರ ಕೆಳ ಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ ಅಫ್ಘಾನ್ ಬೌಲರ್ಗಳಾದ ಕರೀಂ ಜನತ್ ಕೇವಲ 10 ಎಸೆತಗಳಲ್ಲಿ 20 ರನ್ ಮತ್ತು ಮುಜೀಬ್ ಉರ್ ರೆಹಮಾನ್ 9 ಎಸೆತಗಳಲ್ಲಿ 21 ರನ್ ಗಳಿಸಿ ತಂಡವನ್ನು 172 ರನ್‌ಗಳಿಗೆ ಕೊಂಡೊಯ್ದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ, ಅರ್ಷ್‌ದೀಪ್ 2 ವಿಕೆಟ್‌ಗಳನ್ನು ಕಬಳಿಸಿದರೆ, ಇನ್ನೇರಡು ವಿಕೆಟ್ಗಳು ರನೌಟ್ ಮೂಲಕ ಬಂದವು.
ರೋಹಿತ್ ಮತ್ತೆ ಫೇಲ್
ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾಕ್ಕೆ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಆದರೆ ಅದೇ ಓವರ್ನ ಮೂರನೇ ಎಸೆತದಲ್ಲಿ ನಾಯಕ ರೋಹಿತ್ ಶರ್ಮಾ ಆಡಿದ ಮೊದಲ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಹೀಗಾಗಿ ಆರಂಭದಲ್ಲೇ ಭಾರತಕ್ಕೆ ಹಿನ್ನಡೆಯುಂಟಾಯಿತು. ಇತ್ತ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ನಾಯಕ ರೋಹಿತ್, ಎರಡನೇ ಪಂದ್ಯದಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಅನಗತ್ಯ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು.
ಜೈಸ್ವಾಲ್- ಶಿವಂ ದುಬೆ ಅರ್ಧಶತಕ
ರೋಹಿತ್ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದ ವಿರಾಟ್, ಎರಡನೇ ಓವರ್‌ನಲ್ಲಿ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಮೇಲೆ 2 ಬೌಂಡರಿಗಳನ್ನು ಬಾರಿಸುವ ಮೂಲಕ ಆಯ್ಕೆ ಮಂಡಳಿಗೆ ತಕ್ಕ ಉತ್ತರ ನೀಡಿದರು. ಮತ್ತೊಂದೆಡೆ, ಯಶಸ್ವಿ ಜೈಸ್ವಾಲ್ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿ, ಫಜಲ್ಹಕ್ ಫಾರೂಕಿ ಅವರ ಓವರ್‌ನಲ್ಲಿ 2 ಸಿಕ್ಸರ್‌ಗಳನ್ನು ಬಾರಿಸಿದರೆ, ಮುಜೀಬ್ ಅವರ ಓವರ್‌ನಲ್ಲಿ ಸತತ 3 ಬೌಂಡರಿಗಳನ್ನು ಬಾರಿಸಿದರು. ಆದರೆ ಈ ನಡುವೆ 16 ಎಸೆತಗಳಲ್ಲಿ 29 ರನ್ ಗಳಿಸಿದ್ದ ವಿರಾಟ್ ಕೊಹ್ಲಿ, ನವೀನ್ ಉಲ್ ಹಕ್ಗೆ ಬಲಿಯಾದರು.
22 ಎಸೆತಗಳಲ್ಲಿ ಸತತ ಎರಡನೇ ಅರ್ಧಶತಕ
ಆದರೂ ಯಶಸ್ವಿ ತಮ್ಮ ಅಬ್ಬರವನ್ನು ತಗ್ಗಿಸದೆ ಬೌಂಡರಿ ಬಾರಿಸುವುದನ್ನು ಮುಂದುವರಿಸಿದರು. ಹೀಗಾಗಿ ಈ ಯುವ ಆರಂಭಿಕ ಆಟಗಾರ ಕೇವಲ 27 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಕೊಹ್ಲಿ ವಿಕೆಟ್ ನಂತರ ಕ್ರೀಸ್ಗೆ ಬಂದ ಶಿವಂ ದುಬೆ ಕಳೆದ ಪಂದ್ಯದ ಫಾರ್ಮ್ ಮುಂದುವರಿಸಿ, ಈ ಬಾರಿ ಹೆಚ್ಚು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಈ ವೇಳೆ ದುಬೆ, ಮೊಹಮ್ಮದ್ ನಬಿ ಅವರ ಓವರ್‌ನಲ್ಲಿ ಸತತ 3 ಸಿಕ್ಸರ್ ಬಾರಿಸಿ ಇಡೀ ಮೈದಾನವೇ ಹುಚ್ಚೆದು ಕುಣಿಯುವಂತೆ ಮಾಡಿದರು. ಹೀಗಾಗಿ ದುಬೆ ಕೇವಲ 22 ಎಸೆತಗಳಲ್ಲಿ ಸತತ ಎರಡನೇ ಅರ್ಧಶತಕ ಪೂರೈಸಿದರು. ಇವರಿಬ್ಬರ ನಡುವೆ 42 ಎಸೆತಗಳಲ್ಲಿ 92 ರನ್‌ಗಳ ಜೊತೆಯಾಟವಿತ್ತು. ಜೈಸ್ವಾಲ್ ಔಟಾದ ನಂತರ ಬಂದ ಜಿತೇಶ್ ಶರ್ಮಾ ಕೂಡ ಬೇಗನೆ ನಿರ್ಗಮಿಸಿದರು. ಆದರೆ ಮತ್ತೊಮ್ಮೆ ರಿಂಕು ಸಿಂಗ್ ದುಬೆ ಅವರೊಂದಿಗೆ 15.4 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:00 pm, Sun, 14 January 24