ಹ್ಯಾಟ್ರಿಕ್ ಗೆಲುವು ದಾಖಲಿಸಿ ಸೂಪರ್ ಸಿಕ್ಸ್ಗೆ ಅರ್ಹತೆ ಪಡೆದ ಟೀಂ ಇಂಡಿಯಾ
ICC Under 19 Womens T20 World Cup 2025: ಭಾರತದ ಮಹಿಳಾ ಅಂಡರ್-19 ತಂಡವು ಶ್ರೀಲಂಕಾವನ್ನು 60 ರನ್‌ಗಳಿಂದ ಸೋಲಿಸಿ ಐಸಿಸಿ ಯು-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮತ್ತೊಂದು ಅದ್ಭುತ ಗೆಲುವು ಸಾಧಿಸಿದೆ. ಗೊಂಗಡಿ ತ್ರಿಷಾ ಅವರ 49 ರನ್‌ಗಳ ಅಮೋಘ ಇನಿಂಗ್ಸ್‌ನ ನೆರವಿನಿಂದ ಭಾರತ 118 ರನ್‌ಗಳನ್ನು ಗಳಿಸಿತು. ಬಲಿಷ್ಠ ಬೌಲಿಂಗ್ ದಾಳಿಯಿಂದ ಶ್ರೀಲಂಕಾವನ್ನು ಕೇವಲ 58 ರನ್‌ಗಳಿಗೆ ಆಲೌಟ್ ಮಾಡಿತು. ಈ ಗೆಲುವಿನೊಂದಿಗೆ ಭಾರತ ಗುಂಪು ಎಯಲ್ಲಿ ಅಗ್ರಸ್ಥಾನ ಪಡೆದು ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸಿದೆ.
2025 ರ ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್‌ನ 24 ನೇ ಪಂದ್ಯದಲ್ಲಿ, ಟೀಂ ಇಂಡಿಯಾ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾವನ್ನು ಸೋಲಿಸಿದೆ. ಈ ಗ್ರೂಪ್ ಎ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ಂ ಇಂಡಿಯಾ ಕೇವಲ 118 ರನ್ ಕಲೆಹಾಕಿತು. ಆದರೆ ಇದರ ಹೊರತಾಗಿಯೂ ಸುಲಭ ಜಯ ದಾಖಲಿಸುವುಲ್ಲಿ ಯಶಸ್ವಿಯಾಯಿತು. ಭಾರತ ನೀಡಿದ 118 ರನ್‌ಗಳ ಅಲ್ಪ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೇವಲ 58 ರನ್‌ಗಳಿಗೆ ಆಲೌಟ್ ಆಗಿ 60 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಇತ್ತ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಗ್ರೂಪ್ ಎ ನಲ್ಲಿ ಅಗ್ರಸ್ಥಾನ ಪಡೆದು ಸೂಪರ್ 6 ಲೀಗ್ ಹಂತಕ್ಕೆ ಅರ್ಹತೆ ಗಳಿಸಿದೆ. ಮತ್ತೊಂದೆಡೆ, ಶ್ರೀಲಂಕಾ ಈ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಸೋತಿದ್ದರೂ ಸಹ ಸೂಪರ್ ಸಿಕ್ಸ್ಗೆ ಎಂಟ್ರಿಕೊಡುವಲ್ಲಿ ಯಶಸ್ವಿಯಾಗಿದೆ.
ಗೊಂಗಡಿ ತ್ರಿಶಾ ಅದ್ಭುತ ಪ್ರದರ್ಶನ
ಟೀಂ ಇಂಡಿಯಾದ ಈ ಗೆಲುವಿನಲ್ಲಿ ಗೊಂಗಡಿ ತ್ರಿಷಾ ಪ್ರಮುಖ ಪಾತ್ರವಹಿಸಿದರು. ಅವರು 49 ರನ್‌ಗಳ ಇನ್ನಿಂಗ್ಸ್ ಆಡಿದರು. ತ್ರಿಷಾ ತಮ್ಮ ಇನ್ನಿಂಗ್ಸ್ನಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಸಹ ಬಾರಿಸಿದರು. ಅವರ ಇನ್ನಿಂಗ್ಸ್‌ನಿಂದಾಗಿಯೇ ಟೀಂ ಇಂಡಿಯಾ 118 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ತ್ರಿಷಾ ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್ 20 ರನ್‌ಗಳನ್ನು ತಲುಪಲು ಸಾಧ್ಯವಾಗಲಿಲ್ಲ. ಶ್ರೀಲಂಕಾ ಪರ ಲಿಮಾನ್ಸಾ ತಿಲಕರತ್ನೆ ಮತ್ತು ಪ್ರಮುದಿ ಮೆತ್ಸಾರ ತಲಾ 2 ವಿಕೆಟ್ ಪಡೆದರು.
ಶ್ರೀಲಂಕಾದ ಶರಣಾಗತಿ
ಶ್ರೀಲಂಕಾದ ಮುಂದೆ ಗುರಿ ದೊಡ್ಡದಾಗಿರಲಿಲ್ಲ ಆದರೆ ಭಾರತೀಯ ಬೌಲರ್‌ಗಳು ತಮ್ಮ ಮಾರಕ ದಾಳಿಯೊಂದಿಗೆ ಲಂಕಾ ತಂಡವನ್ನು ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದರು. ಶಬ್ನಮ್ ಶಕೀಲ್ ಮತ್ತು ಜೋಶಿತಾ ಒಟ್ಟಾಗಿ ಶ್ರೀಲಂಕಾದ ಅಗ್ರ ಕ್ರಮಾಂಕವನ್ನು ನಡುಗಿಸಿದರು. ಶಕೀಲ್ ಮತ್ತು ಜೋಶಿತಾ ಇಬ್ಬರೂ ತಲಾ 2 ವಿಕೆಟ್ ಪಡೆದರು. ಆಯುಷಿ ಶುಕ್ಲಾ ಒಂದು ವಿಕೆಟ್ ಪಡೆದರು. ಪರುಣಿಕಾ ಸಿಸೋಡಿಯಾ ಅದ್ಭುತ ಬೌಲಿಂಗ್ ಮಾಡಿ 2 ವಿಕೆಟ್ ಪಡೆದರು. ವೈಷ್ಣವಿ ಶರ್ಮಾ ಕೂಡ ಒಂದು ವಿಕೆಟ್ ಪಡೆದರು.
ಟೀಂ ಇಂಡಿಯಾದ ಹ್ಯಾಟ್ರಿಕ್ ಗೆಲುವು
ಅಂಡರ್ 19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಮೂರೂ ಪಂದ್ಯಗಳನ್ನು ಏಕಪಕ್ಷೀಯ ರೀತಿಯಲ್ಲಿ ಗೆದ್ದಿರುವುದು ತಂಡ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಸಾಭೀತುಪಡಿಸುತ್ತದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತ್ತು. ಇದರ ನಂತರ, ಮಲೇಷ್ಯಾ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಈಗ ಶ್ರೀಲಂಕಾ ವಿರುದ್ಧ 60 ರನ್‌ಗಳ ದೊಡ್ಡ ಗೆಲುವು ದಾಖಲಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ