ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ (Team India) ಜಯ ಸಾಧಿಸಿದೆ. ಈ ಸೋಲಿನ ಹೊರತಾಗಿಯೂ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಇಂಗ್ಲೆಂಡ್ ತಂಡವು 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.
ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ವನಿತೆಯರು ಯಶಸ್ವಿಯಾಗಿದ್ದರು.
ಮೊದಲ ಓವರ್ನ ಮೂರನೇ ಎಸೆತದಲ್ಲೇ ರೇಣುಕಾ ಸಿಂಗ್ ಮಹಿಯಾ ಬೌಚಿಯರ್ (0) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ಸೋಫಿಯಾ ಡಂಕ್ಲಿ (11) ವಿಕೆಟ್ ಒಪ್ಪಿಸಿದರು.
ಇನ್ನು ಆಲಿಸ್ ಕ್ಯಾಪ್ಸಿ (7) ಹಾಗೂ ಅಮಿ ಜೋನ್ಸ್ (25) ರನ್ನು ಸೈಕಾ ಇಶಾಕ್ ಔಟ್ ಮಾಡಿದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ 42 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 52 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 126 ರನ್ಗಳಿಸಿ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಸೈಕಾ ಇಶಾಕ್ 4 ಓವರ್ಗಳಲ್ಲಿ 22 ರನ್ ನೀಡಿ 3 ವಿಕೆಟ್ ಕಬಳಿಸಿದರು.
127 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಿದರೂ, ಶಫಾಲಿ ವರ್ಮಾ (6) ಬೇಗನೆ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಸ್ಮತಿ ಹಾಗೂ ಜೆಮಿಮಾ 2ನೇ ವಿಕೆಟ್ಗೆ 57 ರನ್ಗಳ ಜೊತೆಯಾಟವಾಡಿದರು.
ಅರ್ಧಶತಕದ ಜೊತೆಯಾಟದ ಬೆನ್ನಲ್ಲೇ ಜೆಮಿಮಾ ರೊಡಿಗ್ರಾಸ್ (29) ಎಲ್ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಇದರ ಬೆನ್ನಲ್ಲೇ 48 ರನ್ ಬಾರಿಸಿದ ಸ್ಮೃತಿ ಮಂಧಾನ ಕೂಡ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 19 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 127 ರನ್ ಬಾರಿಸುವ ಮೂಲಕ ಐದು ವಿಕೆಟ್ಗಳ ಜಯ ಸಾಧಿಸಿತು. ಈ ಸೋಲಿನ ಹೊರತಾಗಿಯೂ ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ ಇಂಗ್ಲೆಂಡ್ ತಂಡವು 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ದೀಪ್ತಿ ಶರ್ಮಾ , ರಿಚಾ ಘೋಷ್ (ವಿಕೆಟ್ ಕೀಪರ್) , ಶ್ರೇಯಾಂಕಾ ಪಾಟೀಲ್ , ಟೈಟಾಸ್ ಸಾಧು , ಸೈಕಾ ಇಶಾಕ್ , ಅಮನ್ಜೋತ್ ಕೌರ್ , ರೇಣುಕಾ ಠಾಕೂರ್ ಸಿಂಗ್.
ಇದನ್ನೂ ಓದಿ: RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್: ಸೋಫಿಯಾ ಡಂಕ್ಲಿ , ಮಾಯಾ ಬೌಚಿಯರ್ , ಆಲಿಸ್ ಕ್ಯಾಪ್ಸೆ , ಆಮಿ ಜೋನ್ಸ್ (ವಿಕೆಟ್ ಕೀಪರ್) , ಹೀದರ್ ನೈಟ್ (ನಾಯಕಿ) ಡೇನಿಯಲ್ ಗಿಬ್ಸನ್ , ಬೆಸ್ ಹೀತ್ , ಫ್ರೇಯಾ ಕೆಂಪ್ , ಸೋಫಿ ಎಕ್ಲೆಸ್ಟೋನ್ , ಷಾರ್ಲೆಟ್ ಡೀನ್ , ಮಹಿಕಾ ಗೌರ್.